Credit Score: ಸಂಬಳ ಹೆಚ್ಚಿದರೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ? ಅಂಕ ನಿರ್ಧಾರ ಆಗೋದು ಹೇಗೆ?
Credit score updates: ಸಂಬಳ ಹೆಚ್ಚಾದಂತೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತೆ ಎಂದು ಕೆಲವರು ಭಾವಿಸಿದ್ದಾರೆ. ಇದು ಅರ್ಧ ಸತ್ಯ ಮಾತ್ರ. ಕ್ರೆಡಿಟ್ ಸ್ಕೋರ್ ಎಂಬುದು ನಿಮ್ಮ ಸಾಲ ನಿರ್ವಹಣೆಯ ಕ್ಷಮತೆಯನ್ನು ಗಣಿಸುವ ಲೆಕ್ಕಾಚಾರ. ಅಧಿಕ ಸಂಬಳ ಪಡೆದು ಮೈತುಂಬ ಸಾಲ ಮಾಡಿ ಕಟ್ಟದೇ ಇದ್ದರೆ ಕ್ರೆಡಿಟ್ ಸ್ಕೋರ್ ಗೋತಾ ಹೊಡೆಯುತ್ತದೆ.

ಇವತ್ತಿನ ಹಣಕಾಸು ಪ್ರಪಂಚದಲ್ಲಿ ಕ್ರೆಡಿಟ್ ಸ್ಕೋರ್ (Credit Score) ಪಾತ್ರ ಬಹಳ ಮುಖ್ಯ ಇರುತ್ತದೆ. ಸಂಬಳ ಹೆಚ್ಚಿದಷ್ಟೂ ಕ್ರೆಡಿಟ್ ಸ್ಕೋರ್ ಹೆಚ್ಚುತ್ತದೆ ಎಂದು ಕೆಲವರು ತಪ್ಪಾಗಿ ಭಾವಿಸಿರುವುದುಂಟು. ವಾಸ್ತವವಾಗಿ, ಅಧಿಕ ಸಂಬಳಕ್ಕೂ ಕ್ರೆಡಿಟ್ ಸ್ಕೋರ್ಗೂ ತೀರಾ ನೇರ ಸಂಬಂಧ ಇಲ್ಲ. ಕ್ರೆಡಿಟ್ ಸ್ಕೋರ್ ಕೆಲಸ ಮಾಡುವುದು ಬೇರೆ ರೀತಿಯಲ್ಲಿ. ಅದರ ಲೆಕ್ಕಾಚಾರವೂ ಬೇರೆ ರೀತಿಯಲ್ಲಿ ಇರುತ್ತದೆ.
ಲಕ್ಷ ರೂ ಸಂಬಳದವನಿಗಿಂತ 30,000 ರೂ ಸಂಬಳದವನ ಕ್ರೆಡಿಟ್ ಸ್ಕೋರ್ ಅಧಿಕ ಇರಬಹುದು…
ಕ್ರೆಡಿಟ್ ಸ್ಕೋರ್ ಎಂಬುದು ನೀವು ಸಾಲ ನಿರ್ವಹಣೆ ಹೇಗೆ ಮಾಡುತ್ತೀರಿ ಎಂಬುದನ್ನು ತಿಳಿಸುವ ಕ್ರಮ. 300ರಿಂದ 900 ಅಂಕಗಳವರೆಗೆ ಕ್ರೆಡಿಟ್ ಸ್ಕೋರ್ ಇರುತ್ತದೆ. 300 ಎಂದರೆ ತೀರಾ ಕಳಪೆ ಸ್ಕೋರ್. 900 ಅಂಕ ಅತ್ಯುತ್ತಮ. ಇಲ್ಲಿ ಸಾಲ ಎಂದರೆ ಪರ್ಸನಲ್ ಲೋನ್ ಆಗಿರಬಹುದು, ಹೋಮ್ ಲೋನ್ ಆಗಿರಬಹುದು. ಹಾಗೆಯೇ, ಕ್ರೆಡಿಟ್ ಕಾರ್ಡ್ ಬಳಕೆಯೂ ಕೂಡ ಸಾಲವೇ ಆಗಿರುತ್ತದೆ.
ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್
ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಪಡೆಯುವುದು?
ನೀವು ಸಾಲದ ಕಂತುಗಳನ್ನು ಸರಿಯಾದ ವೇಳೆಗೆ ಪಾವತಿಸುತ್ತಿರಬೇಕು. ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು. ಕ್ರೆಡಿಟ್ ಕಾರ್ಡನ್ನು ಮಿತವಾಗಿ ಬಳಸಬೇಕು. ಇವಿಷ್ಟನ್ನೂ ಪಾಲಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕನಿಷ್ಠ 700ರ ಗಡಿ ದಾಟುತ್ತದೆ.
ಕ್ರೆಡಿಟ್ ಸ್ಕೋರ್ ವಿಚಾರದಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಬಿಲ್ನಲ್ಲಿ ಮಿನಿಮಮ್ ಬ್ಯಾಲನ್ಸ್ ಅನ್ನು ಮಾತ್ರ ಪಾವತಿಸಿ, ಮುಂದಿನ ಬಿಲ್ನಲ್ಲಿ ಪೂರ್ಣ ಕಟ್ಟಿದರಾಯಿತು ಎಂದು ಕೆಲವರು ಮುಂದೂಡುವುದುಂಟು. ಇಂಥ ಅಭ್ಯಾಸ ಇದ್ದರೆ ಬಿಟ್ಟುಬಿಡಿ. ಮಿನಿಮಮ್ ಬ್ಯಾಲನ್ಸ್ ಬದಲು ಪೂರ್ಣ ಬಿಲ್ ಪಾವತಿಸುವುದು ಉತ್ತಮ.
ಇದನ್ನೂ ಓದಿ: ಯಾವ್ಯಾವ ವಯಸ್ಸಲ್ಲಿ ನಿಮ್ಮ ಸೇವಿಂಗ್ಸ್ ಕನಿಷ್ಠ ಎಷ್ಟಿರಬೇಕು? ಇಲ್ಲಿದೆ ಕುತೂಹಲಕಾರಿ ಉತ್ತರ
ಅಧಿಕ ಸಂಬಳದಿಂದ ಕ್ರೆಡಿಟ್ ಸ್ಕೋರ್ಗೆ ಅನುಕೂಲವೇ ಇಲ್ಲವಾ?
ಅಧಿಕ ಸಂಬಳ ಇದ್ದಾಗ ನೀವು ಹೆಚ್ಚು ಹಣಕಾಸು ಭದ್ರತೆ ಹೊಂದುವ ಅವಕಾಶ ಹೆಚ್ಚು. ಸಾಲವನ್ನು ಸರಿಯಾಗಿ ನಿಭಾಯಿಸಲು ಅನುಕೂಲವಾಗುತ್ತದೆ. ಈ ಮೂಲಕ ಅಧಿಕ ಸಂಬಳವು ಪರೋಕ್ಷವಾಗಿ ಕ್ರೆಡಿಟ್ ಸ್ಕೋರ್ಗೆ ಪುಷ್ಟಿಕೊಡಬಹುದು. ಹಣಕಾಸು ಶಿಸ್ತು ಇಲ್ಲದಿದ್ದರೆ ನೀವೆಷ್ಟೇ ಸಂಬಳ ಪಡೆದರೂ ಪ್ರಯೋಜನ ಇರುವುದಿಲ್ಲ. ಇದು ಗಮನದಲ್ಲಿರಲಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ