ಪಾಕಿಸ್ತಾನಕ್ಕೆ ಬೆಟ್ಟದಷ್ಟು ಸಾಲ; ಬೆಟ್ಟದಷ್ಟು ಕನಸು; ವಿಶ್ವದ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಗುರಿ

ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಸಾಲಿನಲ್ಲಿ 42ನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕೆ ಮುಂದಿನ ಎರಡು ದಶಕದಲ್ಲಿ 6ನೇ ಸ್ಥಾನಕ್ಕೇರುವ ಕನಸಿದೆ. ಗೋಲ್ಡ್​ಮನ್ ಸ್ಯಾಕ್ಸ್​ನ ಅಧ್ಯಯನ ವರದಿ ಪ್ರಕಾರ 2075ರಲ್ಲಿ ಪಾಕಿಸ್ತಾನ 6ನೇ ಸ್ಥಾನಕ್ಕೆ ಏರಬಹುದು ಎನ್ನಲಾಗಿದೆ. ಆದರೆ, ಪಾಕಿಸ್ತಾನದ ಪ್ರಧಾನಿ ಶಾಹಬಾಜ್ ಶರೀಫ್ ಅವರು 2050ರೊಳಗೆಯೇ ಆ ಕನಸನ್ನು ನನಸು ಮಾಡಲು ಸಾಧ್ಯ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಬೆಟ್ಟದಷ್ಟು ಸಾಲ; ಬೆಟ್ಟದಷ್ಟು ಕನಸು; ವಿಶ್ವದ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಗುರಿ
ಪಾಕಿಸ್ತಾನ
Image Credit source: Getty Images

Updated on: Nov 15, 2026 | 6:17 PM

ನವದೆಹಲಿ, ನವೆಂಬರ್ 15: ಪಾಕಿಸ್ತಾನ ವಿಶ್ವದ ಶಕ್ತಿಶಾಲಿ ಆರ್ಥಿಕತೆಯಾಗುವ ಗುರಿಯನ್ನು ನಿರೀಕ್ಷೆಮೀರಿದಷ್ಟು ಕಡಿಮೆ ಅವಧಿಯಲ್ಲಿ ಸಾಧಿಸುವ ಅವಕಾಶ ಇದೆ ಎಂದು ಆ ದೇಶದ ಪ್ರಧಾನಿ ಶಾಹಾಬಾಜ್ ಶರೀಫ್ ಹೇಳಿದ್ದಾರೆ. 2075ರೊಳಗೆ ಪಾಕಿಸ್ತಾನವು ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಗೋಲ್ಡ್​ಮನ್ ಸ್ಯಾಕ್ಸ್ ತನ್ನ ವರದಿಯೊಂದರಲ್ಲಿ ಅವಲೋಕಿಸಿತ್ತು. ಅದನ್ನು ಉಲ್ಲೇಖಿಸಿ ಪಾಕಿಸ್ತಾನ ಪ್ರಧಾನಿಗಳು ಇನ್ನೂ ಬೇಗನೇ ಪಾಕಿಸ್ತಾನ ಆ ಗುರಿ ಮುಟ್ಟಬಲ್ಲುದು ಎಂದಿದ್ದಾರೆ.

ಮೊನ್ನೆ ಇಸ್ಲಾಮಾಬಾದ್​ನಲ್ಲಿ ನಡೆದ ಪಾಕಿಸ್ತಾನ್ ಮಿನರಲ್ಸ್ ಇನ್ವೆಸ್ಟ್​ಮೆಂಟ್ ಫೋರಂ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶಾಹಾಬಾಜ್ ಶರೀಫ್, ಗೋಲ್ಡ್​ಮ್ಯಾನ್ ಸ್ಯಾಕ್ಸ್ ತಿಳಿಸಿರುವ ಭವಿಷ್ಯ 2075 ಅಲ್ಲ, 2050ರೊಳಗೆಯೇ ಸಾಕಾರವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Loading...

‘ಗೋಲ್ಡ್​ಮ್ಯಾನ್ ಸ್ಯಾಕ್ಸ್ ಮಾಡಿರುವ ಅಂದಾಜಿನಲ್ಲಿ ಒಂದು ಸಣ್ಣ ಬದಲಾವಣೆ ಮಾಡಬಯಸುತ್ತೇನೆ. 2075ರ ಬದಲು ಪಾಕಿಸ್ತಾನವು 2050ರೊಳಗೆಯೇ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿ ಬೆಳೆಯಲಿದೆ’ ಎಂದು ತಿಳಿಸಿದ್ದಾರೆ.

ಸಾಲದ ಹೊರೆಯಲ್ಲಿರುವ ಪಾಕಿಸ್ತಾನದ ಆರ್ಥಿಕತೆ…

ಪಾಕಿಸ್ತಾನದ ಜಿಡಿಪಿ ಸುಮಾರು 450 ಬಿಲಿಯನ್ ಡಾಲರ್​ನಷ್ಟು ಇದೆ. ಅದರ ಆರ್ಥಿಕತೆ ಬೆಳವಣಿಗೆಯ ವೇಗ ಶೇ. 2-4ರ ಶ್ರೇಣಿಯಲ್ಲಿದೆ. ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಪಾಕಿಸ್ತಾನ ಸದ್ಯ 42ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ರೋಗಿ ಬಯಸಿದ್ದೂ ಅದೇ, ವೈದ್ಯ ಕೊಟ್ಟಿದ್ದೂ ಅದೇ… ಜೊತೆಗೆ ಬಂತು ದೊಡ್ಡ ಗಿಫ್ಟ್; ಇದು ಕೆಲಸ ಕಳೆದುಕೊಂಡವನ ಖುಷಿ ಕಥೆ

ಪಾಕಿಸ್ತಾನ ಹೊಂದಿರುವ ಸಾಲ ಸುಮಾರು 300 ಬಿಲಿಯನ್ ಡಾಲರ್ ಆಸುಪಾಸಿನಷ್ಟಿದೆ. ಜಿಡಿಪಿ ಮತ್ತು ಸಾಲ ಅನುಪಾತ ಶೇ. 70ರಷ್ಟಿದೆ. ಅದರ ಸಾಲಗಳಿಗೆ ಬಡ್ಡಿ ಕಟ್ಟಲು ಐಎಂಎಫ್ ಹಣದ ಮೇಲೆ ಪಾಕಿಸ್ತಾನ ಅವಲಂಬಿತವಾಗಿದೆ. ಆದರೂ ಕೂಡ ಗೋಲ್ಡ್​ಮ್ಯಾನ್ ಸ್ಯಾಕ್ಸ್ ವರದಿ ಪಾಕಿಸ್ತಾನದ ವಿಚಾರದಲ್ಲಿ ಹೆಚ್ಚು ಆಶಾದಾಯಕವಾಗಿದೆ. 2075ಕ್ಕೆ ಅದರ ಜಿಡಿಪಿ 12.7 ಟ್ರಿಲಿಯನ್ ಡಾಲರ್ ಗಾತ್ರವಿರುತ್ತದೆ ಎಂದು ನಿರೀಕ್ಷಿಸಿದೆ.

ಪಾಕಿಸ್ತಾನಕ್ಕೆ ಇರುವ ಅನುಕೂಲಗಳೇನು?

ಪಾಕಿಸ್ತಾನದಲ್ಲಿ ಯುವಜನರ ಸಂಖ್ಯೆ ಮುಂದಿನ ದಶಕಗಳಲ್ಲಿ ಗಣನೀಯವಾಗಿ ಹೆಚ್ಚಿರುತ್ತದೆ. ಇದು ಬೇರೆ ದೇಶಗಳಿಗಿಂತ ಹೆಚ್ಚಿನ ವೇಗದ ಆರ್ಥಿಕ ಬೆಳವಣಿಗೆ ಕಾಣಲು ಅವಕಾಶ ನೀಡುತ್ತದೆ. ಹಾಗೆಯೇ, ಆಯಕಟ್ಟಿನ ಜಾಗದಲ್ಲಿರುವ ಪಾಕಿಸ್ತಾನಕ್ಕೆ ಅಮೆರಿಕದ ಕೃಪೆ ತುಸು ಹೆಚ್ಚೇ ಇರುವುದರಿಂದ ಹಣದ ಹರಿವೂ ಹೆಚ್ಚಾಗಿ ಆಗಲು ಸಾಧ್ಯವಾಗುತ್ತದೆ. ಉದ್ಯಮ ಕ್ಷೇತ್ರದಲ್ಲಿ ಅಲ್ಲಿನ ಸರ್ಕಾರ ಸುಧಾರಣೆಗಳನ್ನು ಜಾರಿಗೆ ತಂದರೆ ಬೆಳವಣಿಗೆಗೆ ವೇಗದ ಸ್ಪರ್ಶ ಸಿಕ್ಕಲು ಸಾಧ್ಯ ಎನ್ನುತ್ತಾರೆ ತಜ್ಞರು.

2075ರ ಚೀನಾ, ಭಾರತ, ಅಮೆರಿಕ ತ್ರಿಮೂರ್ತಿ ಶಕ್ತಿಗಳು

ಕೆಲ ವರ್ಷಗಳ ಹಿಂದಿನವರೆಗೂ ಈ ವಿಶ್ವದಲ್ಲಿ ಅಮೆರಿಕ ಮಾತ್ರವೇ ಏಕೈಕ ಆರ್ಥಿಕ ದೈತ್ಯ ಶಕ್ತಿಯಾಗಿತ್ತು. ಈಗ ಅಮೆರಿಕದ ಜೊತೆಗೆ ಚೀನಾ ಸೇರ್ಪಡೆಯಾಗಿದೆ. ಗೋಲ್ಡ್​ಮನ್ ಸ್ಯಾಕ್ಸ್ ನಡೆಸಿದ ಅಧ್ಯಯನದ ಪ್ರಕಾರ 2075ರಲ್ಲಿ ಚೀನಾ ಮತ್ತು ಅಮೆರಿಕದ ಜೊತೆಗೆ ಭಾರತವೂ ಜಾಗತಿಕ ದೈತ್ಯ ಶಕ್ತಿಯಾಗಲಿದೆಯಂತೆ. ಭಾರತವು ಅಮೆರಿಕವನ್ನೂ ಹಿಂದಿಕ್ಕಿ ಎರಡನೇ ಸ್ಥಾನ ಪಡೆಯಲಿದೆ. ಚೀನಾ, ಭಾರತ ಮತ್ತು ಅಮೆರಿಕದ ಆರ್ಥಿಕ ಗಾತ್ರಗಳು ಬಹುತೇಕ ಸಮಾನವಾಗಿರುತ್ತವೆ ಎಂದು ಈ ಹಣಕಾಸು ವಿಶ್ಲೇಷಣಾ ಸಂಸ್ಥೆಯ ವರದಿಯಿಂದ ತಿಳಿಯಬಹುದು.

ಇದನ್ನೂ ಓದಿ: ಆಗಸದಿಂದ ವೇಗವಾಗಿ ಬಂದ ಸ್ಟಾರ್​​ಶಿಪ್ ರಾಕೆಟ್ ಅನ್ನು ಹಿಡಿದು ಹೊಸ ಇತಿಹಾಸ ಸೃಷ್ಟಿಸಿದ ಸ್ಪೇಸ್​ಎಕ್ಸ್

ಗೋಲ್ಡ್​ಮನ್ ಸ್ಯಾಕ್ಸ್ ಪ್ರಕಾರ 2075ರಲ್ಲಿ ಟಾಪ್-10 ದೇಶಗಳು

  1. ಚೀನಾ: 57 ಟ್ರಿಲಿಯನ್ ಡಾಲರ್
  2. ಭಾರತ: 52.5 ಟ್ರಿಲಿಯನ್ ಡಾಲರ್
  3. ಅಮೆರಿಕ: 51.5 ಟ್ರಿಲಿಯನ್ ಡಾಲರ್
  4. ಇಂಡೋನೇಷ್ಯಾ: 13.7 ಟ್ರಿಲಿಯನ್ ಡಾಲರ್
  5. ನೈಜೀರಿಯಾ: 13.1 ಟ್ರಿಲಿಯನ್ ಡಾಲರ್
  6. ಪಾಕಿಸ್ತಾನ: 12.3 ಟ್ರಿಲಿಯನ್ ಡಾಲರ್
  7. ಈಜಿಪ್ಟ್: 10.4 ಟ್ರಿಲಿಯನ್ ಡಾಲರ್
  8. ಬ್ರೆಜಿಲ್: 8.7 ಟ್ರಿಲಿಯನ್ ಡಾಲರ್
  9. ಜರ್ಮನಿ: 8.1 ಟ್ರಿಲಿಯನ್ ಡಾಲರ್
  10. ಬ್ರಿಟನ್: 7.6 ಟ್ರಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us