ಕ್ರೆಡಿಟ್ ಕಾರ್ಡ್ (Credit Card) ಬಳಸಲು ಬಂದರೆ ಚಂದ, ಇಲ್ಲದಿದ್ದರೆ ಗೋವಿಂದ..! ಕ್ರೆಡಿಟ್ ಕಾರ್ಡ್ ಹೆಸರೇ ಹೇಳುವಂತೆ ಸಾಲದ ಕಾರ್ಡ್. ನಾವು ಮಾಡುವ ಖರ್ಚಿಗೆ ಬ್ಯಾಂಕ್ನವರು ಸಾಲ ಕೊಡುತ್ತಾರೆ. ನೀವು ಕ್ರೆಡಿಟ್ ಕಾರ್ಡ್ ಬಿಲ್ ಪೂರ್ತಿ ಕಟ್ಟುವವರೆಗೂ ಅಂಥ ಸಮಸ್ಯೆ ಎನಿಸುವುದಿಲ್ಲ. ಆದರೆ, ತಡವಾಗಿ ಕಟ್ಟುವುದೋ, ಕನಿಷ್ಠ ಮೊತ್ತ ಕಟ್ಟುವುದೋ, ಕ್ಯಾಷ್ ಪಡೆದುಕೊಳ್ಳುವುದೋ ಇತ್ಯಾದಿ ಮಾಡಿದಾಗ ಇದ್ದಬದ್ದ ಶುಲ್ಕಗಳಲ್ಲೇ ದುತ್ತನೇ ಕಾಣಿಸಿಕೊಳ್ಳುವುದುಂಟು. ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ನೋಡಿ ನಿಮಗೇ ಶಾಕ್ ಆಗುತ್ತದೆ. ಇಷ್ಟೆಲ್ಲಾ ನಾನು ಶಾಪಿಂಗ್ ಮಾಡಲಿಲ್ಲವಲ್ಲ, ಹೇಗೆ ಬಂತು ಬಿಲ್ ಎಂಬ ಪ್ರಶ್ನೆ ಕಾಡತೊಡಗುತ್ತದೆ. ಕ್ರೆಡಿಟ್ ಕಾರ್ಡ್ ಹಾಗೂ ಅದಕ್ಕೆ ಯಾವೆಲ್ಲಾ ಶುಲ್ಕಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.
ಇದನ್ನೂ ಓದಿ: Aadhaar PAN: ನಿಮ್ಮ ಪ್ಯಾನ್ ನಂಬರ್ ಬೇರೆಯವರ ಆಧಾರ್ಗೆ ಲಿಂಕ್ ಆಗಿದೆಯಾ? ಸರಿಪಡಿಸಲು ಹೀಗೆ ಮಾಡಿ
ನೀವು ಕ್ರೆಡಿಟ್ ಕಾರ್ಡ್ ಖರೀದಿಸಿದಾಗ ಕೆಲ ಬ್ಯಾಂಕುಗಳು ಆರಂಭಿಕ ಶುಲ್ಕ ವಿಧಿಸುತ್ತವೆ. ಮತ್ತೆ ಕೆಲ ಬ್ಯಾಂಕುಗಳು ರಿನಿವಲ್ ಫೀಸ್ ಅಥವಾ ವಾರ್ಷಿಕ ಶುಲ್ಕ ಪಡೆಯುತ್ತವೆ. ಮತ್ತೆ ಕೆಲ ಕ್ರೆಡಿಟ್ ಕಾರ್ಡ್ ಕಂಪನಿಗಳು ಈ ಆರಂಭಿಕ ಅಥವಾ ವಾರ್ಷಿಕ ಶುಲ್ಕ ಪಡೆಯುವುದಿಲ್ಲ. ನೀವು ಕ್ರೆಡಿಟ್ ಕಾರ್ಡ್ ಪಡೆಯುವಾಗ ಈ ಅಂಶವನ್ನು ಗಮನಿಸಿ.
ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಇದಕ್ಕೆ ಶುಲ್ಕ ವಿಧಿಸಲಾಗುತ್ತದೆ. ಬ್ಯಾಂಕಿಂದ ಬ್ಯಾಂಕಿಗೆ ಇದರ ಶುಲ್ಕಗಳಲ್ಲಿ ವ್ಯತ್ಯಾಸ ಆಗುತ್ತದೆ. ಕೆನರಾ ಬ್ಯಾಂಕ್ನಲ್ಲಿ ನೀವು ಕ್ಯಾಷ್ ಪಡೆದರೆ ಆ ಮೊತ್ತಕ್ಕೆ ಶೇ. 3ರಷ್ಟು ಶುಲ್ಕ ಇರುತ್ತದೆ.
ಕ್ರೆಡಿಟ್ ಕಾರ್ಡ್ನಲ್ಲಿ ಇದು ಬಹಳ ಮುಖ್ಯವಾದ ಅಂಶ. ನೀವು ನಿಗದಿತ ಅವಧಿಯಲ್ಲಿ ಪೂರ್ಣವಾಗಿ ಬಿಲ್ ಕಟ್ಟದಿದ್ದರೆ ಕಾಡುವ ಶುಲ್ಕ ಇದು. ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಮೇಲೆ ನಿರ್ದಿಷ್ಟ ಬಡ್ಡಿ ಬೀಳುತ್ತಲೇ ಇರುತ್ತದೆ.
ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಗಡುವಿನೊಳಗೆ ಕಟ್ಟದಿದ್ದರೆ ತಡ ಪಾವತಿ ಶುಲ್ಕ ಅಥವಾ ಲೇಟ್ ಪೇಮೆಂಟ್ ಫೀಸ್ ಹೇರಲಾಗುತ್ತದೆ. ನೀವು ಕನಿಷ್ಠ ಮೊತ್ತವನ್ನು ಪಾವತಿಸಿದರೆ ಈ ಶುಲ್ಕ ಇರುವುದಿಲ್ಲ.
ಒಂದೊಂದು ಕ್ರೆಡಿಟ್ ಕಾರ್ಡ್ಗೂ ಬಳಕೆಗೆ ಮಿತಿ ನಿಗದಿ ಮಾಡಲಾಗಿರುತ್ತದೆ. ಈ ಮಿತಿಗಿಂತ ಹೆಚ್ಚು ಮೊತ್ತದ ವಹಿವಾಟು ನಡೆಸಿದರೆ ಓವರ್ಲಿಮಿಟ್ ಫೀ ವಿಧಿಸಲಾಗುತ್ತದೆ. ಹೆಚ್ಚುವರಿ ಮೊತ್ತದ ಶೇ. 2.5 ಅಥವಾ ಬೇರೆ ಪ್ರಮಾಣದಷ್ಟು ಹಣವನ್ನು ಶುಲ್ಕವಾಗಿ ಪಡೆಯಲಾಗುತ್ತದೆ.
ಇದರ ಜೊತೆಗೆ ಬ್ಯಾಂಕು ಕಚೇರಿಗೆ ಹೋಗಿ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿದರೆ 250 ರೂವರೆಗೆ ಶುಲ್ಕ, ಅಂತಾರಾಷ್ಟ್ರೀಯ ವಹಿವಾಟಿಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಫೋರೆಕ್ಸ್ ಮಾರ್ಕಪ್ ಫೀ ಇತ್ಯಾದಿ ಶುಲ್ಕಗಳಿರುತ್ತವೆ. ಕೊನೆಯಲ್ಲಿ ಬಿಲ್ ಮೊತ್ತಕ್ಕೆ ಜಿಎಸ್ಟಿ ಕೂಡ ಸೇರಿಸಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Tue, 20 June 23