ಸಾಧಾರಣ ಕೆಲಸ, ಸಾಧಾರಣ ಸಂಬಳ; ಕೋಟಿ ರೂ ಸೇವಿಂಗ್ಸ್ನೊಂದಿಗೆ ರಿಟೈರ್ ಆದ ಬೆಂಗಳೂರಿನ ವ್ಯಕ್ತಿ; ಇದು ಸಾಧ್ಯವಾಗಿದ್ದು ಹೇಗೆ?
Bangalore man gives tips of saving money: ಬೆಂಗಳೂರಿನಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು ರೆಡ್ಡಿಟ್ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. 10ನೇ ಕ್ಲಾಸ್ ಓದಿ ಪ್ರೂಫ್ ರೀಡಿಂಗ್ ಕೆಲಸ ಮಾಡುತ್ತಾ ಕೋಟ್ಯಾಧೀಶ್ವರ ಆದ ಸಂಗತಿ ವಿವರಿಸಿದ್ದಾರೆ. ಬಾಡಿಗೆ ಮನೆ, ಸಾಧಾರಣ ಸಂಬಳ ಇದ್ದರೂ ಒಂದು ಕೋಟಿ ರೂ ಸಂಪಾದಿಸಿ ರಿಟೈರ್ ಆಗಿ ನೆಮ್ಮದಿಯಿಂದಿದ್ದಾರೆ.

ಕೆಲವರು ಲಕ್ಷ ಲಕ್ಷ ಸಂಬಳ ಪಡೆದರೂ ಅವರ ಬ್ಯಾಂಕ್ ಅಕೌಂಟ್ನಲ್ಲಿ ಲಕ್ಷ ರೂ ಬ್ಯಾಲನ್ಸ್ ಕೂಡ ಇರೋದಿಲ್ಲ. ಇನ್ನೂ ಕೆಲವರು ಸಾವಿರಗಳ ಲೆಕ್ಕದಲ್ಲಿ ಸಂಬಳ ಪಡೆದು, ಬ್ಯಾಂಕಲ್ಲಿ ಹಲವು ಲಕ್ಷ ಬ್ಯಾಲನ್ಸ್ ಹೊಂದಿರುತ್ತಾರೆ. ಇದು ಹೇಗೆ ಸಾಧ್ಯ ಎನಿಸಬಹುದು. ಬೆಂಗಳೂರಿನಲ್ಲಿ ಪ್ರೂಫ್ರೀಡರ್ ಕೆಲಸ ಮಾಡುತ್ತಾ ಎರಡು ದಶಕ ವೃತ್ತಿ ನಡೆಸಿ 50 ವರ್ಷ ದಾಟುವ ಮೊದಲೇ ಕೋಟಿ ರೂನೊಂದಿಗೆ (savings) ನಿವೃತ್ತರಾದ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ (Reddit) ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅವರ ಮಾತುಗಳು ಬಹಳ ಕುತೂಹಲಕಾರಿಯಾಗಿವೆ.
ಈ ವ್ಯಕ್ತಿ ಓದಿದ್ದು 10ನೇ ಕ್ಲಾಸ್ ಮಾತ್ರ. 27ನೇ ವಯಸ್ಸಿನಲ್ಲಿ ಕೈಯಲ್ಲಿ 5,000 ರೂ ಇಟ್ಟುಕೊಂಡು ಬೆಂಗಳೂರಿಗೆ ಬಂದವರು. ಇವರ ಮೊದಲ ಸಂಬಳ 4,200 ರೂ. ಪ್ರೂಫ್ರೀಡಿಂಗ್ ಇವರ ಪ್ರಧಾನ ಕೆಲಸ. ಕೋವಿಡ್ ಸಂದರ್ಭದಲ್ಲಿ ನಿವೃತ್ತರಾದಾಗ ಅವರ ವಯಸ್ಸು 50 ವರ್ಷ ಕೂಡ ದಾಟಿರಲಿಲ್ಲ. ನಿವೃತ್ತರಾಗುವಾದ ಇದ್ದ ಸಂಬಳ 63,000 ರೂ. ಸುಮಾರು 20 ವರ್ಷದ ವೃತ್ತಿಯಲ್ಲಿ ಅವರ ಖರ್ಚು ವೆಚ್ಚ ಎಲ್ಲಾ ಕಳೆದು ಎಷ್ಟು ಹಣ ಉಳಿಸಿದ್ದಿರಬಹುದು?
ಈ ವ್ಯಕ್ತಿ ರೆಡ್ಡಿಟ್ನಲ್ಲಿ ಹಾಕಿರುವ ಪೋಸ್ಟ್ ಪ್ರಕಾರ ಇವರು ಒಂದು ಕೋಟಿ ರೂಗೂ ಅಧಿಕ ಸೇವಿಂಗ್ಸ್ ಹೊಂದಿದ್ದಾರೆ. ಬ್ಯಾಂಕ್ ಠೇವಣಿಗಳಲ್ಲಿ 1.01 ಕೋಟಿ ರೂ ಹಣ ಇಟ್ಟಿದ್ದಾರೆ. ಈಕ್ವಿಟಿಗಳಲ್ಲಿ 65,000 ರೂ ಹೊಂದಿದ್ದಾರೆ. ಈ ಎಫ್ಡಿಗಳಿಂದ ಬರುವ ಬಡ್ಡಿ ಆದಾಯ ತಿಂಗಳಿಗೆ 60,000 ರೂ.
ಇದನ್ನೂ ಓದಿ: ಪೋಸ್ಟ್ ಆಫೀಸ್: 20 ವರ್ಷಕ್ಕೆ 4 ಪಟ್ಟು ರಿಟರ್ನ್ ಕೊಡಬಲ್ಲ ಟಿಡಿ ಪ್ಲಾನ್
ಹಣ ಉಳಿಸುವ ಟ್ರಿಕ್ಸ್
ಈ ವ್ಯಕ್ತಿಯದ್ದು ಸರಳ ಜೀವನ. ಅದೇ ಅವರ ಟ್ರಂಪ್ ಕಾರ್ಡ್. ಬೆಂಗಳೂರಿನ ಹೊರವಲಯದಲ್ಲಿ ಒಂದು ಬೆಡ್ರೂಮ್ ಮನೆಯಲ್ಲಿ ವಾಸ ಇದ್ದಾರೆ. ಬಾಡಿಗೆ ಕೇವಲ 6,500 ರೂ. ಕಳೆದ 25 ವರ್ಷದಲ್ಲಿ ಇವರು ಮನೆ ಬದಲಿಸಿದ್ದು 4 ಬಾರಿ ಮಾತ್ರವಂತೆ. ಇವರು, ಹೆಂಡತಿ ಮತ್ತು ಮಗಳು, ಈ ಮೂವರು ಇರುವ ಕುಟುಂಬದ ತಿಂಗಳ ವೆಚ್ಚವು ಬಾಡಿಗೆ ಇತ್ಯಾದಿ ಎಲ್ಲಾ ಸೇರಿ 25,000 ರೂ ಕೂಡ ದಾಟುವುದಿಲ್ಲ.
ಸಾಲ ಪಡೆದಿಲ್ಲ, ಸಾಲ ಕೊಟ್ಟಿಲ್ಲ…
ಈ ವ್ಯಕ್ತಿ ತನ್ನಲ್ಲಿದ್ದ ಸ್ಕೂಟರ್ ಅನ್ನು ಮಾರಿ ಹಲವು ವರ್ಷಗಳೇ ಆಯಿತು. ಎಲ್ಲಿಗೇ ಹೋಗಬೇಕೆಂದರೆ ಬಹುತೇಕ ನಡೆದೇ ಹೋಗುತ್ತಾರೆ. ಬಹಳ ಆರೋಗ್ಯಯುತ ಜೀವನಶೈಲಿ ಇವರದ್ದು. ಐದು ಕಿಮೀ ಜಾಗ್ ಮಾಡಬಲ್ಲುರು.
ಇವರು ಯಾವತ್ತಿಗೂ ಯಾರಿಂದಲೂ ಒಂದು ಪೈಸೆ ಸಾಲ ಪಡೆದಿಲ್ಲ. ಮನೆ ಬಾಡಿಗೆ ಸರಿಯಾದ ಸಮಯಕ್ಕೆ ಪಾವತಿಸುವುದನ್ನು ನಿಲ್ಲಿಸಿಲ್ಲ. ಹಾಗೆಯೇ, ಯಾರಿಗೂ ಕೂಡ ಇವರು ಸಾಲ ಕೊಟ್ಟಿಲ್ಲ.
ಇದನ್ನೂ ಓದಿ: ವಿವಿಧ ವಯಸ್ಸಲ್ಲಿ ಎಷ್ಟೆಷ್ಟು ಸೇವಿಂಗ್ಸ್ ಮಾಡಬೇಕು? ರಾಧಿಕಾ ಗುಪ್ತಾ 10-30-50 ನಿಯಮ
ಬಹಳ ಸರಳ ಜೀವನಶೈಲಿ ಅಳವಡಿಸಿಕೊಂಡಿದ್ದರಿಂದ ದುಡಿಮೆಯ ಹಣದಲ್ಲಿ ಸಾಕಷ್ಟು ಉಳಿಸಲು ಇವರಿಂದ ಸಾಧ್ಯವಾಗಿದೆ. ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ಈ ಹಣವನ್ನು ಇರಿಸಿ, ತಿಂಗಳಿಗೆ 60,000 ರೂವರೆಗೆ ಬಡ್ಡಿ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ. ಈಗ ಈ 60,000 ರೂ ಆದಾಯದಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಉಳಿಸುತ್ತಾ ಹೋಗಿದ್ದಾರೆ. ಸಂಪತ್ತು ಶೇಖರಣೆಗೆ ಇದಲ್ಲವಾ ಉತ್ತಮ ಮಾರ್ಗ..!
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




