IKEA Nagasandra Store: 9 ಫುಟ್ಬಾಲ್ ಸ್ಟೇಡಿಯಂನಷ್ಟು ದೊಡ್ಡ IKEA ಸ್ಟೋರ್ ನಾಗಸಂದ್ರದಲ್ಲಿ ಆರಂಭ; 2ರಿಂದ 3 ಗಂಟೆ ಕಾಯೋದು ತಪ್ಪಿಲ್ಲ!
ಕರ್ನಾಟಕದ ರಾಜಧಾನಿ ಬೆಂಗಳೂರಿನ ನಾಗಸಂದ್ರದಲ್ಲಿ IKEAದ ಮಳಿಗೆ ಶುರುವಾಗಿದ್ದು, ವಾರಾಂತ್ಯದಲ್ಲಿ ಭಾರೀ ಜನಸಂದಣಿ ಆಗಿ ಎರಡ್ಮೂರು ಗಂಟೆ ಕಾಯುವಂತಾಗಿದೆ.
ಬೆಂಗಳೂರಿನಲ್ಲಿ (Bengaluru) IKEA ಶುರುವಾಗಿದೆ. ಸ್ವೀಡಿಷ್ರಿಂದ ಸ್ಥಾಪಿಸಿದ, ಡಚ್ ಮೂಲದ ಬಹುರಾಷ್ಟ್ರೀಯ ಸಮೂಹ ಇದು. ಬೆಂಗಳೂರಿನಲ್ಲಿ ಇದು ಆರಂಭವಾದ ಮೊದಲ ವಾರಾಂತ್ಯಕ್ಕೆ ಭಾರೀ ಪ್ರಮಾಣದಲ್ಲಿ ಜನ ಸಂದಣಿ ಇತ್ತು. IKEAದಿಂದ ಜೋಡಿಸಲು ಸಿದ್ಧವಾದ ಪೀಠೋಪಕರಣಗಳನ್ನು ಮಾರಾಟ ಮಾಡಲಾಗುತ್ತದೆ ಹಾಗೂ ರೂಪಿಸಲಾಗುತ್ತದೆ. ಈ ಕಂಪೆನಿ ಮೊದಲ ಬಾರಿಗೆ ತನ್ನ ಸ್ಟೋರ್ ಅನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆರಂಭಿಸಿದೆ. ಅಂದಹಾಗೆ ಭಾರತದಲ್ಲಿ ಇದು ನಾಲ್ಕನೇ ಮಳಿಗೆ. ಈಗಾಗಲೇ ಹೈದರಾಬಾದ್, ನವೀಮುಂಬೈ ಹಾಗೂ ವೊರ್ಲಿಯಲ್ಲಿ ತೆರೆಯಲಾಗಿದೆ.
ನಿಮಗೆ ಅಚ್ಚರಿ ಎನಿಸಬಹುದು, ಬೆಂಗಳೂರಿನಲ್ಲಿ ಈ ಮಳಿಗೆಯೊಳಗೆ ಹೋಗುವುದಕ್ಕೆ ಜನ ಎರಡರಿಂದ ಮೂರು ಗಂಟೆ ಕಾದಿದ್ದಾರೆ. ಉದ್ದೋಉದ್ದದ ಸರತಿ ಸಾಲು. ನಿರೀಕ್ಷಿತ ರೀತಿಯಲ್ಲೇ ಭಾರೀ ಸ್ಪಂದನೆ ಬಂದಿದೆ. ಸದ್ಯಕ್ಕೆ ನಾಗಸಂದ್ರದಲ್ಲಿ ಈ ಮಳಿಗೆಗೆ ಕಾಯುವ ಸಮಯ 3 ಗಂಟೆ ಇದ್ದು, ಆನ್ಲೈನ್ ಮೂಲಕ ಯೋಜನೆ ರೂಪಿಸಿಕೊಳ್ಳಿ ಅಥವಾ ಶಾಪಿಂಗ್ ಮಾಡಿ ಡಂದು ಪೋಸ್ಟ್ ಮಾಡಲಾಗಿದೆ.
ಭಾರೀ ಸಂಖ್ಯೆಯಲ್ಲಿ ಜನ ಸೇರಿರುವಂಥ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಾಗಂತ ಇದೇನು ಸಣ್ಣ- ಪುಟ್ಟ ಸ್ಟೋರ್ ಅಲ್ಲ. 12.2 ಎಕರೆಯಷ್ಟು ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಹೆಚ್ಚು ಕಡಿಮೆ 9 ಫುಟ್ಬಾಲ್ ಸ್ಟೇಡಿಯಂನಷ್ಟು ದೊಡ್ಡದು ಅಂದುಕೊಳ್ಳಿ. ಜನರಿಂದ ಗಿಜಿಗುಡುವ ಈ ವಿಡಿಯೋಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಾನಾ ಬಗೆಯ ಕಮೆಂಟ್ಗಳು ಬರುತ್ತಿವೆ.
ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾವನ್ನು ಸಮೀಕರಿಸಿ, ಬಳಕೆದಾರರು ತಮಾಷೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ: ಮಕ್ಕಳು- ಮರಿಯೊಂದಿಗೆ ಎಷ್ಟು ಸಮಯ ಕಾಯಬೇಕು ಎಂಬ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕ್ಷಮೆ ಕೇಳಿರುವ IKEA, ಸೂಕ್ತ ವ್ಯವಸ್ಥೆ ಮಾಡುವ ಭರವಸೆ ಕೂಡ ನೀಡಿದೆ.
ಬೆಂಗಳೂರಿನ ನಾಗಸಂದ್ರದಲ್ಲಿ 12.2 ಎಕರೆ ಜಾಗದಲ್ಲಿ 4,60,000 ಚದರಡಿ ವ್ಯಾಪ್ತಿಯಲ್ಲಿ IKEA ನಾಗಸಂದ್ರ ಸ್ಟೋರ್ ಇದೆ. 7000ದಷ್ಟು ಹೋಮ್ ಫರ್ನಿಷಿಂಗ್ ಪ್ರಾಡಕ್ಟ್ಸ್ಗಳಿದ್ದು, ಜೂನ್ 22ನೇ ತಾರೀಕು ಸಾರ್ವಜನಿಕರಿಗಾಗಿ ಮುಕ್ತವಾಗಿದೆ.
ಇದನ್ನೂ ಓದಿ: ಬೆಂಗಳೂರು ಐಕಿಯಾ ಶಾಪಿಂಗ್ ಮಾಲ್ ಮಳಿಗೆಗೆ ಮುಗಿಬಿದ್ದ ಜನ; ನಾಗಸಂದ್ರ ಮೆಟ್ರೋ ಸ್ಟೇಷನ್ ಬಳಿ ಫುಲ್ ಟ್ರಾಫಿಕ್ ಜಾಮ್