ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಟಯರ್-3 ಅಕೌಂಟ್ಗಳಿಗೆ ಹಣ ತುಂಬಲು ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ ಎಂದು ಪಿಂಚಣಿ ನಿಧಿ ಪ್ರಾಧಿಕಾರ ಪಿಎಫ್ಆರ್ಡಿಎ (PFRDA) ಕಳೆದ ವರ್ಷ ಘೋಷಣೆ ಮಾಡಿತ್ತು. ಇದೀಗ ಇನ್ಷೂರೆನ್ಸ್ ಪ್ರಾಧಿಕಾರ ಐಆರ್ಡಿಎಐ (IRDAI- Insurance Regulatory Development Authority of India) ಕೂಡ ಇಂಥದ್ದೇ ನಿಯಮ ಮಾರಿ ಮಾಡಿದೆ. ಇನ್ಷೂರೆನ್ಸ್ ಪಾಲಿಸಿ ಒತ್ತೆ ಇಟ್ಟು ಪಡೆಯಲಾದ ಸಾಲಕ್ಕೆ ಕ್ರೆಡಿಟ್ ಕಾರ್ಡ್ ಮೂಲಕ ಮರುಪಾವತಿ ಮಾಡುವ ಅವಕಾಶ ಇರುವುದಿಲ್ಲ. ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಮರುಪಾವತಿ ಮಾಡುವ ಅವಕಾಶವನ್ನು ನಿಲ್ಲಿಸಬೇಕು ಎಂದು ಇನ್ಷೂರೆನ್ಸ್ ಕಂಪನಿಗಳಿಗೆ ಐಆರ್ಡಿಎಐ ಸೂಚಿಸಿದೆ.
ಕ್ರೆಡಿಟ್ ಕಾರ್ಡ್ನಿಂದ ಪೇಮೆಂಟ್ ಮಾಡಿದರೆ, ಅದು ಕಿರು ಅವಧಿಗೆ ಯಾವುದೇ ಬಡ್ಡಿ ಇಲ್ಲದೇ ಸಿಗುವ ಸಾಲದಂತೆ. ಇನ್ಷೂರೆನ್ಸ್ ಲೋನ್ನ ಮರುಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸಿದರೆ, ಒಂದು ತಿಂಗಳವರೆಗೂ ಆ ಹಣವನ್ನು ಕ್ರೆಡಿಟ್ ಕಾರ್ಡ್ ಕಂಪನಿಗೆ ಪಾವತಿಸಲು ಕಾಲಾವಧಿ ಇರುತ್ತದೆ. ಇದು ಗ್ರಾಹಕರಿಗೆ ಬಹಳ ಅನುಕೂಲವಾದ ಸಂಗತಿ ಹೌದು. ಆದರೆ, ಹೆಚ್ಚಿನ ಗ್ರಾಹಕರು ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಕಟ್ಟದೇ ಇರುವುದರಿಂದ ಹೆಚ್ಚಿನ ಬಡ್ಡಿ ಮತ್ತು ದಂಡ ಕಟ್ಟಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ನಿಯಮ ಪ್ರಕಾರ ಬಿಲ್ ಅವಧಿಯೊಳಗೆ ಕಟ್ಟಲಿಲ್ಲವೆಂದರೆ ಹೆಚ್ಚು ಬಡ್ಡಿ ಮತ್ತು ದಂಡವನ್ನು ಪಾವತಿಸಬೇಕು. ಇನ್ಷೂರೆನ್ಸ್ ಗ್ರಾಹಕರಿಗೆ ಇಂತಹದ್ದನ್ನು ತಪ್ಪಿಸಲು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಗೆ ಅವಕಾಶ ನಿರಾಕರಿಸಲಾಗಿದೆ ಎಂಬುದು ನೀಡಲಾಗಿರುವ ಒಂದು ಕಾರಣ.
ಇದನ್ನೂ ಓದಿ: ONDC: ಕಡಿಮೆ ಬೆಲೆಗೆ ಊಟ ಸಿಗುತ್ತೆ; ಆದ್ರೆ ಟೈಮಿಗೆ ಸರಿಯಾಗಿ ಬರುತ್ತಾ? ಸ್ವಿಗ್ಗಿ, ಜೊಮಾಟೋಗಳ ಅಖಾಡಕ್ಕೆ ಒಎನ್ಡಿಸಿ
ಎಲ್ಲಾ ವಿಮಾ ಪಾಲಿಸಿಗಳಿಗೂ ಸಾಲ ಸೌಲಭ್ಯ ಸಿಗುವುದಿಲ್ಲ. ಮನಿ ಬ್ಯಾಕ್ ಮತ್ತು ಎಂಡೋಮೆಂಟ್ನಂತಹ ಇನ್ಷೂರೆನ್ಸ್ ಪಾಲಿಸಿಗಳ ಆಧಾರದ ಮೇಲೆ ಸಾಲ ಪಡೆಯಬಹುದಾಗಿದೆ. ನಿರ್ದಿಷ್ಟ ಅವಧಿಯವರೆಗೆ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಿದ ಬಳಿಕ ಈ ಅವಕಾಶ ಸಿಗುತ್ತದೆ.
ನಾವು ಆವರೆಗೂ ಎಷ್ಟು ಹಣವನ್ನು ಇನ್ಷೂರೆನ್ಸ್ ಪಾಲಿಸಿಗೆ ಪಾವತಿಸಿರುತ್ತೇವೆ, ಅದಕ್ಕೆ ಅನುಗುಣದ ಪ್ರಮಾಣದಲ್ಲಿ ಸಾಲ ಸಿಗುತ್ತದೆ. ಸಾಮಾನ್ಯವಾಗಿ ಇದು ಶೇ. 70ರಿಂದ 90 ಭಾಗದ ಹಣ ಆಗಿರುತ್ತದೆ. ಈ ಸಾಲವನ್ನು ಗ್ರಾಹಕರು ಯಾವ ಬ್ಯಾಂಕಿಂದಲಾದರೂ ಪಡೆಯಬಹುದು. ಬಡ್ಡಿ ದರ ಬಹಳ ಕಡಿಮೆ ಇರುತ್ತದೆ. ಬ್ಯಾಂಕುಗಳ ಅಡಮಾನ ಸಾಲಕ್ಕಿಂತ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ.
ಇನ್ಷೂರೆನ್ಸ್ ಗ್ರಾಹಕರಿಗೆ ತುರ್ತಾಗಿ ಹಣಕಾಸು ಅಗತ್ಯದ ಪರಿಸ್ಥಿತಿ ಉದ್ಭವಿಸಿದರೆ ಈ ಸಾಲ ಬಹಳ ಸಹಾಯಕ್ಕೆ ಬರುತ್ತದೆ. ಇನ್ಷೂರೆನ್ಸ್ ಕಚೇರಿಗೆ ಹೋಗಿ ಒಂದು ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ, ಇನ್ಷೂರೆನ್ಸ್ ಪಾಲಿಸಿಯ ಮೂಲ ಪ್ರತಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿ ಸಲ್ಲಿಸಬೇಕು. ಸಾಲ ಸ್ಯಾಂಕ್ಷನ್ ಆಗಲು ಹೆಚ್ಚು ಸಮಯ ತಗುಲುವುದಿಲ್ಲ.