ನವದೆಹಲಿ, ಸೆಪ್ಟೆಂಬರ್ 13: ದೇಶದ ಅತಿದೊಡ್ಡ ಐಟಿ ಸರ್ವಿಸ್ ಸಂಸ್ಥೆ ಎನಿಸಿದ ಟಿಸಿಎಸ್ನ ಸಾವಿರಾರು ಉದ್ಯೋಗಿಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಬಂದಿದೆ. ಇಲ್ಲಿ ಉದ್ಯೋಗಿಗಳಿಂದ ತಪ್ಪಾಗಿಲ್ಲ. ಇಲಾಖೆಯ ಸಾಫ್ಟ್ವೇರ್ ದೋಷದ ಪರಿಣಾಮ ಇದು ಎನ್ನಲಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಗೆ ಸೇರಿದ 30 ಸಾವಿರದಿಂದ 40 ಸಾವಿರ ಮಂದಿ ಉದ್ಯೋಗಿಗಳಿಗೆ ಐಟಿ ನೋಟೀಸ್ ಸಲ್ಲಿಕೆ ಆಗಿದೆ. 50,000 ರೂನಿಂದ 1,00,000 ರೂವರೆಗೆ ಹಣಕ್ಕೆ ಟ್ಯಾಕ್ಸ್ ಡಿಮ್ಯಾಂಡ್ ಮಾಡಲಾಗಿರುವುದು ತಿಳಿದುಬಂದಿದೆ.
ಆದಾಯ ತೆರಿಗೆ ಸೆಕ್ಷನ್ 143(1) ಅಡಿಯಲ್ಲಿ ಸೆಪ್ಟೆಂಬರ್ 9ರಂದು ಈ ಉದ್ಯೋಗಿಗಳಿಗೆ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಬಂದಿದೆ. 2023-24ರ ಹಣಕಾಸು ವರ್ಷದಲ್ಲಿ ಈ ಉದ್ಯೋಗಿಗಳ ಟಿಡಿಎಸ್ ಪಾವತಿ ಆಗಿರುವುದು ದಾಖಲಾಗಿಯೇ ಇಲ್ಲ. ಹೀಗಾಗಿ, ನೋಟೀಸ್ ಸಲ್ಲಿಸಲಾಗಿದೆ. ಆದರೆ, ವಾಸ್ತವದಲ್ಲಿ ತೆರಿಗೆ ಇಲಾಖೆಯ ಸಾಫ್ಟ್ವೇರ್ನಲ್ಲಿ ಇರುವ ದೋಷವು ಇದಕ್ಕೆ ಕಾರಣವಾಗಿದೆ. ಈ ಸಾಫ್ಟ್ವೇರ್ ಎರರ್ನಿಂದಾಗಿ ಆದಾಯ ತೆರಿಗೆ ಪೋರ್ಟಲ್ನಲ್ಲಿ ಟಿಡಿಎಸ್ ಕ್ಲೇಮ್ ಸರಿಯಾಗಿ ಅಪ್ಡೇಟ್ ಆಗಿಲ್ಲ ಎನ್ನಲಾಗಿದೆ.‘
ಇದನ್ನೂ ಓದಿ: ಭಾರತದಲ್ಲಿ ಫ್ಯಾಕ್ಟರಿ ಮಾಡಿ, ಆದ್ರೆ ಟೆಕ್ನಾಲಜಿ ಬಿಟ್ಟುಕೊಡಬೇಡಿ: ಚೀನೀ ಇವಿ ಕಂಪನಿಗಳಿಗೆ ಗೈಡ್ಲೈನ್ಸ್
ಉದ್ಯೋಗಿಗಳಿಗೆ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಬಂದಿರುವ ವಿಚಾರ ಟಿಸಿಎಸ್ ಮ್ಯಾನೇಜ್ಮೆಂಟ್ ಗಮನಕ್ಕೆ ಬಂದಿದೆ. ಈ ವಿಚಾರದ ಬಗ್ಗೆ ಆದಾಯ ತೆರಿಗೆ ಇಲಾಖೆ ಜೊತೆ ಸಂಪರ್ಕದಲ್ಲಿದ್ದು, ಸಾಫ್ಟ್ವೇರ್ ದೋಷದ ಸಮಸ್ಯೆ ನಿವಾರಣೆಗೆ ಪ್ರಯತ್ನ ನಡೆಸುತ್ತಿದೆ. ಟಿಸಿಎಸ್ ಉದ್ಯೋಗಿಗಳ ಟ್ಯಾಕ್ಸ್ ರಿಟರ್ನ್ಸ್ ಅನ್ನು ತೆರಿಗೆ ಇಲಾಖೆ ವತಿಯಿಂದ ರೀಪ್ರೋಸಸಿಂಗ್ ಆಗಲಿದೆ. ನಂತರ 26ಎಎಸ್ ಫಾರ್ಮ್ ಮತ್ತು 16ಎ ಫಾರ್ಮ್ಗೆ ಟಿಡಿಎಸ್ ಮಾಹಿತಿ ತಾಳೆಯಾಗಲಿದೆ. ಇದೇ ವೇಳೆ, ಮುಂದಿನ ಸೂಚನೆ ಬರುವವರೆಗೂ ಯಾರೂ ಕೂಡ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ಗೆ ಸ್ಪಂದಿಸಬಾರದು ಎಂದೂ ಟಿಸಿಎಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಸೂಚನೆ ಕೊಟ್ಟಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಅತಿಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿರುವ ಭಾರತದ ಐಟಿ ಕಂಪನಿಯಾಗಿದೆ. 2024-25ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಉದ್ಯೋಗಿಗಳ ಸಂಖ್ಯೆ 5,452 ದಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಸಂಸ್ಥೆಯ ಒಟ್ಟು ಉದ್ಯೋಗಿಗಳ ಸಂಖ್ಯೆ 6,06,998 ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ