
ಬಹಳಷ್ಟು ಜನರು ತಮಗೆ 50,000 ರೂಗಿಂತ ಹೆಚ್ಚು ಸಂಬಳ ಬರುತ್ತೆ, ಆದರೆ, ತಿಂಗಳಾದರೆ ಹಣವೇ ನಿಲ್ಲುವುದಿಲ್ಲ. ಎಲ್ಲಾ ಖರ್ಚಾಗಿ ಕ್ರೆಡಿಟ್ ಕಾರ್ಡ್ ಸಾಲ ಮಾಡಬೇಕಾಗುತ್ತೆ ಎಂದು ಪರಿತಪಿಸುವುದುಂಟು. ಇದು 50,000 ರೂ ಒಳಗಿನ ಸಂಬಳದವರ ಮಾತ್ರದ್ದೇ ಕಥೆಯಲ್ಲ, ಇನ್ನೂ ಅಧಿಕ ಸಂಪಾದನೆ ಮಾಡುವವರಿಗೂ ಇದೇ ಸುಳಿ. ಎಷ್ಟು ಸಂಪಾದಿಸಿದರೂ ಹಣ ಯಾಕೆ ನಿಲ್ಲಲ್ಲ ಎನ್ನುವ ಹಣಕಾಸು ಸಂಕಷ್ಟದ ಪ್ರಶ್ನೆ ಹೆಚ್ಚಿನ ಜನರನ್ನು ಕಾಡುತ್ತದೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಿತಿನ್ ಕೌಶಿಕ್ (Nitin Kaushik) ಅವರು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತಾಪಿಸಿ, ಉತ್ತರ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರಕಾರ, ಮೊದಲು ಕೈತಪ್ಪಿ ಹೋಗೋದು ಹಣವಲ್ಲ. ಅದು ಬೇರೆಯೇ. ಹಾಗಾದರೆ ಏನು?
‘ಹೆಚ್ಚಿನ ಜನರು ತಮಗೆ ಹಣದ ಸಮಸ್ಯೆ ಇದೆ ಎಂದು ಭಾವಿಸುತ್ತಾರೆ. ವಾಸ್ತವವಾಗಿ ಮಾನಸಿಕ ಶಕ್ತಿಯ ಸಮಸ್ಯೆ ಇರುತ್ತದೆ. ಮೊದಲು ಖಾಲಿಯಾಗುವುದು ಹಣವಲ್ಲ, ನಮ್ಮ ಮನಸ್ಸಿನ ಶಕ್ತಿ’ ಎಂದು ನಿತಿನ್ ಕೌಶಿಕ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಯುಎಎನ್ ಮತ್ತು ಇಪಿಎಫ್ ಖಾತೆಗಳು ಇದ್ದರೆ ಏನು ಮಾಡಬೇಕು? ಇಲ್ಲಿವೆ ಕ್ರಮಗಳು
ಬಹಳ ಜನರು ರೀಲ್ಸ್ನಲ್ಲಿ ಅಡಿಕ್ಟ್ ಆಗಿರುವ ರೀತಿಯಲ್ಲೇ ಆನ್ಲೈನ್ನಲ್ಲಿ ಶಾಪಿಂಗ್ ಇತ್ಯಾದಿ ಮಾಡುತ್ತಿರುತ್ತಾರೆ. ಏನಾದರೂ ತಿನ್ನಬೇಕೆಂದರೆ ಜೊಮಾಟೋವೋ, ಸ್ವಿಗ್ಗಿಯೋ ತೆರೆದು ಫುಡ್ ಆರ್ಡರ್ ಮಾಡುತ್ತಾರೆ. ಎಲ್ಲಾದರೂ ಹೋಗಬೇಕಾದರೆ ಓಲಾ, ಊಬರ್, ನಮ್ಮ ಯಾತ್ರಿಯ ಮೊರೆ ಹೋಗುತ್ತಾರೆ. ಮನೆಗೆ ಸಾಮಾನು ಬೇಕೆಂದರೆ ಬ್ಲಿಂಕಿಂಟ್ ಅನ್ನೋ, ಝೆಪ್ಟೋವನ್ನೋ ಮತ್ತಿನ್ಯಾವುದನ್ನೋ ತೆರೆದು ಆರ್ಡರ್ ಕೊಡುತ್ತಾರೆ. ಇದನ್ನು ಇಂಪಲ್ಸಿವ್ ಸ್ಪೆಂಡಿಂಗ್ ಎನ್ನುತ್ತಾರೆ. ಸಿಎ ನಿತಿನ್ ಕೌಶಿಕ್ ಪ್ರಕಾರ, ಈ ರೀತಿ ಇಂಪಲ್ಸಿವ್ ಸ್ಪೆಂಡಿಂಗ್ಗೆ ಮಾನಸಿಕ ಬಳಲಿಕೆಯೇ ಕಾರಣವಂತೆ.
ಕೆಲಸ ಮಾಡಿ ಸುಸ್ತಾಗಿರುವ ಜನರು ತಮ್ಮ ಸ್ಟ್ರೆಸ್ ದೂರ ಮಾಡಲು ಇಂಪಲ್ಸಿವ್ ಸ್ಪೆಂಡಿಂಗ್ ಚಾಳಿಗೆ ಒಳಗಾಗುತ್ತಾರೆ. ತಮಗೆ ಅಗತ್ಯವೇ ಇಲ್ಲದಿದ್ದರೂ ಫುಡ್ ಆರ್ಡರ್ ಮಾಡುವುದು, ಕ್ಯಾಬ್ ಬುಕ್ ಮಾಡುವುದು, ಸಾಮಾನು ಖರೀದಿಸುವುದು ಇತ್ಯಾದಿ ಮಾಡುತ್ತಾರೆ. ಶಿಸ್ತಿನ ಮನೋಭಾಗ ಇಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಮಾನಸಿಕ ಇಚ್ಛಾಶಕ್ತಿ ಕುಂದಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಅವರು.
ಇದನ್ನೂ ಓದಿ: ರಿಯಲ್ ಎಸ್ಟೇಟ್ ಸೇರಿ ಶ್ರೀಮಂತಿಕೆ ಹೆಚ್ಚಿಸಬಲ್ಲ ಮೂರು ಕ್ಷೇತ್ರಗಳಿವು: ಸಿಎ ಕೌಶಿಕ್ ಅನಿಸಿಕೆ
ನೀವು ದೈನಂದಿನ ಪ್ರತೀ ವೆಚ್ಚವನ್ನೂ ಬರೆದಿಡುವ ಅಭ್ಯಾಸ ಇದ್ದರೆ ಮುಂದುವರಿಸಿ. ಅದರ ಜೊತೆಗೆ ಆ ವೆಚ್ಚ ಮಾಡುವಾಗ ನಿಮ್ಮ ಮಾನಸಿಕ ಸ್ಥಿತಿ ಹೇಗಿತ್ತು ಎಂದು ಸಾಧ್ಯವಾದರೆ ನಮೂದಿಸಿ. ಆಗ ನಿಮ್ಮ ಅನಗತ್ಯ ವೆಚ್ಚಕ್ಕೆ ಏನು ಕಾರಣ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು.
ಯಾವುದೋ ಭಾವಾವೇಶದಲ್ಲಿ ವೆಚ್ಚ ಮಾಡುವುದನ್ನು ತಪ್ಪಿಸಲು ಒಳ್ಳೆಯ ತಂತ್ರ ಇದೆ. ಯಾವುದೇ ದೊಡ್ಡ ಖರೀದಿ ಮಾಡುವ ಮುನ್ನ 10-15 ನಿಮಿಷ ಸುಮ್ಮನಿರಿ. ಯಾವುದೇ ಫೋನ್ ಮಾಡಬೇಡಿ, ಯಾರ ಜೊತೆಗೂ ಮಾತನಾಡಬೇಡಿ. ಹಾಗೇ ಸುಮ್ಮನೆ ಇರಿ. ನಿಮ್ಮ ಆಲೋಚನೆಗಳು ತಣ್ಣಗಾಗುತ್ತವೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ