ನವದೆಹಲಿ, ಫೆಬ್ರುವರಿ 9: ವಿವಾದಗಳ ನಡುವೆ ಪೇಟಿಎಂನ ಇಕಾಮರ್ಸ್ ವಿಭಾಗದ ಹೆಸರು ಪೈ ಪ್ಲಾಟ್ಫಾರ್ಮ್ಸ್ (Pai Platforms) ಎಂದು ಬದಲಾಗಿದೆ. ಹಾಗೆಯೇ, ಬಿಟ್ಸಿಲಾ ಎಂಬ ಆ್ಯಪ್ ಅನ್ನೂ ಪೇಟಿಎಂ ಖರೀದಿಸಿದೆ. ಬಿಟ್ಸಿಲಾ (Bitsila) ಎಂಬುದು ಒಎನ್ಡಿಸಿ ವ್ಯವಸ್ಥೆಯಲ್ಲಿ ಸೆಲ್ಲರ್ ಆ್ಯಪ್ ಅಥವಾ ಮಾರಾಟಗಾರರಿಗೆ ವೇದಿಕೆಯಾಗಿರುವ ಅಪ್ಲಿಕೇಶನ್ ಆಗಿದೆ. ಪೇಟಿಎಂ ಇ-ಕಾಮರ್ಸ್ನ ಹೆಸರನ್ನು ಪೈ ಪ್ಲಾಟ್ಫಾರ್ಮ್ಸ್ ಆಗಿ ಬದಲಾಯಿಸುವ ನಿರ್ಧಾರ ದಿಢೀರ್ ಆಗಿದ್ದಲ್ಲ. ಪಿಟಿಐ ವರದಿ ಪ್ರಕಾರ, ಮೂರು ತಿಂಗಳ ಹಿಂದೆಯೇ ಹೆಸರು ಬದಲಾವಣೆಗೆ ಪೇಟಿಎಂ ಅರ್ಜಿ ಹಾಕಿತ್ತು. ನಿನ್ನೆ ಗುರುವಾರ (ಫೆ. 8) ಕಂಪನಿ ರಿಜಿಸ್ಟ್ರಾರ್ನಿಂದ ಅನುಮೋದನೆ ಕೂಡ ಸಿಕ್ಕಿತ್ತು.
‘ಪೇಟಿಎಂ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಇದ್ದ ಕಂಪನಿ ಹೆಸರನ್ನು ಪೈ ಪ್ಲಾಟ್ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಬದಲಾಯಿಸಲಾಗಿದೆ’ ಎಂದು ಪ್ರಾಧಿಕಾರ ಸಂಸ್ಥೆಯಾದ ಕಂಪನಿ ರಿಜಿಸ್ಟ್ರಾರ್ ತನ್ನ ನೋಟಿಫಿಕೇಶನ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಏರ್ಬಸ್ನ ಎ220 ವಿಮಾನಗಳಿಗೆ ಬಾಗಿಲು ತಯಾರಿಕೆಯ ಗುತ್ತಿಗೆ ಪಡೆದ ಬೆಂಗಳೂರಿನ ಕಂಪನಿ
ಬಿಟ್ಸಿಲಾ ಎಂದು ಹೆಸರಾಗಿರುವ ಇನ್ನೋಬಿಟ್ಸ್ ಸಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 2020ರಲ್ಲಿ ಸ್ಥಾಪನೆಯಾಗಿದೆ. ಒಎನ್ಡಿಸಿಯಲ್ಲಿ ಮೂರು ಅಗ್ರಗಣ್ಯ ಸೆಲ್ಲರ್ ಪ್ಲಾಟ್ಫಾರ್ಮ್ ಪೈಕಿ ಅದೂ ಒಂದೆನಿಸಿದೆ. 30ಕ್ಕೂ ಹೆಚ್ಚು ನಗರಗಳಲ್ಲಿನ 10,000ಕ್ಕೂ ಹೆಚ್ಚು ಸ್ಟೋರ್ಗಳ 60 ಕೋಟಿಗೂ ಹೆಚ್ಚು ಪ್ರಾಡಕ್ಟ್ ಕೆಟಗರಿಗಳನ್ನು ಇದು ನಿರ್ವಹಿಸುತ್ತದೆ. ಆಹಾರ, ದಿನಸಿ, ಉಡುಪು, ಗೃಹಾಲಂಕಾರ ಇತ್ಯಾದಿ ವಿವಿಧ ವಲಯಗಳಲ್ಲಿನ ವ್ಯಾಪಾರಿಗಳ ಉತ್ಪನ್ನಗಳನ್ನು ಇದು ನಿರ್ವಹಿಸುತ್ತದೆ.
ಇನ್ನು, ಪೈ ಪ್ಲಾಟ್ಫಾರ್ಮ್ಸ್ ಎಂದು ಹೆಸರು ಬದಲಾಯಿಸಿಕೊಂಡಿರುವ ಪೇಟಿಎಂ ಇ-ಕಾಮರ್ಸ್ ಸಂಸ್ಥೆ ಒಎನ್ಡಿಸಿಯಲ್ಲಿರುವ ಅತಿದೊಡ್ಡ ಬಯರ್ ಪ್ಲಾಟ್ಫಾರ್ಮ್ ಆಗಿದೆ. ಒಎನ್ಡಿಸಿಯನ್ನು ಅಳವಡಿಸಿದ ಮೊದಲ ಪ್ಲಾಟ್ಫಾರ್ಮ್ ಕೂಡ ಹೌದು. ಒಎನ್ಡಿಸಿ ನೆಟ್ವರ್ಕ್ನಲ್ಲಿ ಗ್ರಾಹಕರಿಂದ ಅತಿಹೆಚ್ಚು ಆರ್ಡರ್ ಪಡೆಯುವ ದಾಖಲೆ ಪೇಟಿಎಂಗೆ ಸಲ್ಲುತ್ತದೆ.
ಇದನ್ನೂ ಓದಿ: ಸೂರ್ಯೋದಯ್ ಸ್ಕೀಮ್: ಮನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ತರಲು ಎಷ್ಟು ವೆಚ್ಚವಾಗುತ್ತೆ? ಇಲ್ಲಿದೆ ಡೀಟೇಲ್ಸ್
ಪೇಟಿಎಂ ಇ-ಕಾಮರ್ಸ್ ಸಂಸ್ಥೆಯಲ್ಲಿ ಎಲಿವೇಶನ್ ಕ್ಯಾಪಿಟಲ್ ಅತಿದೊಡ್ಡ ಷೇರುದಾರಿಕೆ ಹೊಂದಿದೆ. ಸಾಫ್ಟ್ಬ್ಯಾಂಕ್ ಮತ್ತು ಇಬೇ ಸಂಸ್ಥೆಗಳೂ ಹಣಕಾಸು ಬೆಂಬಲ ಒದಗಿಸಿವೆ. ಪೇಟಿಎಂ ಸಂಸ್ಥಾಪಕ ಹಾಗೂ ಸಿಇಒ ವಿಜಯ್ ಶೇಖರ್ ಶರ್ಮಾ ಅವರ ಪಾಲೂ ಇದರೊಂದಿಗೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ