Paytm: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ

|

Updated on: Feb 11, 2024 | 6:26 PM

Chinese Investment In Paytm: ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ (ಪಿಪಿಎಸ್​ಎಲ್) ಸಂಸ್ಥೆಯಲ್ಲಿ ವಿದೇಶೀ ಹೂಡಿಕೆಗಳು ಇವೆಯಾ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಪಿಪಿಎಸ್​ಎಲ್​ನ ಮಾತೃ ಸಂಸ್ಥೆ ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಆ್ಯಂಟ್ ಗ್ರೂಪ್​ನ ಹೂಡಿಕೆ ಇದೆ. ಪೇಮೆಂಟ್ಸ್ ಸರ್ವಿಸಸ್ ಲಿಯಲ್ಲೂ ಚೀನೀ ಸಂಸ್ಥೆಯ ನೇರ ಹೂಡಿಕೆ ಇದೆಯಾ ಎಂದು ನೋಡಲಾಗುತ್ತಿದೆ. ಗಡಿಭಾಗದ ದೇಶಗಳಿಂದ ಭಾರತೀಯ ಸಂಸ್ಥೆಗಳು ಎಫ್​ಡಿಐ ಪಡೆಯುವ ಮುನ್ನ ಸರ್ಕಾರದ ಅನುಮತಿ ಪಡೆಯಬೇಕು ಎನ್ನುವ ನಿಯಮ ಇದೆ.

Paytm: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ
ಪೇಟಿಎಂ
Follow us on

ನವದೆಹಲಿ, ಫೆಬ್ರುವರಿ 11: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸಿದ್ದು ಆಯಿತು, ಈಗ ಪೇಟಿಎಂ ಆ್ಯಪ್ ಅನ್ನು ನಿರ್ವಹಿಸುವ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಸಂಸ್ಥೆಯ (PPSL- Paytm Payments Services Ltd) ಬುಡ ಜಾಲಾಡಲು ಸರ್ಕಾರ ಹೊರಟಂತಿದೆ. ಪಿಪಿಎಸ್​ಎಲ್​ನಲ್ಲಿ ಚೀನಾದ ನೇರ ಹೂಡಿಕೆ ಇದೆಯಾ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಪೇಟಿಎಂ ಪೇಮೆಂಟ್ಸ್ ಸರ್ವಿಸಸ್​ನ ಮಾಲಕ ಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಆ್ಯಂಟ್ ಗ್ರೂಪ್​ನ (Ant Group) ಹೂಡಿಕೆ ಇದೆ. ಈ ಮೂಲಕ ಪರೋಕ್ಷವಾಗಿ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಮೇಲೆ ಆ್ಯಂಟ್ ಗ್ರೂಪ್ ಅಧಿಕಾರ ಇರಬಹುದು. ಆದರೆ, ಪಿಪಿಎಸ್​ಎಲ್​ನಲ್ಲಿ ಚೀನಾದ ನೇರ ಹೂಡಿಕೆ ಇದೆಯಾ ಎನ್ನುವನ್ನು ಗಮನಿಸಲಾಗುತ್ತಿದೆ.

ಹಿಂದೆ 2022ರ ನವೆಂಬರ್​ನಲ್ಲಿ ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಸಂಸ್ಥೆ ಪೇಮೆಂಟ್ ಅಗ್ರಿಗೇಟರ್ ಆಗಿ ಕಾರ್ಯವಹಿಸಲು ಪರವಾನಿಗೆಗಾಗಿ ಆರ್​​ಬಿಐ ಬಳಿ ಅರ್ಜಿ ಸಲ್ಲಿಸಿತ್ತು. ಆದರೆ, ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಚೀನಾದ ಸಂಸ್ಥೆಯ ಎಫ್​ಡಿಐ ಇದ್ದರಿಂದ ನಿಯಮಾನುಸಾರ ಪಿಪಿಎಸ್​ಎಲ್​ನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಮರುತಿಂಗಳಲ್ಲಿ, ಅಂದರೆ 2022ರ ಡಿಸೆಂಬರ್ 14ರಂದು ಪಿಪಿಎಸ್​ಎಲ್ ನಿಯಮಾನುಸಾರ ಅರ್ಜಿ ಹಾಕಿತು. ಒನ್97 ಕಮ್ಯೂನಿಕೇಶನ್ಸ್​ನಲ್ಲಿ ಮಾತ್ರವೇ ಚೀನಾದ ಆ್ಯಂಟ್ ಗ್ರೂಪ್ ಹೂಡಿಕೆ ಇರುವುದನ್ನು ನಮೂದಿಸಿತ್ತು. ಇದು ವಿದೇಶೀ ನೇರ ಹೂಡಿಕೆಯ ಪ್ರೆಸ್ ನೋಟ್ ನಿಯಮ.

ಇದನ್ನೂ ಓದಿ: ನಿರ್ಬಂಧ ಇರೋದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ; ಆದ್ರೆ ವ್ಯಾಲಟ್​ಗೆ ಯಾಕೆ ತೊಂದರೆ? ತಿಳಿಯಬೇಕಾದ ಅಂಶಗಳು

ಚೀನಾದ ಹೂಡಿಕೆಗೆ ಯಾಕೆ ತಕರಾರು?

ಭಾರತದ ಸಂಸ್ಥೆಗಳಲ್ಲಿ ಚೀನಾದ ಸಂಸ್ಥೆಗಳು ಹೂಡಿಕೆ ಮಾಡಬಹುದು. ಸರ್ಕಾರ ಈ ಹೂಡಿಕೆಗಳಿಗೆ ಆಕ್ಷೇಪಿಸುತ್ತಿಲ್ಲ. ಆದರೆ, ಭಾರತೀಯ ಸಂಸ್ಥೆಯೊಂದು ಚೀನಾದಿಂದ ಹೂಡಿಕೆ ಪಡೆಯಬೇಕಾದರೆ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮ ಇದೆ. ಚೀನಾ ಮಾತ್ರವಲ್ಲ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಯಾವುದೇ ದೇಶಗಳಿಗೂ ಇದು ಅನ್ವಯ ಆಗುತ್ತದೆ.

ಈ ಪ್ರೆಸ್ ನೋಟ್ ರೂಲ್ ನಂಬರ್ 3 ಪ್ರಕಾರ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಭೂತಾನ್, ನೇಪಾಳ, ಮಯನ್ಮಾರ್ ಮತ್ತು ಆಫ್ಘಾನಿಸ್ತಾನ ದೇಶಗಳಿಂದ ಭಾರತಕ್ಕೆ ಎಫ್​ಡಿಐ ಬರಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಭದ್ರತೆಯ ದೃಷ್ಟಿಯಿಂದ ಈ ನಿಯಮ ಇದೆ. ಗಡಿಭಾಗದ ದೇಶಗಳು ಭಾರತದ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ತಡೆಯಲು ಈ ನಿಯಮ ರೂಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ