ಯಡವಟ್ಟಾಗದಂತೆ ನಿಮಗೆ ಲಾಭವಾಗುವಂತೆ ಕ್ರೆಡಿಟ್ ಕಾರ್ಡ್ ಬಳಸುವ ತಂತ್ರ ತಿಳಿದಿರಿ; ಇಲ್ಲಿದೆ ಟಿಪ್ಸ್

Credit Card can make you or break you: ಕ್ರೆಡಿಟ್ ಕಾರ್ಡ್ ಎಂದರೆ ಖರೀದಿಸಲು ಸಾಲ ನೀಡುವ ಒಂದು ಸೌಲಭ್ಯ. ನಿರ್ದಿಷ್ಟ ಅವಧಿಯವರೆಗೆ ಸಾಲಕ್ಕೆ ಬಡ್ಡಿ ಇರುವುದಿಲ್ಲ. ಕ್ರೆಡಿಟ್ ಕಾರ್ಡ್ ಅನ್ನು ಅನುಕೂಲವಾಗಿ ಮಾಡಿಕೊಳ್ಳುವ ಅಥವಾ ಮಾರಕವಾಗಿಸುವ ಅವಕಾಶ ಎರಡೂ ನಿಮ್ಮ ಕೈಲಿರುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವ ಕೆಲ ತಂತ್ರಗಳ ಮಾಹಿತಿ ಈ ಲೇಖನದಲ್ಲಿದೆ.

ಯಡವಟ್ಟಾಗದಂತೆ ನಿಮಗೆ ಲಾಭವಾಗುವಂತೆ ಕ್ರೆಡಿಟ್ ಕಾರ್ಡ್ ಬಳಸುವ ತಂತ್ರ ತಿಳಿದಿರಿ; ಇಲ್ಲಿದೆ ಟಿಪ್ಸ್
ಕ್ರೆಡಿಟ್ ಕಾರ್ಡ್ ಬಳಸುವ ತಂತ್ರ

Updated on: Oct 07, 2025 | 11:24 AM

ಕ್ರೆಡಿಟ್ ಕಾರ್ಡ್ (Credit Card) ವಿಚಾರದಲ್ಲಿ ಮೂರು ವರ್ಗದ ಜನರಿದ್ದಾರೆ. ಮೊದಲನೆಯ ವರ್ಗದವರು ಕ್ರೆಡಿಟ್ ಕಾರ್ಡ್ ಎಂದರೆ ಮುಗಿಬಿದ್ದು ಹೋಗುತ್ತಾರೆ. ಸಿಕ್ಕಾಪಟ್ಟೆ ಬಳಸಿ ಸಾಲದ ಶೂಲಕ್ಕೆ ಸಿಲುಕಲೂ ಹಿಂಜರಿಯುವುದಿಲ್ಲ. ಎರಡನೇ ವರ್ಗದ ಜನರು, ಕ್ರೆಡಿಟ್ ಕಾರ್ಡ್ ಎಂದರೆ ಓಡಿ ಹೋಗುತ್ತಾರೆ. ಅದನ್ನು ಯೋಚಿಸಲೂ ಇಷ್ಟ ಪಡುವುದಿಲ್ಲ. ಮೂರನೇ ಕೆಟಗರಿಯ ಜನರು ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಲಾಭಕ್ಕೆ ಅನುವಾಗುವ ರೀತಿಯಲ್ಲಿ ಜಾಣ್ಮೆಯಿಂದ ಉಪಯೋಗಿಸುತ್ತಾರೆ.

ಕ್ರೆಡಿಟ್ ಕಾರ್ಡ್ ಅನ್ನು ಜಾಣ್ಮೆಯಿಂದ ಉಪಯೋಗಿಸುವ ತಂತ್ರಗಳು ತಿಳಿದಿರಿ…

ಕ್ರೆಡಿಟ್ ಕಾರ್ಡ್ ಎಂದರೆ ಹೆಸರೇ ಸೂಚಿಸುವಂತೆ ಇತಿಮಿತಿಯಲ್ಲಿ ಸಾಲ ಕೊಡುವ ಸೌಲಭ್ಯ. ನೀವು ಶಾಪಿಂಗ್ ಮಾಡಿದಾಗ ಹಣ ಪಾವತಿಸಲು ಉಚಿತವಾಗಿ ಸಾಲ ನೀಡಲಾಗುತ್ತದೆ. ನಿಮ್ಮ ಇತಿಮಿತಿ, ಇದರ ಪರಿಮಿತಿಯನ್ನು ತಿಳಿದಿದ್ದರೆ ಕ್ರೆಡಿಟ್ ಕಾರ್ಡ್ ನಿಮಗೆ ವರದಾನ. ಇಲ್ಲದಿದ್ದರೆ ಸಾಲದ ಗಾಳದೊಳಗೆ ಸಿಲುಕಿಸುವ ಕೂಪವಾಗಬಹುದು. ಎಲ್ಲವೂ ಕೂಡ ನಿಮ್ಮ ಕೈಯಲ್ಲೇ ಇರುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ನಿಮಗೆ ಅನುಕೂಲವಾಗುವ ರೀತಿಯಲ್ಲಿ ಬಳಸುವುದು ಹೇಗೆ ಎನ್ನುವ ಟಿಪ್ಸ್ ಮುಂದಿವೆ:

ಕ್ರೆಡಿಟ್ ಕಾರ್ಡ್​ನಲ್ಲಿ ಮಾಡುವ ವೆಚ್ಚಕ್ಕೆ ಒಂದು ಮಿತಿ ಇರಲಿ

ಒಂದೊಂದು ಕ್ರೆಡಿಟ್ ಕಾರ್ಡ್​ಗೂ ನಿರ್ದಿಷ್ಟ ಕ್ರೆಡಿಟ್ ಲಿಮಿಟ್ ನೀಡಲಾಗಿರುತ್ತದೆ. ಕೆಲ ಕಾರ್ಡ್​ಗಳಿಗೆ 20,000 ರೂ ಇರಬಹುದು. ಇನ್ನೂ ಕೆಲ ಕಾರ್ಡ್​ಗಳಿಗೆ 2,00,000 ರೂ ಮಿತಿ ನೀಡಲಾಗಿರಬಹುದು. ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಮಿತಿಯಲ್ಲಿ ನಿಮ್ಮ ವೆಚ್ಚವು ಶೇ. 75 ಅನ್ನು ಮೀರದಂತೆ ಎಚ್ಚರ ವಹಿಸಿ. ಪೂರ್ಣ ಮಿತಿ ಬಳಸಿದರೆ ಕ್ರೆಡಿಟ್ ಸ್ಕೋರ್​ಗೆ ಧಕ್ಕೆಯಾಬಹುದು. ನಿಮಗೂ ಹೊರೆಯಾಗಬಹುದು.

ಇದನ್ನೂ ಓದಿ: ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚು ಲಾಭ ತಂದಿದೆ ಸರ್ಕಾರದ ಎನ್​ಪಿಎಸ್ ಸ್ಕೀಮ್

45 ದಿನಗಳ ಬಡ್ಡಿರಹಿತ ಅವಧಿಯನ್ನು ಉಪಯೋಗಿಸಿ

ಕ್ರೆಡಿಟ್ ಕಾರ್ಡ್​ಗಳಲ್ಲಿ ಸಾಮಾನ್ಯವಾಗಿ ತಿಂಗಳಿಗೊಮ್ಮೆ ಬಿಲ್ ಜನರೇಟ್ ಆಗುತ್ತದೆ. ನೀವು ಕ್ರೆಡಿಟ್ ಕಾರ್ಡ್ ಉಪಯೋಗಿಸಿದಾಗ ಸಿಗುವ ಸಾಲಕ್ಕೆ 45 ದಿನಗಳವರೆಗೆ ಬಡ್ಡಿ ಇರುವುದಿಲ್ಲ. ಕೆಲ ಕಾರ್ಡ್​ಗಳಲ್ಲಿ ಈ ಬಡ್ಡಿರಹಿತ ಅವಧಿ ಹೆಚ್ಚು ಇರಬಹುದು. ನಿಮ್ಮ ಬಿಲ್ಲಿಂಗ್ ದಿನಾಂಕ ಹಾಗೂ ಬಡ್ಡಿರಹಿತ ಅವಧಿ ಏನೆಂದು ತಿಳಿದಿರಿ. ಬಿಲ್ ಜನರೇಟ್ ಆದ ಬಳಿಕ ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚು ಇರಲಿ. ಇದರಿಂದ 45 ದಿನಗಳ ಬಡ್ಡಿರಹಿತ ಅವಧಿಯ ಸೌಲಭ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬಹುದು.

ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ಒಂದು ನಿಗಾ ಇರಲಿ

ನೀವು ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಇದ್ದು ಎಲ್ಲದರಲ್ಲೂ ಎಲ್ಲದಕ್ಕೂ ಕಾರ್ಡ್ ಬಳಸುತ್ತಿದ್ದರೆ ವೆಚ್ಚ ಕೈಮೀರಿ ಹೋಗಬಹುದು. ಇಎಂಐ ಆಗಿ ಪರಿವರ್ತಿಸಬಹುದಾದರೂ ಎಲ್ಲಾ ವೆಚ್ಚಗಳನ್ನು ಇಎಂಐಗೆ ಪರಿವರ್ತಿಸಿದರೆ ಅದು ದೊಡ್ಡ ಸಾಲವಾಗಿ ಪರಿಣಮಿಸಬಹುದು. ಸಾಲದ ಶೂಲಕ್ಕೆ ನೀವು ಸಿಲುಕಬಹುದು. ಕ್ರೆಡಿಟ್ ಕಾರ್ಡ್​ನಲ್ಲಿ ಮಾಡುವ ಪ್ರತಿಯೊಂದು ವೆಚ್ಚವನ್ನೂ ನೀವು ತಪ್ಪದೇ ಟ್ರ್ಯಾಕ್ ಮಾಡಬೇಕು.

ಇದನ್ನೂ ಓದಿ: ಎಲ್ಲಾ ಪೋಸ್ಟ್ ಆಫೀಸ್ ಯೋಜನೆಗಳೂ ತೆರಿಗೆಮುಕ್ತವಲ್ಲ; ಟಿಡಿಎಸ್ ಕಡಿತವಾಗುವ ಕೆಲ ಸ್ಕೀಮ್​ಗಳಿವು

ಮಿನಿಮಮ್ ಬ್ಯಾಲನ್ಸ್ ಕಟ್ಟಿದರೆ ಸಾಕು ಎನ್ನುವ ಧೋರಣೆ ಬೇಡ

ಬಹಳ ಜನರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತ ಬಹಳ ದೊಡ್ಡದಿದ್ದಾಗ ಮಿನಿಮಮ್ ಮೊತ್ತವನ್ನು ಮಾತ್ರವೇ ಪಾವತಿಸುವುದುಂಟು. ಇದರಿಂದ ನೀವು ಪೆನಾಲ್ಟಿಯಿಂದ ತಪ್ಪಿಸಿಕೊಳ್ಳಬಹುದೇ ಹೊರತು ಬಡ್ಡಿ ಹೇರಿಕೆಯನ್ನು ತಪ್ಪಿಸಲಾಗದು.

ಕ್ರೆಡಿಟ್ ಕಾರ್ಡ್ ಬಳಕೆಯಿಂದ ಫ್ರೀ ಆಫರ್ಸ್ ತಿಳಿದಿರಿ

ಕ್ರೆಡಿಟ್ ಕಾರ್ಡ್ ಕಂಪನಿಗಳು ತಮ್ಮ ಕಾರ್ಡ್ ಬಳಕೆಗೆ ಉತ್ತೇಜಿಸಲು ವಿವಿಧ ರೀತಿಯ ಫ್ರೀ ಆಫರ್, ರಿವಾರ್ಡ್ ಪಾಯಿಂಟ್ಸ್ ಇತ್ಯಾದಿ ಕೊಡುತ್ತವೆ. ಇಂಥ ಆಫರ್ಸ್ ಏನೇನು ಎಂಬುದು ತಿಳಿದಿರಲಿ. ನಿಮಗೆ ಅವಶ್ಯಕವಾದ ಖರೀದಿಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಈ ಆಫರ್ ಅನ್ನು ಉಪಯೋಗಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ