ಡಿಜಿಟಲ್ ಪಾವತಿ ಹಾಗೂ ಹಣಕಾಸು ಸೇವೆ ಒದಗಿಸುವ ಕಂಪೆನಿ ಪೇಟಿಎಂನಿಂದ ಬಹು ನಿರೀಕ್ಷಿತ ಷೇರು ಮಾರ್ಕೆಟ್ ಲಿಸ್ಟಿಂಗ್ ನವೆಂಬರ್ 18, 2021ರ ಗುರುವಾರದಂದು ಆಗಿದೆ. ಐಪಿಒದ ವಿತರಣೆ ಬೆಲೆ ಎಂದು 2,150 ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಈ ದಿನದ ಲಿಸ್ಟಿಂಗ್ ಎನ್ಎಸ್ಇಯಲ್ಲಿ ಶೇ 9ರಷ್ಟು ರಿಯಾಯಿತಿಗೆ ಅಂದರೆ ಪ್ರತಿ ಷೇರಿಗೆ 1,950 ರೂಪಾಯಿಯಂತೆ ಆಯಿತು. ಇನ್ನು ಬಿಎಸ್ಇಯಲ್ಲಿ ಪ್ರತಿ ಷೇರಿಗೆ ರೂ. 1955 ರೂಪಾಯಿಯಂತೆ ಲಿಸ್ಟಿಂಗ್ ಆಯಿತು. ಆದರೆ ಮಾರುಕಟ್ಟೆ ಬಂಡವಾಳ ಮೌಲ್ಯವು ಮೌಲ್ಯವು 1 ಲಕ್ಷ ಕೋಟಿ ರೂಪಾಯಿಗೂ ಮೇಲ್ಮಟ್ಟಕ್ಕೆ ಹೋಯಿತು. ಲಿಸ್ಟಿಂಗ್ ಆದ ಕೆಲವೇ ನಿಮಿಷಗಳಲ್ಲಿ ಆರಂಭದ ಬೆಲೆಗಿಂತ ಇನ್ನಷ್ಟು ಕುಸಿದು, ಪ್ರತಿ ಷೇರಿಗೆ 1806 ರೂಪಾಯಿ ತಲುಪಿತು. ಮೂರು ದಿನಗಳ ಕಾಲ ಸಬ್ಸ್ಕ್ರಿಪ್ಷನ್ಗೆ ಮುಕ್ತವಾಗಿದ್ದ ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ಗೆ ನವೆಂಬರ್ 1ರಿಂದ ಅಪ್ಲೈ ಮಾಡಬಹುದಿತ್ತು. ದರದ ಬ್ಯಾಂಡ್ ಆಗಿ ಪ್ರತಿ ಷೇರಿಗೆ 2080ರಿಂದ 2150 ರೂಪಾಯಿ ನಿಗದಿ ಮಾಡಲಾಗಿತ್ತು.
ಭಾರತದ ಅತಿ ದೊಡ್ಡ ಐಪಿಒ 1.89 ಪಟ್ಟು ಸಬ್ಸ್ಕ್ರೈಬ್ ಆಗಿತ್ತು. ಸಾಂಸ್ಥಿಕ ಹೂಡಿಕೆದಾರರು ಹಾಗೂ ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಾಗಿದ್ದ ಷೇರು 2.79 ಪಟ್ಟು ಸಬ್ಸ್ಕ್ರೈಬ್ ಆಗಿತ್ತು. ಪೇಟಿಎಂನಿಂದ 8300 ಕೋಟಿ ಮೌಲ್ಯದ ಹೊಸದಾದ ಷೇರು ವಿತರಣೆ ಮತ್ತು ಆಫರ್ ಫಾರ್ ಸೇಲ್ (OFS) ಮೂಲಕ 10 ಸಾವಿರ ಕೋಟಿ ರೂಪಾಯಿ ತನಕ ಮಾರಾಟ ಮಾಡಲಾಗಿತ್ತು. ಈ ಆಫರ್ ಫಾರ್ ಸೇಲ್ನಲ್ಲಿ ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಗೆ ಸೇರಿದ 402.65 ಕೋಟಿ ರೂಪಾಯಿ ಮೌಲ್ಯದ ಷೇರುಗಳು ಸಹ ಇದ್ದವು.
ಎಂಜಿನಿಯರಿಂಗ್ ಪದವೀಧರರಾದ ವಿಜಯ್ಶೇಖರ್ ಶರ್ಮಾ 2010ರಲ್ಲಿ ಮೊಬೈಲ್ ರೀಚಾರ್ಜ್ಗಳಿಗಾಗಿ ಪ್ಲಾಟ್ಫಾರ್ಮ್ ಪೇಟಿಎಂ ಆರಂಭಿಸಿದರು. 2000ನೇ ಇಸವಿಯಲ್ಲಿ ಒನ್97 ಕಮ್ಯುನಿಕೇಷನ್ಸ್ ಆಗಿ ಇನ್ಕಾರ್ಪೊರೇಟ್ ಆಗಿತ್ತು. ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಭಾರತದ ಪ್ರಮುಖ ಡಿಜಿಟಲ್ ಎಕೋಸಿಸ್ಟಮ್ ಆಗಿತ್ತು. ಬಳಕೆದಾರರಿಗೆ ಪಾವತಿ ಸೇವೆಗಳು ಮತ್ತು ಹಣಕಾಸು ಸೇವೆಗಳ ತನಕ ವಿವಿಧ ಆಫರ್ಗಳನ್ನು ಒದಗಿಸುತ್ತದೆ. ಪೇಟಿಎಂನ ಯಶಸ್ಸು ಶರ್ಮಾ ಅವರನ್ನು ಶತಕೋಟ್ಯಧಿಪತಿಯನ್ನಾಗಿ ಮಾಡಿದೆ. 240 ಕೋಟಿ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ. ಇನ್ನು ಈಗಿನ ಐಪಿಒ ಮೂಲಕ ದೇಶದಲ್ಲಿ ನೂರಾರು ಮಂದಿ ಮಿಲಿಯನೇರ್ಗಳಾಗಿದ್ದಾರೆ.
ಈ ಮಧ್ಯೆ ಬ್ರೋಕರೇಜ್ ಸಂಸ್ಥೆಯಾದ Macquire ರೀಸರ್ಚ್ನಿಂದ ಪೇಟಿಎಂ ಮಾಲೀಕ ಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ಗೆ ಕೆಳಮಟ್ಟದ ರೇಟಿಂಗ್ ನೀಡಲಾಗಿದೆ. ಪೇಟಿಎಂನ ಉದ್ಯಮ ಮಾಡೆಲ್ನಲ್ಲಿ ಗಮನ ಮತ್ತು ಸೂಕ್ತ ದಿಕ್ಕು- ದೆಸೆಯ ಕೊರತೆ ಇದೆ ಎಂದು ಅಭಿಪ್ರಾಯ ಪಡಲಾಗಿದೆ.
ಇದನ್ನೂ ಓದಿ: ಪೇಟಿಎಂ ಕಂಪೆನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಸೇರಿ 350 ಮಂದಿ ಆಗಲಿದ್ದಾರೆ ಕೋಟ್ಯಧಿಪತಿ