Paytm: ಪೇಮೆಂಟ್ಸ್ ಬ್ಯಾಂಕ್​ನೊಂದಿಗಿನ ಎಲ್ಲಾ ಒಪ್ಪಂದಗಳನ್ನೂ ಕಡಿದುಕೊಂಡ ಪೇಟಿಎಂ

|

Updated on: Mar 01, 2024 | 11:03 AM

Paytm Payments Bank updates: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆ ಇದ್ದ ಎಲ್ಲಾ ಹೊಂದಾಣಿಕೆಯ ಒಪ್ಪಂದಗಳಿಂದ ಪೇಟಿಎಂ ಹಿಂದಕ್ಕೆ ಸರಿದಿದೆ. ಆರ್​ಬಿಐ ನಿಬಂಧನೆಗಳಿಗೆ ಬದ್ಧವಾಗಲು ಈ ಕ್ರಮ ಕೈಗೊಳ್ಳಲಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿದ್ದ ತನ್ನ ಗ್ರಾಹಕರ ಮತ್ತು ವರ್ತಕರ ಖಾತೆಗಳನ್ನು ಬೇರೆ ಬ್ಯಾಂಕುಗಳಿಗೆ ವರ್ಗಾಯಿಸಬೇಕಾದ ಸವಾಲು ಬಾಕಿ ಇದೆ. ಈ ಸಂಬಂಧ ವಿವಿಧ ಬ್ಯಾಂಕುಗಳ ಜೊತೆ ಪೇಟಿಎಂ ಮಾತುಕತೆ ನಡೆಸುತ್ತಿದೆ.

Paytm: ಪೇಮೆಂಟ್ಸ್ ಬ್ಯಾಂಕ್​ನೊಂದಿಗಿನ ಎಲ್ಲಾ ಒಪ್ಪಂದಗಳನ್ನೂ ಕಡಿದುಕೊಂಡ ಪೇಟಿಎಂ
ಪೇಟಿಎಂ
Follow us on

ನವದೆಹಲಿ, ಮಾರ್ಚ್ 1: ಪೇಟಿಎಂ ಸಂಸ್ಥೆಯ ಮೇಲೆ ಎದ್ದಿರುವ ಬಿರುಗಾಳಿ ತಣ್ಣಗಾಗಿಸಲು ನಡೆದಿರುವ ಪ್ರಯತ್ನಗಳ ಭಾಗವಾಗಿ ಇದೀಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (PPBL- Paytm Payments Bank Ltd) ಜೊತೆ ಒನ್97 ಕಮ್ಯೂನಿಕೇಶನ್ಸ್​ನ ಇತರ ಕಂಪನಿಗಳ ಒಪ್ಪಂದಗಳನ್ನು ಅಂತ್ಯಗೊಳಿಸಲಾಗಿದೆ. ಪೇಮೆಂಟ್ಸ್ ಬ್ಯಾಂಕ್ ಹಾಗು ಇತರ ಪೇಟಿಎಂ ಸಂಸ್ಥೆಗಳ ನಡುವೆ ನೇರ ಸಂಬಂಧ ಇರುವುದಿಲ್ಲ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸ್ವತಂತ್ರವಾಗಿ ಕಾರ್ಯಾಚರಿಸುವ ಸಂಸ್ಥೆಯಾಗುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಜೊತೆಗೆ ಆರ್​ಬಿಐನ ಕಟ್ಟಳೆಗಳಿಗೆ ಸರಿಹೊಂದಿಕೆಯಾಗುವ ನಿಟ್ಟಿನಲ್ಲೂ ಇದು ಮಹತ್ವದ ಹೆಜ್ಜೆಯಾಗಿದೆ.

ಪೇಟಿಎಂ ಮತ್ತು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಎರಡೂ ಕೂಡ ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆಗೆ ಸೇರಿದವುಗಳೇ. ಆದರೆ, ಪೇಮೆಂಟ್ಸ್ ಬ್ಯಾಂಕ್ ಆರ್​ಬಿಐ ನಿಬಂಧನೆಗಳಿಗೆ ಒಳಪಟ್ಟಿದೆ. ಆರ್​ಬಿಐ ಅಧೀನಕ್ಕೆ ಬರುವ ಯಾವುದೇ ಬ್ಯಾಂಕು ಸ್ವತಂತ್ರವಾಗಿ ಕಾರ್ಯಾಚರಿಸಬೇಕು ಎನ್ನುವ ನಿಯಮ ಇದೆ. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಹೆಚ್ಚಿನ ಸೇವೆಗಳು ಪೇಟಿಎಂಗೆ ಸೀಮಿತವಾಗಿವೆ. ಎರಡಕ್ಕೂ ಕೂಡ ಒಬ್ಬರೇ ಮುಖ್ಯಸ್ಥರಾಗಿದ್ದರು. ಆರ್​ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸಲು ಈ ಅಂಶವೂ ಒಂದು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ನಯ, ವಿನಯ, ವಿಧೇಯ ಅನಂತ; ಅಣ್ಣ ರಾಮನಂತೆ, ಅಕ್ಕ ದೇವತೆಯಂತೆ; ಭಾವಿ ಪತ್ನಿ ಏನಂತೆ?

ಮಾರ್ಚ್ 14ರೊಳಗೆ ಪೇಟಿಎಂ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನೊಂದಿಗಿನ ಹೊಂದಾಣಿಕೆಯನ್ನು ಕಡಿದುಕೊಳ್ಳಬೇಕೆಂದು ಆರ್​ಬಿಐ ಅಪ್ಪಣೆ ಮಾಡಿದೆ. ಅದರಂತೆ ಇದೀಗ ಎರಡೂ ಸಂಸ್ಥೆಗಳು ಪರಸ್ಪರ ಸಂಬಂಧ ಕಡಿತಗೊಳಿಸಲು ಸಮ್ಮತಿಸಿವೆ

ಇದೇ ವೇಳೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬದಲು ಬೇರೆ ಬ್ಯಾಂಕುಗಳ ಜೊತೆ ಹೊಂದಾಣಿಕೆ ಏರ್ಪಡಿಸಲು ಪೇಟಿಎಂ ಪ್ರಯತ್ನಿಸುತ್ತಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿದ್ದ ಪೇಟಿಎಂ ಗ್ರಾಹಕರ ಮತ್ತು ವರ್ತಕರ ಖಾತೆಗಳನ್ನು ಬೇರೆ ಬ್ಯಾಂಕುಗಳಿಗೆ ವರ್ಗಾಯಿಸಬೇಕಾಗುತ್ತದೆ.

ಇದನ್ನೂ ಓದಿ: ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಅವಧಿಯಲ್ಲಿ ಶೇ. 8.4ರಷ್ಟು ಬೆಳೆದ ಜಿಡಿಪಿ; ಮತ್ತೆ ಅಚ್ಚರಿ ಮೂಡಿಸಿದ ಭಾರತದ ಆರ್ಥಿಕ ಬೆಳವಣಿಗೆ

ಇನ್ನು, ಕಳೆದ ವಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಛೇರ್ಮನ್ ಸ್ಥಾನವನ್ನು ವಿಜಯ್ ಶೇಖರ್ ಶರ್ಮಾ ತ್ಯಜಿಸಿದ್ದಾರೆ. ಬ್ಯಾಂಕ್​ನ ನಿರ್ದೇಶಕರ ಮಂಡಳಿಯ ಪುನಾರಚನೆ ಕೂಡ ಮಾಡಲಾಗಿದೆ. ಶರ್ಮಾ ಈ ಮಂಡಳಿಯಿಂದಲೂ ಹೊರಗೆ ಬಂದಿದ್ದಾರೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಛೇರ್ಮನ್ ಶ್ರೀನಿವಾಸನ್ ಶ್ರೀಧರ್, ಬ್ಯಾಂಕ್ ಆಫ್ ಬರೋಡದ ಮಾಜಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಶೋಕ್ ಕುಮಾರ್ ಗರ್ಗ್, ನಿವೃತ್ತ ಐಎಎಸ್ ಅಧಿಕಾರಿಗಳಾದ ದೇಬೇಂದ್ರನಾಥ್ ಸಾರಂಗಿ ಹಾಗೂ ರಜನಿ ಶೇಖರಿ ಸಿಬಲ್ ಅವರು ಮಂಡಳಿ ಸದಸ್ಯರಾಗಿ ನೇಮಕವಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ