PAN explained: ಪ್ಯಾನ್ ಸಂಖ್ಯೆ ರಹಸ್ಯ… 4 ಮತ್ತು 5ನೇ ಅಕ್ಷರಕ್ಕಿದೆ ಮಹತ್ವ; ವ್ಯಕ್ತಿಯಾ, ಸರ್ಕಾರವಾ, ಕಂಪನಿಯಾ ಗುರುತಿಸಲು ಸಾಧ್ಯ

PAN, know what the alphanumeric characters indicate: ಪ್ಯಾನ್ ಈಗ ಆಧಾರ್ ರೀತಿ ಬಹಳ ಅಗತ್ಯವಾಗಿರುವ ದಾಖಲೆ. ಇದು ವ್ಯಕ್ತಿಯ ಹಣಕಾಸು ಗುರುತು ದಾಖಲೆ. ಪ್ಯಾನ್​​ನಲ್ಲಿ 10 ಆಲ್ಫಾನ್ಯೂಮರಿಕ್ ಕ್ಯಾರೆಕ್ಟರ್​​ಗಳಿರುತ್ತವೆ. ಅಕ್ಷರ ಮತ್ತು ಅಂಕಿಗಳ ಸಂಯೋಜನೆ. ಮೊದಲ ಐದು ಕ್ಯಾರೆಕ್ಟರ್​​​ಗಳು ಅಕ್ಷರಗಳಾದರೆ, ನಂತರದ ನಾಲ್ಕು ಕ್ಯಾರೆಕ್ಟರ್ ಅಂಕಿಗಳಾಗಿರುತ್ತವೆ. ಕೊನೆಯದ್ದು ಅಕ್ಷರವಾಗಿರುತ್ತದೆ. ಇದರ ಮಹತ್ವದ ಬಗ್ಗೆ ವಿವರ ಇಲ್ಲಿದೆ...

PAN explained: ಪ್ಯಾನ್ ಸಂಖ್ಯೆ ರಹಸ್ಯ... 4 ಮತ್ತು 5ನೇ ಅಕ್ಷರಕ್ಕಿದೆ ಮಹತ್ವ; ವ್ಯಕ್ತಿಯಾ, ಸರ್ಕಾರವಾ, ಕಂಪನಿಯಾ ಗುರುತಿಸಲು ಸಾಧ್ಯ
ಪರ್ಮನೆಂಟ್ ಅಕೌಂಟ್ ನಂಬರ್​​

Updated on: May 16, 2025 | 4:44 PM

ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ನಂಬರ್ ನಿಮಗೆ ಗೊತ್ತಿದೆ. ಹಣಕಾಸು ವಹಿವಾಟು ನಡೆಸುವ ಪ್ರತಿಯೊಬ್ಬರೂ ಹೊಂದಿರಬೇಕಾದ ಸಂಖ್ಯೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಐಟಿ ರಿಟರ್ನ್ ಫೈಲ್ ಮಾಡುವವರೆಗೆ ನಾನಾ ಹಣಕಾಸು ಕಾರ್ಯಗಳಿಗೆ ಪ್ಯಾನ್ ಅವಶ್ಯಕತೆ ಇರುತ್ತದೆ. ಆಧಾರ್ ಕಾರ್ಡ್​​ನಂತೆ ಇದು ಪ್ರಮುಖ ಕೆವೈಸಿ ದಾಖಲೆಯಾಗಿದೆ. ಯಾರೂ ಕೂಡ ತೆರಿಗೆ ವಂಚನೆ ಎಸಗದಂತೆ ನೋಡಿಕೊಳ್ಳಲು ಆದಾಯ ತೆರಿಗೆ ಮಾಡಿರುವ ವಿಶೇಷ ವ್ಯವಸ್ಥೆಯ ಭಾಗ ಇದು.

ಪ್ಯಾನ್ ನಂಬರ್ ವಿಶೇಷತೆ ಏನು?

ಆಧಾರ್ ಕಾರ್ಡ್​​​ನಲ್ಲಿ 12 ಅಂಕಿಗಳ ಒಂದು ವಿಶೇಷ ಸಂಖ್ಯೆ ಇರುತ್ತದೆ. ಅಂತೆಯೇ, ಪ್ಯಾನ್​​ನಲ್ಲಿ 10 ಅಕ್ಷರ, ಅಂಕಿಗಳ ಸಂಯೋಜನೆಯ ಕ್ಯಾರೆಕ್ಟರ್​​ಗಳು ಇರುತ್ತವೆ. ಮೊದಲ ಐದು ಕ್ಯಾರೆಕ್ಟರ್​​ಗಳು ಎಯಿಂದ ಝಡ್​ವರೆಗಿನ ಅಕ್ಷರಗಳಾಗಿರುತ್ತವೆ. ನಂತರದ ನಾಲ್ಕು ಕ್ಯಾರೆಕ್ಟರ್​​​ಗಳು 0-9ರವರೆಗಿನ ಅಂಕಿಗಳಾಗಿರುತ್ತವೆ. ಕೊನೆಯ ಒಂದು ಕ್ಯಾರೆಕ್ಟರ್ ಅಕ್ಷರವಾಗಿರುತ್ತದೆ.

ಉದಾಹರಣೆಗೆ: ABCDE1234F.

ಇಲ್ಲಿ ಮೊದಲ ಮೂರು ಕ್ಯಾರೆಕ್ಟರ್​​ಗಳು AAA ಯಿಂದ ZZZ ವರೆಗಿನ ಶ್ರೇಣಿಯಲ್ಲಿರುತ್ತದೆ. AAA, AAB, AAC… AZA, BAC… ಹೀಗೆ ಯಾವುದೇ ಮೂರು ಇಂಗ್ಲೀಷ್ ಅಕ್ಷರ ಆಗಿರಬಹುದು. ಮೇಲಿನ ಉದಾಹರಣೆಯಲ್ಲಿ ಅದು ABC ಇದೆ. ಇದರಲ್ಲಿ ವಿಶೇಷತೆ ಏನಿಲ್ಲ.

ಆದರೆ, ಪ್ಯಾನ್ ನಂಬರ್​​​ನ ನಾಲ್ಕನೇ ಕ್ಯಾರೆಕ್ಟರ್ ಮುಖ್ಯ. ಇದು ವ್ಯಕ್ತಿ, ಕಂಪನಿ, ಸರ್ಕಾರಿ ಸಂಸ್ಥೆ, ಟ್ರಸ್ಟ್ ಇತ್ಯಾದಿಯ ಗುರುತಾಗಿರುತ್ತದೆ.

  • C: ಕಂಪನಿ
  • P: ವ್ಯಕ್ತಿ
  • H: ಹಿಂದೂ ಅವಿಭಜಿತ ಕುಟುಂಬ
  • F: ಸಂಸ್ಥೆ (ನಿರ್ದೇಶಕರ ಮಂಡಳಿ, ಷೇರುದಾರರು ಇರುವಂತಹ ಕಂಪನಿ)
  • A: ವ್ಯಕ್ತಿಗಳ ಸಂಸ್ಥೆ
  • T: ಟ್ರಸ್ಟ್
  • B: ವ್ಯಕ್ತಿಗಳ ಸಂಘಟನೆ
  • L: ಸ್ಥಳೀಯ ಪ್ರಾಧಿಕಾರ
  • J: ಕೃತಕ ನ್ಯಾಯಾಂಗ ವ್ಯಕ್ತಿ
  • G: ಸರ್ಕಾರ

ಇದನ್ನೂ ಓದಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ಆಗುವ ಪ್ರಯೋಜನ ಅಷ್ಟಿಷ್ಟಲ್ಲ… ಇಲ್ಲಿದೆ ಅನುಕೂಲಗಳ ವಿವರ

ಪ್ಯಾನ್​​ನ ಐದನೇ ಕ್ಯಾರೆಕ್ಟರ್ ಏನು ಸೂಚಿಸುತ್ತದೆ?

ಪರ್ಮನೆಂಟ್ ಅಕೌಂಟ್ ನಂಬರ್​​​ನ ಐದನೇ ಕ್ಯಾರೆಕ್ಟರ್ ಕೂಡ ಅಕ್ಷರವೇ ಆಗಿರುತ್ತದೆ. ಇದು ಪ್ಯಾನ್ ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆಯ ನೊಂದಾಯಿತ ಹೆಸರಿನ ಮೊದಲ ಅಕ್ಷರವಾಗಿರುತ್ತದೆ.

ಇನ್ನು, ಇದಾದ ಬಳಿಕ ನಾಲ್ಕು ಅಂಕಿಗಳಿರುತ್ತವೆ. ಅವು 0001ರಿಂದ ಹಿಡಿದು 9999ರವರೆಗಿನ ಯಾವುದೇ ಸಂಯೋಜನೆ ಆಗಿರಬಹುದು.

ಕೊನೆಯ ಕ್ಯಾರೆಕ್ಟರ್ ಒಂದು ಅಕ್ಷರ ಆಗಿದ್ದು, ಇದೇನೂ ವಿಶೇಷತೆ ಹೊಂದಿರುವುದಿಲ್ಲ. ಟ್ರಾನ್ಸ್​ಕ್ರಿಪ್ಷನ್ ಎರರ್ ನಿವಾರಿಸಲು ಇದನ್ನು ಬಳಸಲಾಗುತ್ತದೆ. ಮೊದಲ 9 ಕ್ಯಾರೆಕ್ಟರ್​​ ಅನ್ನು ಒಂದು ನಿರ್ದಿಷ್ಟ ಸೂತ್ರದಲ್ಲಿ ಬಳಸಿ, ಕೊನೆಯ ಕ್ಯಾರೆಕ್ಟರ್ ಅನ್ನು ನಿಗದಿ ಮಾಡಲಾಗುತ್ತದೆ ಎನ್ನುವ ಮಾಹಿತಿ ಇದೆ.

ಒಟ್ಟಾರೆ 10 ಕ್ಯಾರೆಕ್ಟರ್​​​ಗಳಿರುವ ಪ್ಯಾನ್ ನಂಬರ್​​​ನಲ್ಲಿ 4 ಮತ್ತು 5ನೇ ಕ್ಯಾರೆಕ್ಟರ್​​​ಗಳು ಮುಖ್ಯ. ಆ ಪ್ಯಾನ್ ಯಾರದ್ದಿರಬಹುದು ಎನ್ನುವ ಒಂದಿಷ್ಟು ಸುಳಿವು ಪಡೆದುಕೊಳ್ಳಬಹುದು.’

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ