ಎಲ್ಲಾ ಪೋಸ್ಟ್ ಆಫೀಸ್ ಯೋಜನೆಗಳೂ ತೆರಿಗೆಮುಕ್ತವಲ್ಲ; ಟಿಡಿಎಸ್ ಕಡಿತವಾಗುವ ಕೆಲ ಸ್ಕೀಮ್ಗಳಿವು
Post office scheme without tax benefits: ಹಣ ಉಳಿತಾಯಕ್ಕೆ ಅಂಚೆ ಕಚೇರಿ ಯೋಜನೆಗಳು ಉತ್ತಮ ಮಾರ್ಗ ಎನಿಸಿವೆ. ಬಹಳಷ್ಟು ಜನರು ಟ್ಯಾಕ್ಸ್ ಬೆನಿಫಿಟ್ಗೆಂದು ಪೋಸ್ಟ್ ಆಫೀಸ್ ಸ್ಕೀಂಗಳಲ್ಲಿ ಹೂಡಿಕೆ ಮಾಡಲು ಮುಂದಾಗುವುದುಂಟು. ಆದರೆ, ಕೆಲ ಸ್ಕೀಮ್ಗಳಲ್ಲಿ ಸಿಗುವ ಲಾಭಕ್ಕೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಈ ರೀತಿ ಟ್ಯಾಕ್ಸ್ ಬೆನಿಫಿಟ್ ಇಲ್ಲದ ಕೆಲ ಪೋಸ್ಟ್ ಆಫೀಸ್ ಸ್ಕೀಮ್ಗಳ ಪಟ್ಟಿ ಇಲ್ಲಿದೆ.

ಅಂಚೆ ಕಚೇರಿಯಲ್ಲಿ ಹಲವು ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಿವೆ. ಅಲ್ಪಾವಧಿ ಹಾಗೂ ದೀರ್ಘಾವಧಿ ಎರಡೂ ರೀತಿಯ ಹೂಡಿಕೆಗಳ ಆಯ್ಕೆ ಇದೆ. ಬಹಳಷ್ಟು ಹೂಡಿಕೆದಾರರು ಪೋಸ್ಟ್ ಆಫೀಸ್ ಸ್ಕೀಮ್ಗಳಲ್ಲಿ ಟ್ಯಾಕ್ಸ್ ಬೆನಿಫಿಟ್ ಉದ್ದೇಶಕ್ಕೆ ಹೂಡಿಕೆ ಮಾಡುವುದುಂಟು. ಗಮನಿಸಬೇಕಾದ ಸಂಗತಿ ಎಂದರೆ, ಪಾವತಿಯ ಮೌಲ್ಯವು ಒಂದು ನಿರ್ದಿಷ್ಟ ಮಿತಿಯನ್ನು ಮೀರಿದಾಗ ಮಾತ್ರ ಟಿಡಿಎಸ್ (TDS- Tax Deducted on Source) ಕಡಿತಗೊಳಿಸಲಾಗುತ್ತದೆ. ಪಾವತಿ ಮೌಲ್ಯವು ಈ ಮಿತಿಗಿಂತ ಹೆಚ್ಚಿರದಿದ್ದರೆ ಯಾವುದೇ ಟಿಡಿಎಸ್ (Tax) ಕಡಿತಗೊಳಿಸಲಾಗುವುದಿಲ್ಲ.
ಹೆಚ್ಚಿನ ಪೋಸ್ಟ್ ಆಫೀಸ್ ಸ್ಕೀಮ್ಗಳು ತೆರಿಗೆ ವಿನಾಯಿತಿ ನೀಡುತ್ತವಾದರೂ ಕೆಲ ಸ್ಕೀಮ್ಗಳಲ್ಲಿ ಈ ಅವಕಾಶ ಇರುವುದಿಲ್ಲ. ಇದು ಬಹಳ ಜನರಿಗೆ ಗೊತ್ತೇ ಇರುವುದಿಲ್ಲ. ಟ್ಯಾಕ್ಸ್ ಉಳಿಸಬಹುದು ಎಂದು ಕಣ್ಮುಚ್ಚಿ ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ಹೂಡಿಕೆ ಮಾಡುವುದುಂಟು. ತೆರಿಗೆ ವಿನಾಯಿತಿ ಅವಕಾಶ ಇಲ್ಲದ ಕೆಲ ಪೋಸ್ಟ್ ಆಫೀಸ್ಗಳ ಬಗ್ಗೆ ವಿವರ ಇಲ್ಲಿದೆ.
ಟಿಡಿಎಸ್ ಎಂದರೇನು?
ನಮ್ಮ ಆದಾಯದ ಹಣವನ್ನು ಮೂಲದಿಂದಲೇ ನೇರವಾಗಿ ಟ್ಯಾಕ್ಸ್ ಮುರಿದುಕೊಳ್ಳುವುದೇ ಟಿಡಿಎಸ್. ಇದು ಒಂದು ರೀತಿಯ ಆದಾಯ ತೆರಿಗೆ. ಹಲವು ಉದ್ಯೋಗಿಗಳಿಗೆ ಅವರ ಸಂಬಳದಲ್ಲಿ ನೇರವಾಗಿ ಟಿಡಿಎಸ್ ಮುರಿದುಕೊಳ್ಳುವುದುಂಟು. ಫಿಕ್ಸೆಡ್ ಡೆಪಾಸಿಟ್ ಮೆಚ್ಯೂರ್ ಆದಾಗಲೂ ಟಿಡಿಎಸ್ ಮುರಿದುಕೊಳ್ಳುವುದುಂಟು. ಈ ತೆರಿಗೆಯು ತತ್ಕ್ಷಣವೇ ಸರ್ಕಾರಕ್ಕೆ ರವಾನೆಯಾಗುತ್ತದೆ. ನೀವು ಐಟಿ ರಿಟರ್ನ್ ಸಲ್ಲಿಸುವಾಗ, ಟ್ಯಾಕ್ಸ್ ಡಿಡಕ್ಷನ್ ಅವಕಾಶ ಸಿಕ್ಕಿದರೆ ಈ ಟಿಡಿಎಸ್ ಹಣವನ್ನು ರೀಫಂಡ್ ಮಾಡಿಸಿಕೊಳ್ಳಬಹುದು.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಈ ಸ್ಕೀಮ್ನಿಂದ ತಿಂಗಳಿಗೆ 9,250 ರೂವರೆಗೂ ನಿಯಮಿತ ಆದಾಯ ಸೃಷ್ಟಿಸಿ
ಟಿಡಿಎಸ್ ಅನ್ನು ಯಾವಾಗ ಕಡಿತಗೊಳಿಸಲಾಗುತ್ತದೆ?
ಸಾಮಾನ್ಯ ನಾಗರಿಕರಿಗೆ, ಒಂದು ಹಣಕಾಸು ವರ್ಷದಲ್ಲಿ ಬಡ್ಡಿ ಆದಾಯವು 50,000 ರೂ. ಮೀರಿದರೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಆದರೆ ಹಿರಿಯ ನಾಗರಿಕರಿಗೆ, ಈ ಮಿತಿ 1 ಲಕ್ಷ ರೂ ಇರುತ್ತದೆ.
ಟಿಡಿಎಸ್ ಕಡಿತಗೊಳಿಸಲಾಗುವ ಅಂಚೆ ಕಚೇರಿ ಯೋಜನೆಗಳಿವು
ಪೋಸ್ಟ್ ಆಫೀಸ್ ಆವರ್ತನ ಠೇವಣಿ ಸ್ಕೀಮ್ (RD)
ನಿಮ್ಮ ಬಡ್ಡಿ ಆದಾಯ ₹50,000 ಮೀರಿದರೆ, ಅಂಚೆ ಕಚೇರಿಯು ನಿಮ್ಮ ಆರ್‌ಡಿ ಹೂಡಿಕೆಗಳ ಮೇಲಿನ ಬಡ್ಡಿ ಆದಾಯದಿಂದ ಮೂಲದಲ್ಲೇ ತೆರಿಗೆಯನ್ನು ಕಡಿತಗೊಳಿಸುತ್ತದೆ. ಮೊತ್ತವು ನಿಗದಿತ ಮಿತಿಗಿಂತ ಕಡಿಮೆಯಿದ್ದರೆ, ಅಂಚೆ ಕಚೇರಿಯಲ್ಲಿ ಠೇವಣಿ ಮಾಡಿದ ಆರ್‌ಡಿ ಮೊತ್ತದ ಮೇಲೆ ಯಾವುದೇ ತೆರಿಗೆಯನ್ನು ಕಡಿತಗೊಳಿಸಲಾಗುವುದಿಲ್ಲ.
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್
ಈ ಯೋಜನೆಯಡಿಯಲ್ಲಿ ಹೂಡಿಕೆದಾರರು ಎರಡು ವರ್ಷಗಳೊಳಗೆ ₹2 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಹೂಡಿಕೆ ಮೊತ್ತದ ಮೇಲೆ 7.5% ಬಡ್ಡಿ ಸಿಗುತ್ತದೆ. ಆದರೆ ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಇರುವುದಿಲ್ಲ. ಬಡ್ಡಿ ಆದಾಯ ಮಿತಿಗಿಂತ ಹೆಚ್ಚಿದರೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)
ಒಂದು ಹಣಕಾಸು ವರ್ಷದಲ್ಲಿ ₹1 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿ ಗಳಿಸಿದರೆ TDS ಕಡಿತಗೊಳಿಸಲಾಗುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಅಡಿಯಲ್ಲಿ, ಹಣಕಾಸು ವರ್ಷದಲ್ಲಿ ₹1.5 ಲಕ್ಷದವರೆಗಿನ ಠೇವಣಿಗಳ ಮೇಲೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಲಭ್ಯವಿದೆ.
ಇದನ್ನೂ ಓದಿ: 45ನೇ ವಯಸ್ಸಿಗೆ 4.7 ಕೋಟಿ ರೂ; ಬ್ಯುಸಿನೆಸ್ ಇಲ್ಲ, ಷೇರು ಇಲ್ಲ, ಆದರೂ ಸಂಪಾದಿಸಿದ್ದು ಹೇಗೆ?
ರಾಷ್ಟ್ರೀಯ ಉಳಿತಾಯ ಪತ್ರ (NSC)
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ನಲ್ಲಿ ಗಳಿಸಿದ ಬಡ್ಡಿಯು TDS ಗೆ ಒಳಪಡುವುದಿಲ್ಲ. ಒಂದು ಹಣಕಾಸು ವರ್ಷದಲ್ಲಿ NSC ಗಳಲ್ಲಿ ₹1.5 ಲಕ್ಷದವರೆಗಿನ ಠೇವಣಿಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳಿಗೆ ಅರ್ಹವಾಗಿವೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಸಾಕಷ್ಟು ಜನಪ್ರಿಯವಾಗಿದೆ. ಇದು 5 ವರ್ಷಗಳಲ್ಲಿ ಮೆಚ್ಯೂರ್ ಆಗುತ್ತದೆ. ಆದರೆ, ಇದರಲ್ಲಿ ಟ್ಯಾಕ್ಸ್ ಬೆನಿಫಿಟ್ ಇರೋದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




