ಪೋಸ್ಟ್ ಆಫೀಸ್: 20 ವರ್ಷಕ್ಕೆ 4 ಪಟ್ಟು ರಿಟರ್ನ್ ಕೊಡಬಲ್ಲ ಟಿಡಿ ಪ್ಲಾನ್
Post Office Time Deposit scheme: ಕೋಟ್ಯಂತರ ಜನರಿಗೆ ವಿಶ್ವಾಸದ ಪ್ರತೀಕವಾಗಿರುವ ಪೋಸ್ಟ್ ಆಫೀಸ್ನಲ್ಲಿ ವಿವಿಧ ಕಿರು ಉಳಿತಾಯ ಯೋಜನೆಗಳಿವೆ. ಅದರಲ್ಲಿ ಟೈಮ್ ಡೆಪಾಸಿಟ್ ಯೋಜನೆಯೂ ಇದೆ. ಇದರಲ್ಲಿ ನಾಲ್ಕು ವಿವಿಧ ಅವಧಿಯ ಟೈಮ್ ಡೆಪಾಸಿಟ್ ಪ್ಲಾನ್ಗಳಿವೆ. ಗರಿಷ್ಠ ಬಡ್ಡಿ ಸಿಗುವ 5 ವರ್ಷದ ಟೈಮ್ ಡೆಪಾಸಿಟ್ ಉಪಯೋಗಿಸಿ ಒಳ್ಳೆಯ ರಿಟರ್ನ್ ಪಡೆಯಲು ಸಾಧ್ಯ.

ಗ್ರಾಮೀಣ ಭಾಗದಿಂದ ಹಿಡಿದು ನಗರಗಳವರೆಗೆ ಕೋಟ್ಯಂತರ ಜನರು ಪೋಸ್ಟ್ ಆಫೀಸ್ನಲ್ಲಿ (Post Office) ತಮ್ಮ ಉಳಿತಾಯ ಹಣವನ್ನು ಹೂಡಿಕೆ ಮಾಡುತ್ತಾರೆ. ಅಂಚೆ ಕಚೇರಿಯಲ್ಲಿ ಲಭ್ಯ ಇರುವ ವಿವಿಧ ಯೋಜನೆಗಳು ಜನಪ್ರಿಯವಾಗಿವೆ. ಸರ್ಕಾರದ ಖಾತ್ರಿ ಮತ್ತು ಪೋಸ್ಟ್ ಆಫೀಸ್ ಬಗ್ಗೆ ಜನರಿಗೆ ಈಗಲೂ ಇರುವ ನಂಬಿಕೆ ಇವು ಇಲ್ಲಿಯ ಸ್ಮಾಲ್ ಫೈನಾನ್ಸ್ ಯೋಜನೆಗಳನ್ನು ಹೆಚ್ಚು ಜನರಿಗೆ ತಲುಪಿಸಲು ಕಾರಣವಾಗಿವೆ. ಪೋಸ್ಟ್ ಆಫೀಸ್ನಲ್ಲಿ ಸಿಗುವ ಹಲವು ಹಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಟೈಮ್ ಡೆಪಾಸಿಟ್ ಪ್ಲಾನ್ ಒಂದು.
ಪೋಸ್ಟ್ ಆಫೀಸ್ ಟಿಡಿ ಪ್ಲಾನ್ ಒಂದು ರೀತಿಯಲ್ಲಿ ಬ್ಯಾಂಕುಗಳಲ್ಲಿನ ಫಿಕ್ಸೆಡ್ ಡೆಪಾಸಿಟ್ ರೀತಿಯಂಥವು. ನಿರ್ದಿಷ್ಟ ಅವಧಿಗೆ ಠೇವಣಿ ಇಡಲು ಅವಕಾಶ ಕೊಡುತ್ತವೆ. ಷೇರು, ಮ್ಯೂಚುವಲ್ ಫಂಡ್ ಇತ್ಯಾದಿ ಅಧಿಕ ರಿಸ್ಕ್ ಇರುವ ಯಂತ್ರಗಳಲ್ಲಿ ಹೂಡಿಕೆ ಮಾಡಲು ಭಯ ಇದ್ದವರಿಗೆ ಈ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಉತ್ತಮ ಆಯ್ಕೆ. ಉತ್ತಮ ಬಡ್ಡಿದರ ನಿರೀಕ್ಷಿಸಬಹುದು.
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್, ನಾಲ್ಕು ಆಯ್ಕೆಗಳು
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆಯಲ್ಲಿ ನಾಲ್ಕು ವಿವಿಧ ಅವಧಿಯ ಪ್ಲಾನ್ಗಳಿವೆ. ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಮತ್ತು ಐದು ವರ್ಷದ ಪ್ಲಾನ್ಗಳಿವೆ. ಒಂದು ವರ್ಷದ ಟೈಮ್ ಡೆಪಾಸಿಟ್ಗೆ ಕಡಿಮೆ ವಾರ್ಷಿಕ ರಿಟರ್ನ್ ಸಿಗುತ್ತದೆ. ಐದು ವರ್ಷಕ್ಕೆ ಗರಿಷ್ಠ ರಿಟರ್ನ್ ಸಿಗುತ್ತದೆ. ಐದು ವರ್ಷದ ಟಿಡಿ ಪ್ಲಾನ್ಗೆ ಐಟಿ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಪಡೆಯುವ ಅವಕಾಶವೂ ಇರುತ್ತದೆ.
ಇದನ್ನೂ ಓದಿ: ಎರಡೂವರೆ ಲಕ್ಷ ಪೋಸ್ಟ್ಮ್ಯಾನ್ಗಳಿಗೆ ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಗಳಾಗಲು ಸಿಗಲಿದೆ ತರಬೇತಿ
ಎಷ್ಟು ರಿಟರ್ನ್ ನೀಡುತ್ತವೆ ಟಿಡಿ ಪ್ಲಾನ್ಗಳು?
- ಪೋಸ್ಟ್ ಆಫೀಸ್ 1 ವರ್ಷದ ಡೆಪಾಸಿಟ್: ಶೇ 6.9 ಬಡ್ಡಿ
- ಪೋಸ್ಟ್ ಆಫೀಸ್ 2 ವರ್ಷದ ಡೆಪಾಸಿಟ್: ಶೇ 7.0 ಬಡ್ಡಿ
- ಪೋಸ್ಟ್ ಆಫೀಸ್ 3 ವರ್ಷದ ಡೆಪಾಸಿಟ್: ಶೇ 7.1 ಬಡ್ಡಿ
- ಪೋಸ್ಟ್ ಆಫೀಸ್ 5 ವರ್ಷದ ಡೆಪಾಸಿಟ್: ಶೇ 7.5 ಬಡ್ಡಿ
ನೀವು ಐದು ವರ್ಷದ ಟೈಮ್ ಡೆಪಾಸಿಟ್ ಪ್ಲಾನ್ ಆಯ್ದುಕೊಂಡರೆ ಬಹುತೇಕ ಬ್ಯಾಂಕುಗಳ ಎಫ್ಡಿಗಿಂತ ಉತ್ತಮ ರಿಟರ್ನ್ ಕೊಡಬಲ್ಲುದು. ಈ ಪ್ಲಾನ್ನಲ್ಲಿ ನೀವು ಐದು ವರ್ಷದವರೆಗೆ ಠೇವಣಿ ಇಡಬಹುದು. ನಂತರ ಬೇಕಾದರೆ ಮತ್ತೂ ಐದು ವರ್ಷಕ್ಕೆ ಮರು ಹೂಡಿಕೆ ಮಾಡಬಹುದು.
ನೀವು ಐದು ಲಕ್ಷ ರೂ ಹಣವನ್ನು ಐದು ವರ್ಷಕ್ಕೆ ಠೇವಣಿ ಇಟ್ಟಾಗ, ಅದು ಮೆಚ್ಯೂರಿಟಿಗೆ ಬಂದಾಗ 7.21 ಲಕ್ಷ ರೂ ಆಗುತ್ತದೆ. ಅಷ್ಟೂ ಹಣವನ್ನು ನೀವು ಮತ್ತೆ ಅದೇ ಹೂಡಿಕೆ ಮಾಡಿದಾಗ ಐದು ವರ್ಷದಲ್ಲಿ 10.40 ಲಕ್ಷ ರೂ ಆಗುತ್ತದೆ. ಅಂದರೆ ನಿಮ್ಮ ಐದು ಲಕ್ಷ ರೂ ಹಣವು ಹತ್ತು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ವಿವಿಧ ವಯಸ್ಸಲ್ಲಿ ಎಷ್ಟೆಷ್ಟು ಸೇವಿಂಗ್ಸ್ ಮಾಡಬೇಕು? ರಾಧಿಕಾ ಗುಪ್ತಾ 10-30-50 ನಿಯಮ
ನೀವು ಈ 10.40 ಲಕ್ಷ ರೂ ಹಣವನ್ನು ಮತ್ತೆ ಐದು ವರ್ಷದ ಟೈಮ್ ಡೆಪಾಸಿಟ್ಗೆ ಇಟ್ಟರೆ ಹಣ 15.08 ಲಕ್ಷ ರೂ ಆಗುತ್ತದೆ. ಇದನ್ನು ಮರು ಹೂಡಿಕೆ ಮಾಡಿದಾಗ ಬಹುತೇಕ 22 ಲಕ್ಷ ರೂ ರಿಟರ್ನ್ ನಿಮಗೆ ಸಿಗುತ್ತದೆ. ನಿಮ್ಮ ಐದು ಲಕ್ಷ ರೂ ಹಣವು 20 ವರ್ಷಕ್ಕೆ 22 ಲಕ್ಷ ರೂ ಆಗಿರುತ್ತದೆ.
ಗಮನಿಸಿ: ಟೈಮ್ ಡೆಪಾಸಿಟ್ ಸೇರಿದಂತೆ ವಿವಿಧ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಿಗೆ ಬಡ್ಡಿದರವನ್ನು ಆಗಾಗ ಪರಿಷ್ಕರಿಸಲಾಗುತ್ತಿರುತ್ತದೆ. ಆರ್ಬಿಐನ ರಿಪೋ ದರದ ಆಧಾರದ ಮೇಲೆ ಈ ಸ್ಕೀಮ್ಗಳ ದರದಲ್ಲೂ ಬದಲಾವಣೆ ಮಾಡಬಹುದು. ಹೀಗಾಗಿ, ಸ್ಕೀಮ್ ಅವಧಿಯಲ್ಲೇ ನಿಶ್ಚಿತವಾಗಿ ಒಂದೇ ದರ ಇರುತ್ತದೆಂದು ಖಾತ್ರಿ ಇಲ್ಲ. ಬಡ್ಡಿ ಹೆಚ್ಚಿಸಬಹುದು ಅಥವಾ ಇಳಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Mon, 1 September 25




