Pepperfry CEO Death: ಪೆಪ್ಪರ್​ಫ್ರೈ ಸ್ಟಾರ್ಟಪ್​ನ ಸಿಇಒ ಅಂಬರೀಷ್ ಮೂರ್ತಿ ಹೃದಯಸ್ತಂಭನದಿಂದ ನಿಧನ

|

Updated on: Aug 08, 2023 | 12:35 PM

Ambareesh Murthy Dies of Cardiac Arrest: ಆನ್​ಲೈನ್ ಪೀಠೋಪಕರಣ ಮತ್ತು ಗೃಹ ಸರಕುಗಳ ಮಾರಾಟ ಕಂಪನಿ ಪೆಪ್ಪರ್​ಫ್ರೈನ ಸಿಇಒ 51 ವರ್ಷದ ಅಂಬರೀಷ್ ಮೂರ್ತಿ ಆಗಸ್ಟ್ 7ರಂದು ರಾತ್ರಿ ಹೃದಯಸ್ತಂಭನಗೊಂಡು ನಿಧನರಾಗಿದ್ದಾರೆ. ಅವರ ಸಹೋದ್ಯೋಗಿ ಹಾಗೂ ಪೆಪ್ಪರ್​ಫ್ರೈ ಸಹ-ಸಂಸ್ಥಾಪಕರು ಈ ಸಾವಿನ ವಿಚಾರವನ್ನು ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

Pepperfry CEO Death: ಪೆಪ್ಪರ್​ಫ್ರೈ ಸ್ಟಾರ್ಟಪ್​ನ ಸಿಇಒ ಅಂಬರೀಷ್ ಮೂರ್ತಿ ಹೃದಯಸ್ತಂಭನದಿಂದ ನಿಧನ
ಪೆಪ್ಪರ್​ಫ್ರೈ ಸ್ಥಾಪಕರು. ಬಲಬದಿಯಲ್ಲಿ ಅಂಬರೀಷ್ ಮೂರ್ತಿ, ಎಡಬದಿಯಲ್ಲಿ ಆಶಿಶ್ ಷಾ
Follow us on

ನವದೆಹಲಿ, ಆಗಸ್ಟ್ 8: ಪೆಪ್ಪರ್​ಫ್ರೈ ಎಂಬ ಪೀಠೋಪಕರಣ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸಿಇಒ ಅಂಬರೀಷ್ ಮೂರ್ತಿ (Pepperfry CEO Ambareesh Murthy) ನಿಧನರಾಗಿರುವ ಸುದ್ದಿ ಕೇಳಿಬಂದಿದೆ. ಲಡಾಖ್​ನ ಲೆಹ್ ನಗರದಲ್ಲಿ ಸೋಮವಾರ ರಾತ್ರಿ (ಆಗಸ್ಟ್ 7) 51 ವರ್ಷದ ಅವರು ಹೃದಯಸ್ತಂಭನಗೊಂಡು (Cardiac Arrest) ಇಹಲೋಕ ತ್ಯಜಿಸಿರುವುದು ತಿಳಿದುಬಂದಿದೆ. ಪೆಪ್ಪರ್​ಫ್ರೈನ ಇನ್ನೊಬ್ಬ ಸಹ-ಸಂಸ್ಥಾಪಕ ಆಶೀಷ್ ಶಾ ಅವರು ಈ ವಿಚಾರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡು, ಅಂಬರೀಷ್ ಮೂರ್ತಿ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.

‘ನನ್ನ ಸ್ನೇಹಿತ, ಗುರು, ಸಹೋದರ, ಆಪ್ತ ಅಂಬರೀಷ್ ಮೂರ್ತಿ ಇನ್ನಿಲ್ಲ. ಲೆಹ್​ನಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗಿ ನಿನ್ನೆ ರಾತ್ರಿ ಅವರನ್ನು ಕಳೆದುಕೊಂಡೆವು. ಅವರ ಕುಟುಂಬ ಮತ್ತು ಆಪ್ತರಿಗೆ ಈ ಅಗಲಿಕೆಯ ನೋವು ಸಹಿಸಲು ಶಕ್ತಿ ಸಿಗಲೆಂದು ದಯವಿಟ್ಟು ಪ್ರಾರ್ಥಿಸಿ’ ಎಂದು ಆಶೀಶ್ ಷಾ ಅವರು ಟ್ವೀಟ್ ಮಾಡಿದ್ದಾರೆ.

ಆಶೀಶ್ ಷಾ ಅವರ ಈ ಟ್ವೀಟ್​ಗೆ ಪ್ರತಿಕ್ರಿಯಿಸಿ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ಉದ್ದಿಮೆದಾರನಾಗುವುದು ಬಹಳ ಕಠಿಣವಾಗಿದೆ. ಅದರಲ್ಲೂ ಪೀಠೋಪಕರಣದಂಥ ವಿಭಾಗದಲ್ಲಿ ಉದ್ದಿಮೆ ಸ್ಥಾಪಿಸುವುದು ಹಾಗೂ ಪೆಪ್ಪರ್​ಫ್ರೈ ಬ್ರ್ಯಾಂಡ್ ಕಟ್ಟಿದ್ದು ಬಹಳ ಕಠಿಣವಾದುದು. ಅಂಬರೀಷ್ ಮೂರ್ತಿ ಬಗ್ಗೆ ಬಹಳ ದೊಡ್ಡ ಮಾತುಗಳನ್ನು ಕೇಳಿದ್ದೇನೆ. ಅವರ ತಂಡಕ್ಕೆ ಹಾಗು ಕುಟುಂಬಕ್ಕೆ ನನ್ನ ಸಂತಾಪ ಇದೆ’ ಎಂದು ರಾಜೀವ್ ಶ್ರೀವತ್ಸ ಟ್ಟೀಟಿಸಿದ್ದಾರೆ.


ಅಂಬರೀಷ್ ಮೂರ್ತಿ ಮತ್ತು ಆಶೀಶ್ ಷಾ ಅವರಿಬ್ಬರು ಸೇರಿ 2012ರಲ್ಲಿ ಪೆಪ್ಪರ್ ಫ್ರೈ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇದು ಆನ್​ಲೈನ್ ಪೀಠೋಪಕರಣ ಮತ್ತು ಗೃಹ ಸರಕುಗಳ ಮಾರಾಟ ಸಂಸ್ಥೆಯಾಗಿದೆ.

ಇದನ್ನೂ ಓದಿ: Vaibhav Taneja: ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆಯ ಹೊಸ ಸಿಎಫ್​ಒ ವೈಭವ್ ತನೇಜಾ ಯಾರು?

ಪೆಪ್ಪರ್​ಫ್ರೈ ಸ್ಥಾಪನೆಗೆ ಮುನ್ನ ಅಂಬರೀಷ್ ಮೂರ್ತಿ ಅವರು ಭಾರತ, ಫಿಲಿಪ್ಪೈನ್ಸ್ ಮತ್ತು ಮಲೇಷ್ಯಾದಲ್ಲಿ ಇಬೇ ಸಂಸ್ಥೆಯ ಕಂಟ್ರಿ ಮ್ಯಾನೇಜರ್ ಹುದ್ದೆಯನ್ನು ನಿಭಾಯಿಸಿದ್ದರು. ಅದಕ್ಕೆ ಮುನ್ನ ಅವರು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು.

ದೆಹಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ, ಕೋಲ್ಕತಾದ ಐಐಎಂನಲ್ಲಿ ಎಂಬಿಎ ಪಡೆದ ಅವರು ಲೆವಿ ಸ್ಟ್ರಾಸ್ ಇಂಡಿಯಾದ ಬ್ರ್ಯಾಂಡ್ ಲೀಡರ್ ಆಗಿದ್ದರು. ಅಲ್ಲಿ ಪ್ರಾಡಕ್ಟ್ ಡೆವಲಪ್ಮೆಂಟ್ ಮಾರ್ಕೆಟಿಂಗ್ ಮತ್ತು ರೀಟೇಲ್ ಸ್ಟ್ರಾಟಿಜೀಸ್ ಜವಾಬ್ದಾರಿಗಳನ್ನು ನಿಬಾಯಿಸಿದ್ದರು. ಹಾಗೆಯೇ, ಬ್ರಿಟಾನಿಯಾ ಇಂಡಸ್ಟ್ರಿಸ್ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದರು. ಬಳಿಕ ಅವರು 2012ರಲ್ಲಿ ಪೆಪ್ಪರ್ ಫ್ರೈ ಸ್ಥಾಪನೆ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ