ರೋಗಿ ಬಯಸಿದ್ದೂ ಅದೇ, ವೈದ್ಯ ಕೊಟ್ಟಿದ್ದೂ ಅದೇ… ಜೊತೆಗೆ ಬಂತು ದೊಡ್ಡ ಗಿಫ್ಟ್; ಇದು ಕೆಲಸ ಕಳೆದುಕೊಂಡವನ ಖುಷಿ ಕಥೆ
ಕ್ವಾಲ್ಕಾಮ್ ಮತ್ತೊಂದು ಸುತ್ತಿನ ಲೇ ಆಫ್ ಕ್ರಮ ತೆಗೆದುಕೊಂಡಿದೆ. ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾವೊಂದರಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಹಾಕಿದ್ದು, ತನಗೆ ಕೆಲಸ ಹೋಗಿದ್ದು ಖುಷಿಯಾಯಿತು ಎಂದಿದ್ದಾನೆ. ಕೆಲಸ ಯಾತನಾಮಯವಾಗಿತ್ತು. ಈಗ ನಿರಾಳವಾಗಿದೆ. ಜೊತೆಗೆ 15 ತಿಂಗಳ ವೇತನವೂ ಉಚಿತವಾಗಿ ಸಿಕ್ಕಿದೆ ಎಂದಿದ್ದಾನೆ.

ನವದೆಹಲಿ, ನವೆಂಬರ್ 15: ಅಮೆರಿಕದ ಚಿಪ್ ತಯಾರಕ ಕಂಪನಿಯಾದ ಕ್ವಾಲ್ಕಾಮ್ನಲ್ಲಿ (Qualcomm) ಲೇಆಫ್ ಮಾಡಲಾಗುತ್ತಿರುವ ಸುದ್ದಿ ಹಲವು ಉದ್ಯೋಗಿಗಳ ಎದೆಯನ್ನು ಡವಡವ ಮಾಡಿಸುತ್ತಿದೆ. ಹಲವರು ಈಗಾಗಲೇ ನೋಟೀಸ್ ಪಡೆದಿದ್ದಾರೆ. ಇನ್ನೂ ಕೆಲವರು, ಯಾವಾಗ ತಮಗೆ ನೋಟೀಸ್ ಬರುತ್ತೋ ಎಂದು ದಿಗಿಲುಗೊಂಡಿದ್ದಾರೆ. ಇದೇ ವೇಳೆ, ಕ್ವಾಲ್ಕಾಮ್ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ತನಗೆ ಕೆಲಸ ಹೋಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ತಾನಿರುವ ಸ್ಥಳದಲ್ಲಿ ಕೆಲಸದ ವಾತಾವರಣ ಸಹಿಸಲು ಅಸಾಧ್ಯವಿತ್ತು. ಯಾವಾಗ ಲೇ ಆಫ್ ಮಾಡುತ್ತಾರೆಂದು ಕಾಯುತ್ತಿದೆ. ಆ ದಿನ ಬಂದೇ ಬಿಟ್ಟಿತು. ತನಗೆ ಈ ಕೆಲಸದಿಂದ ಬಿಡುಗಡೆ ಸಿಕ್ಕಿದೆ. ಜೊತೆಗೆ 15 ತಿಂಗಳ ಬಿಟ್ಟಿ ಸಂಬಳದ ಹಣವೂ ದೊರಕಿದೆ ಎಂದು ಈ ವ್ಯಕ್ತಿ ರೆಡ್ಡಿಟ್ ಪೋಸ್ಟ್ವೊಂದರಲ್ಲಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ಆಗಸದಿಂದ ವೇಗವಾಗಿ ಬಂದ ಸ್ಟಾರ್ಶಿಪ್ ರಾಕೆಟ್ ಅನ್ನು ಹಿಡಿದು ಹೊಸ ಇತಿಹಾಸ ಸೃಷ್ಟಿಸಿದ ಸ್ಪೇಸ್ಎಕ್ಸ್
ಈ ಪೋಸ್ಟ್ನಲ್ಲಿ ಈತ ಹೇಳಿಕೊಂಡಿರುವ ಪ್ರಕಾರ, ಕ್ವಾಲ್ಕಾಮ್ನಲ್ಲಿ 6 ವರ್ಷ ಕೆಲಸ ಮಾಡಿರುವ ಸೀನಿಯರ್ ಎಂಜಿನಿಯರ್ ಆಗಿರುವ ಅನುಭವಿ. ಆರು ತಿಂಗಳ ಹಿಂದೆ ಸ್ವಂತ ಊರಿಗೆ ಹತ್ತಿರವಿರಬಹುದು ಎಂದು ಕಂಪನಿಯ ಬೇರೆ ಘಟಕಕ್ಕೆ ವರ್ಗಾವಣೆ ಪಡೆದುಕೊಂಡು ಹೋದರಂತೆ. ಹೊಸ ಸ್ಥಳದಲ್ಲಿ ಈತನ ಪಾಲಿಗೆ ಎಲ್ಲವೂ ಅಯೋಮಯವಾಗಿತ್ತು. ಅಸಮರ್ಥನೆಂಬ ನಿಂದನೆ ಮಾತುಗಳನ್ನು ಈತ ಬಾರಿ ಬಾರಿ ಕೇಳಬೇಕಾಯಿತು. ಈ ಕೆಲಸವೇ ಬೇಡ ಎನ್ನುವಷ್ಟು ಜಿಗುಪ್ಸೆ ಬಂದುಬಿಟ್ಟಿತಂತೆ. ಲೇ ಆಫ್ ಮಾಡುವುದಾದರೆ ತನ್ನನ್ನು ಪರಿಗಣಿಸಬೇಕು ಎಂದು ಮ್ಯಾನೇಜರ್ಗೆ ಹೇಳಿಯೂ ಇದ್ದನಂತೆ.
ರೆಡ್ಡಿಟ್ ಪೋಸ್ಟ್
Laid off – getting more than a year salary by u/Both_Tie_1924 in qualcomm
15 ತಿಂಗಳು ಬಿಟ್ಟಿ ಸಂಬಳದ ಖುಷಿ
ಕ್ವಾಲ್ಕಾಮ್ ಕಂಪನಿಯ ಸಿಇಒ ಅವರಿಂದ ಲೇ ಆಫ್ ಸೂಚನೆಯ ಸಂದೇಶ ಬಂದಿದ್ದು ಈತನಿಗೆ ಖುಷಿಕೊಟ್ಟಿತು. ಈತನ ಇಚ್ಛೆಯಂತೆ ಲೇ ಆಫ್ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾನೆ. ಲೇ ಆಫ್ ನಿಯಮಗಳ ಪ್ರಕಾರ 3 ತಿಂಗಳ ವೇತನ ನೀಡಲಾಗುತ್ತದೆ. 3 ದಿನದೊಳಗೆ ಎಕ್ಸಿಟ್ ಪೇಪರ್ಗೆ ಸಹಿ ಹಾಕಿದರೆ 1 ತಿಂಗಳ ಹೆಚ್ಚು ವೇತನ; ಸೇವಾವಧಿ ಆಧಾರದ ಮೇಲೆ 5 ತಿಂಗಳು; ಸ್ಥಳಾಂತರಗೊಂಡಿದ್ದಕ್ಕೆ 2 ತಿಂಗಳು, ಲೀವ್ ಎನ್ಕ್ಯಾಷ್ಮೆಂಟ್ನಿಂದ ಒಂದೆರಡು ತಿಂಗಳು, ಹೀಗೆ 12 ತಿಂಗಳ ವೇತನವು ತನಗೆ ಸಿಗುತ್ತದೆ. ಇದರ ಜೊತೆಗೆ, ಜನವರಿಯವರೆಗೆ ಮೂರು ತಿಂಗಳ ವೇತನವೂ ಸಿಗುತ್ತದೆ. ಎಲ್ಲವೂ ಸೇರಿ ತನಗೆ 15 ತಿಂಗಳು ಬಿಟ್ಟಿ ಸಂಬಳ ಬರುತ್ತದೆ ಎಂದು ರೆಡ್ಡಿಟ್ನಲ್ಲಿ ತಿಳಿಸಿದ್ದಾನೆ.
ಇದನ್ನೂ ಓದಿ: ವಿಶ್ವದಾದ್ಯಂತ 74ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥಗಿತಗೊಂಡ ಮೈಕ್ರೋಸಾಫ್ಟ್ 365 ಸೇವೆಗಳು: ತಾಂತ್ರಿಕ ದೋಷಕ್ಕೆ ಕಾರಣ ಇತ್ಯಾದಿ ವಿವರ
15 ತಿಂಗಳ ಹಣಕಾಸು ಬೆಂಬಲ ಹೊಂದಿರುವ ತಾನು ಸ್ವಲ್ಪ ಕಾಲ ಕುಟುಂಬ ಮತ್ತು ಸ್ನೇಹಿತರ ಜೊತೆ ಕಳೆಯುವುದಾಗಿ ಹೇಳಿದ್ದಾನೆ. ಆ ನಂತರ ಅಧ್ಯಯನಕ್ಕೆ ಇಳಿದು ಬಳಿಕ ಕೆಲಸಕ್ಕೆ ಅರ್ಜಿಗಳನ್ನು ಸಲ್ಲಿಸುತ್ತೇನೆ ಎಂದಿದ್ಧಾನೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




