ಯಾವುದೇ ಒಪ್ಪಂದದಲ್ಲೂ ರೈತರು, ಮೀನುಗಾರರ ಹಿತಾಸಕ್ತಿ ಬಲಿಕೊಡೋದಿಲ್ಲ: ಸಚಿವ ಪೀಯೂಶ್ ಗೋಯಲ್

Piyush Goyal defends new GST: ಯಾವುದೇ ಒಪ್ಪಂದ ಮಾಡಿಕೊಳ್ಳುವಾಗ ದೇಶ, ಹಾಗೂ ರೈತರು, ಸಣ್ಣ ಉದ್ದಿಮೆಗಳು, ಮೀನುಗಾರರ ಹಿತಾಸಕ್ತಿ ಬಲಿಕೊಡುವುದಿಲ್ಲ ಎಂದು ಪೀಯೂಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ಪುನಾರಂಭಗೊಂಡ ಹಿನ್ನೆಲೆಯಲ್ಲಿ ಗೋಯಲ್ ಈ ಮಾತಾಡಿದ್ದಾರೆ. ಸರ್ಕಾರ ತರುತ್ತಿರುವ ನೂತನ ಜಿಎಸ್​ಟಿ ಬಗ್ಗೆ ವಿಪಕ್ಷಗಳ ಟೀಕೆಯನ್ನೂ ವಾಣಿಜ್ಯ ಸಚಿವರು ಅಲ್ಲಗಳೆದಿದ್ದಾರೆ.

ಯಾವುದೇ ಒಪ್ಪಂದದಲ್ಲೂ ರೈತರು, ಮೀನುಗಾರರ ಹಿತಾಸಕ್ತಿ ಬಲಿಕೊಡೋದಿಲ್ಲ: ಸಚಿವ ಪೀಯೂಶ್ ಗೋಯಲ್
ಪಿಯೂಶ್ ಗೋಯಲ್

Updated on: Sep 05, 2025 | 12:42 PM

ನವದೆಹಲಿ, ಸೆಪ್ಟೆಂಬರ್ 5: ದೇಶದ ಹಿತಾಸಕ್ತಿಗೆ ಧಕ್ಕೆ ತರುವಂತಹ, ಹಾಗೂ ಮೀನುಗಾರರು, ರೈತರು, ಸಣ್ಣ ಉದ್ದಿಮೆಗಳು, ಧಾರ್ಮಿಕತೆಗೆ ಘಾಸಿ ಮಾಡುವಂತಹ ಯಾವುದೇ ವಿಚಾರದಲ್ಲೂ ಭಾರತ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡಿದ ಗೋಯಲ್, ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ (India-US trade deal) ಸರ್ಕಾರದ ನಿಲುವಿನ ಬಗ್ಗೆ ಇರುವ ಕೆಲ ಸಂದೇಹಗಳನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ.

ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಉಮೇದಿನಲ್ಲಿ ಅದರ ಎಲ್ಲಾ ಬೇಡಿಕೆಗಳಿಗೆ ಭಾರತ ಮಣಿಯಬಹುದು ಎಂದು ಕೆಲವರು ಆತಂಕ ತೋಡಿಕೊಂಡಿರುವ ಹಿನ್ನೆಲೆಯಲ್ಲಿ ಪೀಯೂಶ್ ಗೋಯಲ್ ಈ ಸ್ಪಷ್ಟತೆ ಕೊಟ್ಟಿದ್ದಾರೆ.

‘ಯಾವುದೇ ಒಪ್ಪಂದ ಅಂತಿಮಗೊಳಿಸುವ ಮುನ್ನ, ಅದು ರಾಷ್ಟ್ರದ ಹಿತಾಸಕ್ತಿ, ರೈತರು, ಮೀನುಗಾರರು, ಎಂಎಸ್​ಎಂಇ ಉದ್ಯಮ, ಅಥವಾ ಧಾರ್ಮಿಕ ಭಾವನೆ, ಹೀಗೆ ಯಾವುದಕ್ಕಾದರೂ ಧಕ್ಕೆ ತರುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಗುವುದು’ ಎಂದು ಪಿಯೂಶ್ ಗೋಯಲ್ ತಿಳಿಸಿದ್ದಾರೆ.

ಇದನ್ನೂ ಓದಿ: ದೊಡ್ಡ ವಾಹನಗಳಿಗೆ ಟ್ಯಾಕ್ಸ್ ಶೇ. 40ಕ್ಕೆ ಹೆಚ್ಚಾದರೂ ಬೆಲೆಯಲ್ಲಿ ಇಳಿಕೆ; ಹೇಗಿದೆ ವಾಹನಗಳ ಮೇಲೆ ಹೊಸ ಜಿಎಸ್​ಟಿ ದರ?

ಅಮೆರಿಕದಲ್ಲಿ ಹಸುಗಳಿಗೆ ಮಾಂಸ ಬೆರೆತ ಆಹಾರವನ್ನು ತಿನಿಸುವ ಅಭ್ಯಾಸ ಇದೆ. ಭಾರತದಲ್ಲಿ ಹಸುಗಳಿಗೆ ಯಾರೂ ಕೂಡ ರಕ್ತ, ಮಾಂಸಪೂರಿತ ಆಹಾರ ಕೊಡೋದಿಲ್ಲ. ಅದು ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥದ್ದು. ಹೀಗಾಗಿ, ಅಮೆರಿಕದಿಂದ ಡೈರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಅನೇಕ ಭಾರತೀಯರು ಆಕ್ಷೇಪಿಸುತ್ತಿದ್ದಾರೆ.

ಜಿಎಸ್​ಟಿ ತೆರಿಗೆ: ವಿಪಕ್ಷಗಳ ಟೀಕೆಯನ್ನು ಅಲ್ಲಗಳೆದ ಗೋಯಲ್

ಇದೇ ವೇಳೆ, ಎಎನ್​ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಪೀಯೂಶ್ ಗೋಯಲ್, ಸರ್ಕಾರ ಜಾರಿಗೆ ತರಲಿರುವ ನೂತನ ಜಿಎಸ್​ಟಿ ತೆರಿಗೆ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಜಿಎಸ್​ಟಿಯನ್ನು ಗಬ್ಬರ್ ಟ್ಯಾಕ್ಸ್ ಎಂದು ವಿಪಕ್ಷಗಳ ಟೀಕೆಯನ್ನು ಅಲ್ಲಗಳೆದಿದ್ದಾರೆ.

ಇದನ್ನೂ ಓದಿ: ಸೆ. 22ರಿಂದ ಇನ್ಷೂರೆನ್ಸ್​ಗೆ ಜಿಎಸ್​ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?

‘ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಜಿಎಸ್​ಟಿಯನ್ನು ಒಂದು ಯಶಸ್ವಿ ವ್ಯವಸ್ಥೆಯಾಗಿ ರೂಪುಗೊಳ್ಳಲು ಕಳೆದ 8 ವರ್ಷದಲ್ಲಿ ಹೇಗೆ ಹಂತ ಹಂತವಾಗಿ ಕ್ರಮ ತೆಗೆದುಕೊಂಡು ಬಂದಿದ್ದಾರೆ ಎಂಬುದನ್ನು ಇಡೀ ಜಗತ್ತೇ ನೋಡಿದೆ. ಆದರೆ, ಇದು ವಿಪಕ್ಷಗಳ ಅರಿವಿಗೆ ಬಾರದೇ ಹೋಗಿದೆ’ ಎಂದು ಪೀಯೂಶ್ ಗೋಯಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ