AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾಲ್​ಕಾಮ್​ನಿಂದ ಲೇ ಆಫ್; ಭಾರತದಲ್ಲಿ ಸಾವಿರ ಉದ್ಯೋಗಿಗಳು ಟಾರ್ಗೆಟ್; ಬೆಂಗಳೂರಿನಲ್ಲೇ ಮೊದಲ ಸುತ್ತಿನ ಬಲಿ

ಅಮೆರಿಕದ ಟೆಕ್ನಾಲಜಿ ಕಂಪನಿ ಕ್ವಾಲ್​ಕಾಮ್ ಜಾಗತಿಕವಾಗಿ ಲೇ ಆಫ್ ಕ್ರಮ ಕೈಗೊಳ್ಳುತ್ತಿದೆ. ತನ್ನ ಆದಾಯ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ನಿರ್ಧಾರಕ್ಕೆ ಕಂಪನಿ ಬಂದಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಕ್ವಾಲ್​ಕಾಮ್​ನ ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು. ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್​ನಲ್ಲಿರುವ ತಂಡಗಳು ಬಾಧಿತಗೊಳ್ಳಲಿವೆ.

ಕ್ವಾಲ್​ಕಾಮ್​ನಿಂದ ಲೇ ಆಫ್; ಭಾರತದಲ್ಲಿ ಸಾವಿರ ಉದ್ಯೋಗಿಗಳು ಟಾರ್ಗೆಟ್; ಬೆಂಗಳೂರಿನಲ್ಲೇ ಮೊದಲ ಸುತ್ತಿನ ಬಲಿ
ಕ್ವಾಲ್​ಕಾಮ್ ಸಿಇಒ ಕ್ರಿಸ್ಟಿಯಾನೊ ಆಮೊನ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 11, 2026 | 11:55 AM

Share

ಬೆಂಗಳೂರು, ನವೆಂಬರ್ 11: ಸೆಮಿಕಂಡಕ್ಟರ್ ಚಿಪ್ ತಯಾರಿಸುವ ಅಮೆರಿಕದ ಕ್ವಾಲ್​ಕಾಮ್ ಕಂಪನಿ ಲೇ ಆಫ್ ಪ್ರಕ್ರಿಯೆ ಆರಂಭಿಸಿದೆ. ಜಾಗತಿಕವಾಗಿ ಬಹಳಷ್ಟು ನೌಕರರನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ರಾಯ್ಟರ್ಸ್ ವರದಿ ಪ್ರಕಾರ, ಭಾರತದಲ್ಲಿ ಸುಮಾರು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಕ್ವಾಲ್​ಕಾಮ್ ಉದ್ಯೋಗಿಗಳು ಮೊದಲ ಬಲಿಯಾಗುತ್ತಿದ್ದಾರೆ ಎನ್ನುವಂತಹ ವರದಿ ಇದೆ.

ಕ್ವಾಲ್​ಕಾಮ್ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಗೆ ಕತ್ತರಿ ಹಾಕಲಿರುವುದು ನಿಜವೇ ಆದರೂ ಎಷ್ಟು ಮಂದಿಯನ್ನು ಲೇ ಆಫ್ ಮಾಡಲಾಗುತ್ತಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ‘ಕಾರ್ಯಸಾಧನೆ ಆಧಾರದಲ್ಲಿ ಉದ್ಯೋಗಕಡಿತ ಮಾಡಲಾಗುತ್ತದೆ. ಕಂಪನಿಯಲ್ಲಿ ಬಹಳ ಗಟ್ಟಿಯಾದ ಪರ್ಫಾರ್ಮೆನ್ಸ್ ಕಲ್ಚರ್ ನಿರ್ಮಿಸಬೇಕಾಗಿದೆ’ ಎಂದು ಕ್ವಾಲ್​ಕಾಮ್ ಸಿಇಒ ಕ್ರಿಸ್ಟಿಯಾನೊ ಆಮೊನ್ ಅವರು ಕಳೆದ ತಿಂಗಳು ಮೆಮೊವೊಂದರಲ್ಲಿ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಐದು ದೇಶಗಳ ಗೂಗಲ್ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಚಕಾರ; ವಾಲಂಟರಿ ಎಕ್ಸಿಟ್ ಆಫರ್​ನ ಸಂಕಟ

ಬೆಂಗಳೂರು, ಹೈದರಾಬಾದ್, ಚೆನ್ನೈನಲ್ಲಿರುವ ಕ್ವಾಲ್​ಕಾಮ್ ಉದ್ಯೋಗಿಗಳಿಗೆ ತಳಮಳ

ಅಮೆರಿಕದ ಚಿಪ್ ತಯಾರಕರಾದ ಕ್ವಾಲ್​ಕಾಮ್ ಭಾರತದ ಕೆಲ ನಗರಗಳಲ್ಲಿ ಎಂಜಿನಿಯರಿಂಗ್ ಆಪರೇಷನ್ಸ್ ಹೊಂದಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿಯಲ್ಲಿ ಅದರ ಕಚೇರಿಗಳಿವೆ. ರೆಡ್ಡಿಟ್​ನಲ್ಲಿ ಕೆಲವರು ಲೇ ಆಫ್ ಕುರಿತು ಮಾಹಿತಿ ನೀಡಿದ್ಧಾರೆ. ಅವರ ಪ್ರಕಾರ ಕ್ವಾಲ್​ಕಾಮ್​ನ ಆರ್​ಎಫ್, ಬ್ಲೂಟೂತ್, ವೈಫೈ, ಸೆಟಲೈಟ್ ನ್ಯಾವಿಗೇಶನ್ ಟೆಕ್ನಾಲಜಿಗಳಲ್ಲಿ ಕೆಲಸ ಮಾಡುವ ತಂಡಗಳು ಬಾಧಿತವಾಗಿವೆ. ಬೆಂಗಳೂರಿನಲ್ಲಿ ಮೊದಲ ಕತ್ತರಿ ಶುರುವಾಗಿದೆ. ನಂತರ ಬೇರೆ ನಗರಗಳಲ್ಲಿರುವ ಉದ್ಯೋಗಿಗಳನ್ನು ಗುರಿ ಮಾಡಬಹುದು ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾ ಅಪ್​ಡೇಟ್​ಗಳಿಂದ ತಿಳಿದುಬರುತ್ತದೆ.

ರೆಡ್ಡಿಟ್​ನಲ್ಲಿ ಒಬ್ಬರು ಹೇಳಿಕೊಂಡಿರುವ ಪ್ರಕಾರ, ಕಂಪನಿಯ ನಿರ್ದೇಶಕರೊಬ್ಬರು ಮತ್ತು ಎಚ್​ಆರ್, ಈ ಇಬ್ಬರು ವಿಡಿಯೋ ಕಾನ್ಫೆರೆನ್ಸ್ ಮೂಲಕ ತಮ್ಮನ್ನು ಲೇ ಆಫ್ ಮಾಡಿದ್ದಾರೆ. ಕೆಲಸದಲ್ಲಿ ತನ್ನ ಪರ್ಫಾರ್ಮೆನ್ಸ್ ಉತ್ತಮವಾಗಿತ್ತು. ಬಡ್ತಿ ಕೂಡ ನಡೆಯುವುದಿತ್ತು. ಆದರೆ, ದಿಢೀರ್ ತಮ್ಮನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಈ ವ್ಯಕ್ತಿ ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: Amazon Layoffs: ಮೈಕ್ರೋಸಾಫ್ಟ್​ನಲ್ಲಿ ಬ್ಲಡ್​ಬಾತ್; ಇನ್ನೋಡಾಟಾ ಬಳಿಕ ಅಮೇಜಾನ್​ನಲ್ಲಿ ದಿಢೀರ್ ಲೇ ಆಫ್; ಕಂಗಾಲಾದ ಟೆಕ್ಕಿಗಳು

ಕೆಲಸ ಕಳೆದುಕೊಂಡ ಉದ್ಯೋಗಿಗೆ ಪರಿಹಾರವೆಷ್ಟು?

ಫೈನಾನ್ಷಿಯಲ್ ಎಕ್ಸ್​ಪ್ರೆಸ್ ವರದಿ ಪ್ರಕಾರ, ಭಾರತದಲ್ಲಿ ಲೇ ಆಫ್ ಆಗುವ ಉದ್ಯೋಗಿಗೆ ಮೂರು ತಿಂಗಳವರೆಗೆ ಸಂಬಳವನ್ನು ಪರಿಹಾರವಾಗಿ ನೀಡಲಾಗುತ್ತಿದೆ. ಮೂರು ದಿನದೊಳಗೆ ನಿರ್ಗಮನ ದಾಖಲೆಗಳಿಗೆ ಸಹಿಹಾಕಿದರೆ ಒಂದು ಹೆಚ್ಚುವರಿ ತಿಂಗಳ ವೇತನವೂ ಸಿಗಲಿದೆ. ಆದರೆ, ಎಲ್ಲರಿಗೂ ಏಕರೀತಿಯ ಪರಿಹಾರ ಇಲ್ಲ. ಅವರು ಕೆಲಸ ಮಾಡಿದ ಸೇವಾವಧಿ ಹಾಗು ಅವರ ಕೆಲಸದ ಸ್ಥಳ ಇತ್ಯಾದಿ ಮೇಲೆ ಅವಲಂಬಿತವಾಗಿರುತ್ತದೆ.

ರೆಡ್ಡಿಟ್​ನಲ್ಲಿ ಬಂದ ಒಂದು ಪೋಸ್ಟ್

Layoffs and market adjustments by u/No_Evening7672 in qualcomm

ಕ್ವಾಲ್​ಕಾಮ್ ಲೇ ಆಫ್ ಮಾಡುತ್ತಿರುವುದು ಯಾಕೆ?

ವರದಿಗಳ ಪ್ರಕಾರ, ಸ್ಮಾರ್ಟ್​ಫೋನ್ ಮಾರಾಟ ಕಡಿಮೆಗೊಂಡಿದೆ. ಇದರಿಂದ ಚಿಪ್​ಗಳಿಗೆ ಬೇಡಿಕೆ ಕಡಿಮೆ ಆಗಿದೆ. ಹಾಗೆಯೇ, ಮೆಮೊರಿ ಚಿಪ್​ಗಳ ಬೆಲೆಗಳೂ ಏರುತ್ತಿವೆ. ಸ್ಮಾರ್ಟ್​ಫೋನ್ ಹ್ಯಾಂಡ್​ಸೆಟ್​ಗಳು ಕ್ವಾಲ್​ಕಾಮ್​ಗೆ ಅತಿಹೆಚ್ಚು ಆದಾಯ ತಂದುಕೊಡುತ್ತಿದ್ದವು. ಈ ಆದಾಯದಲ್ಲಿ ಶೇ. 26ರಷ್ಟು ಕಡಿಮೆ ಆಗಿದೆ. ಈ ಕಾರಣಕ್ಕೆ ನಷ್ಟ ಸರಿದೂಗಿಸಲು ಉದ್ಯೋಗಿಗಳ ಸಂಖ್ಯೆ ಮೊಟಕುಗೊಳಿಸುತ್ತಿರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Wed, 11 November 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More