
ನವದೆಹಲಿ, ಆಗಸ್ಟ್ 27: ಪಾಕಿಸ್ತಾನದಿಂದ ಭಾರತದೊಳಗೆ ಪರೋಕ್ಷವಾಗಿ ಹರಿದುಬರುತ್ತಿರುವ ಹಣದ ಬಗ್ಗೆ ಹೆಚ್ಚು ನಿಗಾ ಇರಿಸುವಂತೆ ಬ್ಯಾಂಕುಗಳಿಗೆ ಆರ್ಬಿಐ (RBI) ಸೂಚನೆ ನೀಡಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನದಿಂದ (Pakistan) ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಪೋಷಣೆ ನೀಡಲಾಗುತ್ತಿರುವ ಸಂಶಯವನ್ನು ಗಟ್ಟಿಗೊಳಿಸುವ ಬೆಳವಣಿಗೆ ಇದು. ರಾಯ್ಟರ್ಸ್ ವರದಿ ಪ್ರಕಾರ ಪಾಕಿಸ್ತಾನದಿಂದ ಬರುವ ಹಣವನ್ನು ಶಸ್ತ್ರಾಸ್ತ್ರ ಖರೀದಿಗೆ (arms financing) ಬಳಸುವ ಅಧಿಕ ಅಪಾಯ ಇದೆ ಎಂದು ಆರ್ಬಿಐ ತನ್ನ ಪತ್ರದಲ್ಲಿ ಎಚ್ಚರಿಸಿದೆ ಎನ್ನಲಾಗಿದೆ.
ಶಸ್ತ್ರಾಸ್ತ್ರ ಹಣಕಾಸು ನೆರವು ನೀಡಲಾಗುತ್ತಿರುವ ದೃಷ್ಟಿಯಲ್ಲಿ ಪಾಕಿಸ್ತಾನವನ್ನು ‘ಹೈ ರಿಸ್ಕ್’ (ಅಧಿಕ ಅಪಾಯ) ಎಂದು ಆರ್ಬಿಐ ವರ್ಗೀಕರಿಸಿದೆ. ಆಪರೇಷನ್ ಸಿಂದೂರ್ ಬಳಿಕ ಭಾರತದ ತನಿಖಾ ಸಂಸ್ಥೆಗಳು ಪಾಕಿಸ್ತಾನ ಮೂಲಗಳಿಂದ ಆಗುತ್ತಿರುವ ಟೆರರ್ ಫೈನಾನ್ಸಿಂಗ್ ಬಗ್ಗೆ ಎಚ್ಚರಿಸಿವೆ. ಪಾಕಿಸ್ತಾನದಿಂದ ಭಾರತಕ್ಕೆ ನೇರ ಹಣ ವರ್ಗಾವಣೆ ಸಾಧ್ಯವಾಗದಂತೆ ನಿರ್ಬಂಧಗಳನ್ನು ಹಾಕಲಾಗಿದೆ. ಹಣ ಕಳುಹಿಸುವಾಗ ಪ್ರತೀ ವಹಿವಾಟಿಗೂ ಆರ್ಬಿಐನ ಅನುಮತಿ ಬೇಕೇ ಬೇಕಾಗುತ್ತದೆ. ಹೀಗಾಗಿ, ಪಾಕಿಸ್ತಾನ ಪರೋಕ್ಷ ದಾರಿ ಮೂಲಕ ಹಣ ವರ್ಗಾವಣೆ ಮಾಡಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ಕೆಲ ಪಾಕಿಸ್ತಾನೀ ಪ್ರಜೆಗಳು ಬೇರೆ ದೇಶಗಳ ಮುಖಾಂತರ ಭಾರತಕ್ಕೆ ಫಂಡ್ಗನ್ನು ಕಳುಹಿಸುತ್ತಿರುವುದನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡಿದ್ದವು.
ಇದನ್ನೂ ಓದಿ: ಪಂಚಾಯಿತಿ ಮಟ್ಟದಲ್ಲಿ ಬ್ಯಾಂಕ್ ಕೆವೈಸಿ ಶಿಬಿರ; ದಾಖಲೆಗಳೇನು ಬೇಕು? ಇಲ್ಲಿದೆ ವಿವರ
ಅಕ್ರಮ ಹಣ ವರ್ಗಾವಣೆ ಆಗುವುದನ್ನು ತಪ್ಪಿಸಲು ಮತ್ತು ಶಸ್ತ್ರಾಸ್ತ್ರ ಖರೀದಿ, ಭಯೋತ್ಪಾದನೆಗೆ ಹಣ ವರ್ಗಾಯಿಸುವುದನ್ನು ತಪ್ಪಿಸಲು ಭಾರತೀಯ ಬ್ಯಾಂಕುಗಳಿಗೆ ಆರ್ಬಿಐ ಒಂದಷ್ಟು ಮಾರ್ಗಸೂಚಿಗಳನ್ನು ನಿಗದಿ ಮಾಡಿದೆ. ಆದರೆ, ಈ ಮಾರ್ಗಸೂಚಿಯಲ್ಲಿ ಪಾಕಿಸ್ತಾನವನ್ನು ನೇರವಾಗಿ ಉಲ್ಲೇಖಿಸುತ್ತಿರುವುದು ವಿರಳ ಎನ್ನಲಾಗಿದೆ.
ಭಾರತದಲ್ಲಿ ಅಕ್ರಮ ಶಸ್ತ್ರಾಸ್ತ್ರ ಖರೀದಿಗೆ ಪಾಕಿಸ್ತಾನದಿಂದ ಪರೋಕ್ಷವಾಗಿ ಹಣದ ಹರಿವು ಹೋಗುತ್ತಿದೆ ಎನ್ನುವ ಸುದ್ದಿಯನ್ನು ಪಾಕಿಸ್ತಾನ ನಿರಾಕರಿಸಿದೆ. ಪಾಕಿಸ್ತಾನದ ಬ್ಯಾಂಕಿಂಗ್ ಸಿಸ್ಟಂ ಯಾವುದೇ ಮನಿ ಲಾಂಡರಿಂಗ್ಗೆ ಅವಕಾಶ ನೀಡದಷ್ಟು ಸಮರ್ಪಕವಾಗಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ರಾಜಕೀಯ ಪ್ರೇರಿತ ಆರೋಪ ಎಂದು ಅಲ್ಲಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಪಾಕಿಸ್ತಾನದ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆಯ ಜಾಲತಾಣದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ‘ಮ್ಯಾಗ್ನೆಟ್ ನೀಡದಿದ್ದರೆ ಚೀನಾವನ್ನು ನಾಶ ಮಾಡುತ್ತೇವೆ’: ಮತ್ತೆ ಆರ್ಭಟಿಸಿದ ಡೊನಾಲ್ಡ್ ಟ್ರಂಪ್
ಪಾಕಿಸ್ತಾನದ ಬ್ಯಾಂಕುಗಳ ಸಂಘಟನೆಯ ಅಧ್ಯಕ್ಷ ಜಾಫರ್ ಮಸೂದ್ ಕೂಡ ಈ ಅಭಿಪ್ರಾಯ ಪುನರುಚ್ಚರಿಸಿದ್ದಾರೆ. ಪಾಕಿಸ್ತಾನದ ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನುಗಳು ಹಾಗೂ ಟೆರರ್ ಫೈನಾನ್ಸಿಂಗ್ ವಿರುದ್ಧದ ಕ್ರಮಗಳು ಬಹಳ ಕಟ್ಟುನಿಟ್ಟಾಗಿವೆ. ಇಂಥದ್ದಕ್ಕೆ ಅವಕಾಶ ಇಲ್ಲ ಎಂದು ಜಾಫರ್ ಮಸೂದ್ ಹೇಳಿದ್ಧಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ