ನವದೆಹಲಿ, ಮಾರ್ಚ್ 4: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನೀಡಿದ್ದ ಬ್ಯಾಂಕಿಂಗ್ ಪರವಾನಿಗೆಯನ್ನು (Banking license) ರದ್ದುಗೊಳಿಸುವ ಸಾಧ್ಯತೆ ಇದೆ. ಹಿಂದೂ ಬಿಸಿನೆಸ್ ಲೈನ್ ಪತ್ರಿಕೆಯಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿದ್ದು ಅದರ ಪ್ರಕಾರ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್ ಕಳೆದುಕೊಳ್ಳಬಹುದು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಚಟುವಟಿಕೆಯನ್ನು ನಿರ್ಬಂಧಿಸಿದ್ದಾಗಲೇ ಬ್ಯಾಂಕಿಂಗ್ ಲೈಸೆನ್ಸ್ ಹಿಂಪಡೆಯಬಹುದು ಎಂದು ಸುದ್ದಿಗಳು ಇದ್ದವು. ಈಗ ಆ ಸುದ್ದಿಯನ್ನು ಇನ್ನಷ್ಟು ಬಲಗೊಳಿಸಿದೆ. ಒಂದು ವೇಳೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್ ಕಳೆದುಕೊಂಡರೆ, ಕಳೆದ 20 ವರ್ಷದಲ್ಲಿ ಇಂಥದ್ದು ಇದೇ ಮೊದಲು ಎಂಬಂತಾಗುತ್ತದೆ. ಲೈಸೆನ್ಸ್ ರದ್ದು ಮಾಡುವುದು ಅಷ್ಟೇ ಅಲ್ಲ, ಪೇಮೆಂಟ್ಸ್ ಬ್ಯಾಂಕ್ನ ನಿತ್ಯದ ಕಾರ್ಯಗಳ ಮೇಲೆ ನಿಗಾ ಇಡಲು ಆರ್ಬಿಐ ಒಬ್ಬ ಆಡಳಿತಗಾರರನ್ನು ನೇಮಿಸುವ ಸಾಧ್ಯತೆ ಇದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಆರ್ಬಿಐ ನಿರ್ಬಂಧಿಸಲು ಕೆಲ ಪ್ರಬಲ ಕಾರಣಗಳಿವೆ. ಆ ಬ್ಯಾಂಕ್ ತನ್ನ ಗ್ರಾಹಕರಿಗೆ ಖಾತೆ ನೀಡುವಾಗ ಸರಿಯಾಗಿ ಕೆವೈಸಿ ಪಡೆದಿಲ್ಲ ಎನ್ನುವುದು ಪ್ರಮುಖ ಆರೋಪ. ಪೇಮೆಂಟ್ಸ್ ಬ್ಯಾಂಕ್ ಮತ್ತು ಒನ್97 ಕಮ್ಯೂನಿಕೇಶನ್ಸ್ನ ಇತರ ಸಂಸ್ಥೆಗಳ ನಡುವೆ ಒಪ್ಪಂದ ಇದೆ. ಬ್ಯಾಂಕಿಂಗ್ ನಿಯಮದ ಪ್ರಕಾರ ಪೇಮೆಂಟ್ಸ್ ಬ್ಯಾಂಕ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪೇಟಿಎಂ ಮತ್ತು ಪೇಮೆಂಟ್ಸ್ ಬ್ಯಾಂಕ್ ಎರಡಕ್ಕೂ ಒಬ್ಬರೇ ಮುಖ್ಯಸ್ಥರಿದ್ದಾರೆ ಎಂಬುದು ಇನ್ನೊಂದು ಪ್ರಮುಖ ಆರೋಪ. ಈ ಕಾರಣಕ್ಕೆ ಬ್ಯಾಂಕಿಂಗ್ ಲೈಸೆನ್ಸ್ ರದ್ದುಗೊಳಿಸಲು ಆರ್ಬಿಐ ಮುಂದಾಗಿರಬಹುದು.
ಇದನ್ನೂ ಓದಿ: ಮಹಿಳೆಗೆ ಮಾಸಿಕ 1,000 ರೂ ಧನಸಹಾಯ; ಶಿಕ್ಷಣ ಕ್ಷೇತ್ರಕ್ಕೆ ಶೇ. 21ಕ್ಕಿಂತ ಹೆಚ್ಚು ಹಣ; ದೆಹಲಿ ಸರ್ಕಾರದ ಬಜೆಟ್ ಧಮಾಕ
ಪೇಟಿಎಂನ ಯುಪಿಐ ಮತ್ತಿತರ ಕಡೆ ಪೇಮೆಂಟ್ಸ್ ಬ್ಯಾಂಕ್ ಜೋಡಿತವಾಗಿದೆ. ಅದೆಲ್ಲವನ್ನೂ ಈಗ ಕಡಿದುಕೊಳ್ಳಬೇಕಾಗುತ್ತದೆ. ಪೇಟಿಎಂ ಮತ್ತು ಪೇಮೆಂಟ್ಸ್ ಬ್ಯಾಂಕ್ ನಡುವಿನ ಎಲ್ಲಾ ಒಪ್ಪಂದಗಳನ್ನು ಈಗ ಮುರಿದುಕೊಳ್ಳಲಾಗಿದೆ. ಪೇಮೆಂಟ್ಸ್ ಬ್ಯಾಂಕ್ ಬದಲು ಇತರ ಬ್ಯಾಂಕುಗಳೊಂದಿಗೆ ಪೇಟಿಎಂ ಒಪ್ಪಂದ ಮಾಡಿಕೊಳ್ಳಲು ಯತ್ನಿಸುತ್ತಿದೆ.
ಇದೇ ವೇಳೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಪಡೆದುಕೊಳ್ಳಲು ಕೆಲ ಪ್ರಮುಖ ಬ್ಯಾಂಕುಗಳು ತಯಾರಾಗಿವೆ. ಆದರೆ, ಲಕ್ಷಾಂತರ ಇರುವ ಖಾತೆಗಳಲ್ಲಿ ಹೊಸದಾಗಿ ಕೆವೈಸಿ ಪಡೆಯುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ, ಈ ಪ್ರಯತ್ನ ಇನ್ನೂ ಕೈಗೂಡಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ