Closing Bell: ಸೆನ್ಸೆಕ್ಸ್, ನಿಫ್ಟಿ ಇಳಿಕೆ; ಪೇಟಿಎಂ ಲಿಸ್ಟಿಂಗ್​ ದಿನ 589 ರೂ. ಅಥವಾ ಶೇ 27ರಷ್ಟು ಕುಸಿತ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ನವೆಂಬರ್ 18ರ ಗುರುವಾರದಂದು ಇಳಿಕೆ ಕಂಡಿದೆ. ಲಿಸ್ಟಿಂಗ್ ದಿನ ಪೇಟಿಎಂ ಷೇರು ಶೇ 27ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದೆ.

Closing Bell: ಸೆನ್ಸೆಕ್ಸ್, ನಿಫ್ಟಿ ಇಳಿಕೆ; ಪೇಟಿಎಂ ಲಿಸ್ಟಿಂಗ್​ ದಿನ 589 ರೂ. ಅಥವಾ ಶೇ 27ರಷ್ಟು ಕುಸಿತ
ಪ್ರಾತಿನಿಧಿಕ ಚಿತ್ರ
Follow us
| Updated By: Srinivas Mata

Updated on: Nov 18, 2021 | 5:06 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸತತ ಮೂರನೇ ಸೆಷನ್ ನವೆಂಬರ್ 18ನೇ ತಾರೀಕಿನ ಗುರುವಾರದಂದು ಇಳಿಕೆ ಕಂಡಿದೆ. ವಾಹನ, ಲೋಹ, ಮಾಹಿತಿ ತಂತ್ರಜ್ಞಾನ, ಫಾರ್ಮಾ ಹಾಗೂ ರಿಯಾಲ್ಟಿ ವಲಯದಲ್ಲಿ ಮಾರಾಟ ಒತ್ತಡ ಕಂಡುಬಂತು. ದಿನಾಂತ್ಯಕ್ಕೆ ಸೆನ್ಸೆಕ್ಸ್ 433.05 ಪಾಯಿಂಟ್ಸ್ ಅಥವಾ ಶೇ 0.72ರಷ್ಟು ಕುಸಿತ ಕಂಡು, 59,575.28 ಪಾಯಿಂಟ್ಸ್​ನೊಂದಿಗೆ ವಹಿವಾಟು ಮುಕ್ತಾಯಗೊಂಡಿತು. ಇನ್ನು ನಿಫ್ಟಿ 133.90 ಪಾಯಿಂಟ್ಸ್​ ಅಥವಾ ಶೇ 0.75ರಷ್ಟು ಕೆಳಗೆ ಇಳಿದು, 17,764.80 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿಸಿದೆ. ಇಂದಿನ ವಹಿವಾಟಿನಲ್ಲಿ 997 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 2252 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ ಮತ್ತು 133 ಕಂಪೆನಿ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಲ್ಲ ವಲಯಗಳೂ ಇಳಿಕೆ ಕಂಡವು. ವಾಹನ ಹಾಗೂ ಲೋಹ ಸೂಚ್ಯಂಕಗಳು ತಲಾ ಶೇ 2ರಷ್ಟು ಕುಸಿತ ಕಂಡವು. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್​ ಸೂಚ್ಯಂಕಗಳು ತಲಾ ಶೇ 1.5ರಷ್ಟು ಇಳಿದಿವೆ.

ಇನ್ನು 2,150 ರೂಪಾಯಿಗೆ ಐಪಿಒ ವಿತರಣೆ ಮಾಡಿದ ಪೇಟಿಎಂ ಐಪಿಒ ಈ ದಿನ ಲಿಸ್ಟಿಂಗ್​ನಲ್ಲಿ ಶೇ 9ರಷ್ಟು ರಿಯಾಯಿತಿಯೊಂದಿಗೆ 1950 ರೂಪಾಯಿಯೊಂದಿಗೆ ಎನ್​ಎಸ್​ಇಯಲ್ಲಿ ಲಿಸ್ಟಿಂಗ್ ಆಯಿತು. ಅದೇ ರೀತಿ ಸೆನ್ಸೆಕ್ಸ್​ನಲ್ಲಿ 1955 ರೂಪಾಯಿಯೊಂದಿಗೆ ಲಿಸ್ಟಿಂಗ್ ಆಯಿತು. ದಿನದ ಕೊನೆಗೆ ಎನ್​ಎಸ್​ಇಯಲ್ಲಿ ಶೇ 27.40ರಷ್ಟು ಕುಸಿತಗೊಂಡು, 1560.80 ರೂಪಾಯಿಯೊಂದಿಗೆ ವ್ಯವಹಾರ ಮುಗಿಸಿತು. ಆ ಮೂಲಕ ಒಂದು ಷೇರಿಗೆ 589.20 ರೂಪಾಯಿ ನಷ್ಟವನ್ನು ಅನುಭವಿಸಿತು.

ಎನ್​ಎಸ್​ಇಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ ಶೇ 1.13 ಪವರ್​ಗ್ರಿಡ್ ಕಾರ್ಪೊರೇಷನ್ ಶೇ 0.76 ಐಒಸಿ ಶೇ 0.70 ಎಚ್​ಡಿಎಫ್​ಸಿ ಬ್ಯಾಂಕ್ ಶೇ 0.56 ಡಿವೀಸ್ ಲ್ಯಾಬ್ಸ್ ಶೇ 0.46

ಎನ್​ಎಸ್​ಇಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಟಾಟಾ ಮೋಟಾರ್ಸ್ ಶೇ -3.86 ಮಹೀಂದ್ರಾ ಅಂಡ್ ಮಹೀಂದ್ರಾ ಶೇ -3.22 ಟೆಕ್ ಮಹೀಂದ್ರಾ ಶೇ -3.13 ಲಾರ್ಸನ್ ಶೇ -2.86 ಎಚ್​ಸಿಎಲ್​ ಟೆಕ್ ಶೇ -2.80

ಇದನ್ನೂ ಓದಿ: Paytm Listing: ಪೇಟಿಎಂ ಷೇರು ವಿತರಣೆಗಿಂತ 200 ರೂಪಾಯಿ ಕಡಿಮೆಗೆ ಲಿಸ್ಟಿಂಗ್​; ದಿನದ ಕನಿಷ್ಠ 1586 ರೂ.