ಅಮೆರಿಕದ ಟ್ಯಾರಿಫ್ ಎದುರಿಸಲು ಸರ್ಕಾರದಿಂದ 4 ಸ್ಕೀಮ್ಗಳ ಪ್ಯಾಕೇಜ್ ಬಿಡುಗಡೆ ಸಾಧ್ಯತೆ
Government plans for package of 4 schemes: ಅಮೆರಿಕ ವಿಧಿಸಿರುವ ಶೇ. 50 ಟ್ಯಾರಿಫ್ನಿಂದ ಭಾರತದ ಹಲವು ಉದ್ದಿಮೆಗಳಿಗೆ ಸಂಕಷ್ಟದ ಸ್ಥಿತಿ ಎದುರಾಗುವ ಸಂಭವ ಇದೆ. ಈ ಸಂಕಷ್ಟ ಪರಿಸ್ಥಿತಿಗೆ ಈ ಉದ್ದಿಮೆಗಳು ಎದುರಿಸುವಂತೆ ಬೆಂಬಲವಾಗಿ ಸರ್ಕಾರ 4 ಸ್ಕೀಮ್ ಹೊರತರುವ ಯೋಜನೆಯಲ್ಲಿದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರವು ಉದ್ಯಮಗಳಿಗೆ ಬೆಂಬಲವಾಗಿ ಬಿಡುಗಡೆ ಮಾಡಿದ ನೆರವಿನ ಪ್ಯಾಕೇಜ್ ರೀತಿಯಲ್ಲಿ ಈ ಸ್ಕೀಮ್ಗಳು ಇರಲಿವೆ.

ನವದೆಹಲಿ, ಸೆಪ್ಟೆಂಬರ್ 3: ಭಾರತದ ಮೇಲೆ ಅಮೆರಿಕ ವಿಧಿಸಿರುವ ಶೇ. 50ರಷ್ಟು ಟ್ಯಾರಿಫ್ನಿಂದ (US tariffs) ಕೆಲ ಸೆಕ್ಟರ್ಗಳಿಗೆ ಘಾಸಿಯಾಗುವ ನಿರೀಕ್ಷೆ ಇದೆ. ಈ ಉದ್ಯಮಗಳು ನಲುಗಿ ಹೋಗದಂತೆ ಮುನ್ನೆಚ್ಚರಿಕೆಯಾಗಿ ಸರ್ಕಾರವು ವಿವಿಧ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಮಾರುಕಟ್ಟೆ ವಿಸ್ತರಣೆ ಇತ್ಯಾದಿ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಸರ್ಕಾರವು ರಫ್ತುದಾರರಿಗೆ ಬೆಂಬಲವಾಗಿ ಸಮಗ್ರ ಪ್ಯಾಕೇಜ್ ಬಿಡುಗಡೆ ಮಾಡುವ ಚಿಂತನೆಯಲ್ಲಿದೆ. ಕೇಂದ್ರ ಸಂಪುಟದ (union cabinet) ಮುಂದೆ ಇಂಥದ್ದೊಂದು ಪ್ರಸ್ತಾಪ ಇದ್ದು, ಸದ್ಯದಲ್ಲೇ ತೀರ್ಮಾನ ಆಗುವ ಸಂಭವ ಇದೆ.
ಏನಿದು ಪ್ಯಾಕೇಜ್?
ಅಮೆರಿಕಕ್ಕೆ ಹೆಚ್ಚು ರಫ್ತು ಮಾಡುವ ಉದ್ಯಮಗಳಿಗೆ ಆಗಬಹುದಾದ ಸಂಭವನೀಯ ಹಾನಿಯನ್ನು ಸಹಿಸಿಕೊಳ್ಳುವಂತೆ ವಿವಿಧ ಸ್ಕೀಮ್ಗಳ ಮೂಲಕ ಶಕ್ತಿ ತುಂಬುವ ಆಲೋಚನೆ ಸರ್ಕಾರದ್ದಾಗಿದೆ.
ಜವಳಿ, ಉಡುಗೆ, ಹರಳು, ಆಭರಣ, ಲೆದರ್, ಪಾದರಕ್ಷೆ, ಎಂಜಿನಿಯರಿಂಗ್ ಸರಕು, ಕೃಷಿ, ಸಮುದ್ರ ಆಹಾರ ಇತ್ಯಾದಿ ರಫ್ತು ಅವಲಂಬಿತವಾದ ಹಾಗೂ ಅಧಿಕ ಕಾರ್ಮಿಕರ ಅಗತ್ಯ ಇರುವ ಸೆಕ್ಟರ್ಗಳಲ್ಲಿ ಸಣ್ಣ ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಕೋವಿಡ್ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಪರಿಹಾರ ಪ್ಯಾಕೇಜ್ಗಳ ಮಾದರಿಯಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬಹುದು.
ಇದನ್ನೂ ಓದಿ: ವಿಶ್ವಕ್ಕೆ ಫ್ಯಾಕ್ಟರಿಯಾಗಲು ಭಾರತಕ್ಕೆ ಅಪೂರ್ವ ಅವಕಾಶ; ಆದರೆ, ಚೀನಾ ವಿಚಾರದಲ್ಲಿ ಈ ತಪ್ಪು ಬೇಡ ಎಂದ ಜಾನ್ಸನ್
ಅಂದರೆ, ಕ್ರೆಡಿಟ್ ಗ್ಯಾರಂಟಿ ಸ್ಕೀಮ್ಗಳ ರೀತಿಯಲ್ಲಿ ಪ್ಯಾಕೇಜ್ ಇರಬಹುದು ಎಂದು ನಿರೀಕ್ಷಿಸಬಹುದು ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಬಂದ ವರದಿಯಲ್ಲಿ ಸುಳಿವು ನೀಡಲಾಗಿದೆ. ಅಂದರೆ, ಅನಿಶ್ಚಿತ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಅಸ್ತಿತ್ವ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುವಂತೆ ಸುಲಭ ಸಾಲ ನೀಡುವುದು ಇತ್ಯಾದಿ ಉದ್ದೇಶವು ಸರ್ಕಾರಕ್ಕಿದೆ.
ವರದಿ ಪ್ರಕಾರ, ನಾಲ್ಕು ಸ್ಕೀಮ್ಗಳಿರುವ ನೆರವಿನ ಪ್ಯಾಕೇಜ್ ಅನ್ನು ಸರ್ಕಾರ ಅವಲೋಕಿಸುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳೇನು?
ಕೋವಿಡ್ ಬಿಕ್ಕಟ್ಟು ಶುರುವಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದಾಗ ಸರ್ಕಾರವು ವಿವಿಧ ಉದ್ದಿಮೆಗಳನ್ನು ಸಂಕಷ್ಟದಿಂದ ತಪ್ಪಿಸಲು 2020ರ ಮೇ ತಿಂಗಳಲ್ಲಿ ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 3 ಲಕ್ಷ ಕೋಟಿ ರೂ ಮೊತ್ತದ ತುರ್ತು ಸಾಲ ಖಾತ್ರಿ ಸ್ಕೀಮ್ (ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್) ಪ್ರಮುಖವಾಗಿತ್ತು. ಸಣ್ಣ ಉದ್ದಿಮೆಗಳು ಅಡಮಾನರಹಿತವಾಗಿ ಸಾಲ ಪಡೆಯುವ ಅವಕಾಶ ಕೊಡಲಾಗಿತ್ತು.
ಇದನ್ನೂ ಓದಿ: ಅಮೆರಿಕದಿಂದ ಭಾರತಕ್ಕೆ ಜಾಸ್ತಿ ಲಾಭವಾ? ಭಾರತದಿಂದ ಅಮೆರಿಕಕ್ಕೆ ಹೆಚ್ಚು ಲಾಭವಾ? ಇಲ್ಲಿದೆ ಕಣ್ಣಿಗೆ ಕಾಣದ ಸತ್ಯ
ಇದಲ್ಲದೇ, ನಷ್ಟದ ಎಂಎಸ್ಎಂಇಗಳಿಗೆ 20,000 ಕೋಟಿ ರೂ ಉಪಸಾಲ ಯೋಜನೆ; ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ಗೆ 4,000 ಕೋಟಿ ರೂ; ಫಂಡ್ ಆಫ್ ಫಂಡ್ಸ್ ಆಗಿ 10,000 ಕೋಟಿ ರೂ ಹೀಗೇ ವಿವಿಧ ಸ್ಕೀಮ್ಗಳಿರುವ ಪ್ಯಾಕೇಜ್ ಅನ್ನು ಕೋವಿಡ್ ಸಂದರ್ಭದಲ್ಲಿ ಸರ್ಕಾರ ಬಿಡುಗಡೆ ಮಾಡಿತ್ತು. ಕೋವಿಡ್ನಿಂದ ನೆಲಕಚ್ಚುತ್ತಿದ್ದ ಅನೇಕ ಉದ್ದಿಮೆಗಳು ಉಸಿರು ಹಿಡಿದುಕೊಂಡು ನಿಲ್ಲಲು ಸಾಧ್ಯವಾಗಿತ್ತು.
ಈಗ ಅಮೆರಿಕದ ಟ್ಯಾರಿಫ್ ಸಂಕಷ್ಟವನ್ನು ಎದುರಿಸಲು ಅದೇ ರೀತಿಯ ಉತ್ತೇಜಕಗಳನ್ನು ಬಳಸಲು ಸರ್ಕಾರ ನಿರ್ಧರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




