ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ (Pakistan) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು (Petrol and Diesel Prices) ಭರ್ಜರಿಯಾಗಿ ಇಳಿಸಿದೆ. ಜನಸಾಮಾನ್ಯರಿಗೆ ಬಹಳ ಅಗತ್ಯವಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್ಗೆ ಬರೋಬ್ಬರಿ 30 ರುಪಾಯಿಯಷ್ಟು ಇಳಿಕೆ ಮಾಡಲಾಗಿದೆ. ಮೇ 16, ಅಂದರೆ ಇಂದು ಮಂಗಳವಾರದಿಂದಲೇ ಹೊಸ ಬೆಲೆಗಳು ಅನ್ವಯ ಆಗಲಿದೆ. ಅಂತರರಾಷ್ಟ್ರೀಯವಾಗಿ ತೈಲ ಬೆಲೆಗಳು ಸತತವಾಗಿ ಇಳಿಕೆ ಆಗುತ್ತಿರುವುದರಿಂದ, ಈ ಬೆಲೆ ಇಳಿಕೆ ಲಾಭ ಸಾಮಾನ್ಯ ಜನರಿಗೂ ಆಗಲಿ ಎಂದು ಪೆಟ್ರೋಲ್ ಬೆಲೆ ಇಳಿಸುತ್ತಿದ್ದೇವೆ ಎಂದು ಶಹಾಬಾಜ್ ಷರೀಫ್ ನೇತೃತ್ವದ ಅಲ್ಲಿನ ಸರ್ಕಾರ ಹೇಳಿದೆ.
ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು 12 ರೂನಷ್ಟು ಇಳಿಸಲಾಗಿದೆ. ಸೀಮೆ ಎಣ್ಣೆ ಮತ್ತು ಲೈಟ್ ಡೀಸೆಲ್ ಆಯಿಲ್ಗಳ ಬೆಲೆಯನ್ನೂ 12 ರೂನಷ್ಟು ಕಡಿಮೆ ಮಾಡಲಾಗಿದೆ. ಆದರೆ, ಹೈಸ್ಪೀಡ್ ಡೀಸೆಲ್ನ ದರಗಳನ್ನು ಲೀಟರ್ಗೆ 30 ರುಪಾಯಿಯಷ್ಟು ತಗ್ಗಿಸಲಾಗಿದೆ.
ಇದನ್ನೂ ಓದಿ: ನಾನು ದೇಶ ಪ್ರತಿನಿಧಿಸುವಾಗ ನೀನು ಹುಟ್ಟಿರಲೇ ಇಲ್ಲ: ಪಾಕ್ ಸೇನಾಧಿಕಾರಿ ಮೇಲೆ ಗುಡುಗಿದ ಇಮ್ರಾನ್ ಖಾನ್
ಸಾಲದ ಬಾಧೆಯಿಂದ ಪರಿತಪಿಸುತ್ತಿರುವ ಪಾಕಿಸ್ತಾನ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಪಾಕಿಸ್ತಾನಕ್ಕೆ ಸಾಲ ನೀಡಬೇಕೆಂದಿರುವ ಐಎಂಎಫ್ ಇಂಥ ಸಬ್ಸಿಡಿಗಳನ್ನು ವಿರೋಧಿಸುತ್ತದೆ. ಆದಾಯ ತಪ್ಪುವಂತಹ ನೀತಿಗಳನ್ನು ಸರ್ಕಾರ ಕೈಗೊಳ್ಳಬಾರದು ಎಂಬುದು ಐಎಂಎಫ್ ಪರೋಕ್ಷವಾಗಿ ಹಾಕಿರುವ ಷರುತ್ತುಗಳು. ಆದರೂ ಪಾಕಿಸ್ತಾನ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ಧೈರ್ಯ ತೋರಿದೆ.
ಮೇ ತಿಂಗಳ ಆರಂಭದಲ್ಲಿ ಪಾಕಿಸ್ತಾನ ಸರ್ಕಾರ ವಿವಿಧ ಪೆಟ್ರೋಲ್ ಬೆಲೆ ಇಳಿಸಿತ್ತು. ಈಗ 30 ರೂ ಇಳಿದಿರುವ ಹೈ ಸ್ಪೀಡ್ ಡೀಸೆಲ್ ಬೆಲೆ ಈ ಹಿಂದೆ 5 ರೂನಷ್ಟು ಇಳಿಕೆಯಾಗಿತ್ತು. ಲೈಟ್ ಡೀಸೆಲ್ ಆಯಿಲ್ ಮತ್ತು ಕೆರೋಸಿನ್ (ಸೀಮೆ ಎಣ್ಣೆ) ಬೆಲೆ ಲೀಟರ್ಗೆ 10 ರೂನಷ್ಟು ಕಡಿಮೆ ಆಗಿದ್ದವು. ಇದರ ಬೆನ್ನಲ್ಲೇ ಅಲ್ಲಿ ಸರ್ಕಾರ ಇನ್ನೊಂದು ಸುತ್ತು ಬೆಲೆ ಇಳಿಕೆ ಮಾಡಿದೆ.
ಇದನ್ನೂ ಓದಿ: PVR Inox: 50 ಸಿನಿಮಾ ಹಾಲ್ ಮುಚ್ಚಲಿರುವ ಪಿವಿಆರ್ ಐನಾಕ್ಸ್; ಭಾರೀ ನಷ್ಟ ಕಾರಣ- ಹಿಂದಿ ಚಿತ್ರಗಳನ್ನು ನೋಡೋರಿಲ್ಲವಾ?
ಪೆಟ್ರೋಲ್ 1 ಲೀಟರ್ಗೆ 270 ರೂ
ಹೈಸ್ಪೀಡ್ ಡೀಸೆಲ್ 1 ಲೀಟರ್ಗೆ 258 ರೂ
ಸೀಮೆ ಎಣ್ಣೆ 1 ಲೀಟರ್ಗೆ 164.07 ರೂ
ಲೈಟ್ ಡೀಸೆಲ್ ಆಯಿಲ್ 1 ಲೀಟರ್ಗೆ 152.65 ರೂ
ಇಲ್ಲಿ ಮೇಲೆ ತಿಳಿಸಿರುವ ದರ ಪಾಕಿಸ್ತಾನೀ ರುಪಾಯಿ ಕರೆನ್ಸಿಯದ್ದು. ಭಾರತದ ರುಪಾಯಿ ಕರೆನ್ಸಿಯಲ್ಲಿ ಬೆಲೆ ನೋಡುವುದಾದರೆ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 77.97 ರುಪಾಯಿ ಆಗುತ್ತದೆ. ಒಂದು ಯುಎಸ್ ಡಾಲರ್ಗೆ 82.21 ಭಾರತೀಯ ರುಪಾಯಿಯಷ್ಟು ಬೆಲೆ ಇದೆ. ಹಾಗೆಯೇ, 284.70 ಪಾಕಿಸ್ತಾನೀ ರುಪಾಯಿ ಆಗುತ್ತದೆ. ಒಂದು ಭಾರತೀಯ ರುಪಾಯಿಯು 3.46 ಪಾಕಿಸ್ತಾನೀ ರುಪಾಯಿಗೆ ಸಮವಾಗಿದೆ.