
ಇಪಿಎಫ್ ನಿಯಮಗಳು ಅಪ್ಡೇಟ್ ಆದರೂ ಬಹಳಷ್ಟು ಜನರು ಈಗಲೂ ಹಳೆಯ ನಿಯಮಗಳ ತಿಳಿವಳಿಕೆಯನ್ನೇ ಮುಂದುವರಿಸಿದ್ದಾರೆ. ಇಪಿಎಫ್ ಅಕೌಂಟ್ (EPF account) ಸಕ್ರಿಯವಾಗಿಲ್ಲದಿದ್ದರೆ ಮೂರು ವರ್ಷದ ನಂತರ ಆ ಹಣಕ್ಕೆ ಬಡ್ಡಿ ಬರೋದು ನಿಂತು ಹೋಗುತ್ತೆ ಎಂದು ಈಗಲೂ ಕೆಲ ತಜ್ಞರು ಹೇಳುವುದುಂಟು. ಕೆಲ ವರ್ಷಗಳ ಹಿಂದೆ ಈ ನಿಯಮ ಇದ್ದದ್ದು ಹೌದು. ಈಗ ಅದು ಬದಲಾಗಿದೆ. ಇಪಿಎಫ್ ಸದಸ್ಯ ನಿವೃತ್ತಿ ವಯಸ್ಸು ಬರುವವರೆಗೂ, ಅಂದರೆ ಆತನ ವಯಸ್ಸು 58 ವರ್ಷ ಆಗುವವರೆಗೂ ಆತನ ಇಪಿಎಫ್ ಖಾತೆಯಲ್ಲಿ ಎಷ್ಟೇ ಹಣ ಇರಲಿ ಅದಕ್ಕೆ ಸರ್ಕಾರದಿಂದ ಬಡ್ಡಿ ಸಂದಾಯ ಆಗುತ್ತಲೇ ಇರುತ್ತದೆ.
ಇಪಿಎಫ್ ಸದಸ್ಯ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಸೇರಿಕೊಂಡಾಗ ಹೊಸ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಹಿಂದಿನ ಇಪಿಎಫ್ ಅಕೌಂಟ್ಗೆ ಕಂಪನಿ ವತಿಯಿಂದ ಪ್ರತೀ ತಿಂಗಳು ಹಣ ಸಂದಾಯವಾಗುವುದು ನಿಂತು ಹೋಗುತ್ತದೆ. ಈ ಹಳೆಯ ಪಿಎಫ್ ಅಕೌಂಟ್ ಆ್ಯಕ್ಟಿವ್ ಇರೋದಿಲ್ಲ. ಹೀಗೆ ಒಂದು ಅಕೌಂಟ್ 3 ವರ್ಷ ಕಾಲ ಆ್ಯಕ್ಟಿವ್ ಇಲ್ಲದಿದ್ದರೆ, ಅಂದರೆ, ಆ ಅಕೌಂಟ್ಗೆ ಯಾವುದೇ ಕೊಡುಗೆ ಬರುವುದು ನಿಂತು ಹೋಗಿದ್ದಲ್ಲಿ, ಹಳೆಯ ನಿಯಮದ ಪ್ರಕಾರ ಬಡ್ಡಿಯೂ ನಿಲ್ಲುತ್ತದೆ. ಆದರೆ, ಹೊಸ ನಿಯಮದ ಪ್ರಕಾರ, ಆ ಖಾತೆಗೂ ಬಡ್ಡಿ ಬರುವುದು ಮುಂದುವರಿಯುತ್ತದೆ.
ಇದನ್ನೂ ಓದಿ: ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು…
ಜನರಲ್ಲಿ ಇನ್ನೂ ಒಂದು ತಪ್ಪು ತಿಳಿವಳಿಕೆ ಇದೆ. ಕಂಪನಿ ಬದಲಿಸಿದಾಗ ಹಳೆಯ ಪಿಎಫ್ ಖಾತೆಯನ್ನು ಹೊಸ ಖಾತೆಯೊಂದಿಗೆ ವಿಲೀನ ಮಾಡದಿದ್ದರೆ, ಅಂದರೆ ಹಳೆಯ ಪಿಎಫ್ ಖಾತೆಯಿಂದ ಹಣವನ್ನು ಹೊಸ ಖಾತೆಗೆ ವರ್ಗಾವಣೆ ಮಾಡದೇ ಇದ್ದರೆ ಆಗ ಹಳೆಯ ಖಾತೆಯಲ್ಲಿನ ಹಣಕ್ಕೆ ಬಡ್ಡಿ ಸಿಗೋದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಇದು ನಿಜ ಅಲ್ಲ. ಹಿಂದಿನ ಪ್ಯಾರಾದಲ್ಲಿ ತಿಳಿಸಿದಂತೆ, ಹಳೆಯ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ವರ್ಷಂಪ್ರತಿ ಸರ್ಕಾರದಿಂದ ಬಡ್ಡಿ ಸಂದಾಯ ಆಗುವುದು ನಿಲ್ಲುವುದಿಲ್ಲ.
ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಪಿಎಫ್ ಖಾತೆ ಇರಲಿ, ಎಲ್ಲದಕ್ಕೂ ಬಡ್ಡಿ ಸಂದಾಯ ಆಗುತ್ತಲೇ ಇರುತ್ತದೆ. ಪಿಎಫ್ ಖಾತೆಗಳನ್ನು ವಿಲೀನ ಮಾಡಿದರೆ ಖಾತೆ ನಿರ್ವಹಣೆ ಸುಲಭ ಆಗುತ್ತದೆ ಎಂಬುದು ಬಿಟ್ಟರೆ ಅದು ಕಡ್ಡಾಯವಾಗಲೀ, ಅತ್ಯಗತ್ಯವಾಗಲೀ ಅಲ್ಲ.
ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?
ಇಪಿಎಫ್ಒ ನಿಯಮದ ಪ್ರಕಾರ 58 ವರ್ಷ ವಯಸ್ಸನ್ನು ರಿಟೈರ್ಮೆಂಟ್ ಏಜ್ ಎಂದು ಪರಿಗಣಿಸಲಾಗುತ್ತದೆ. ಪಿಎಫ್ ಸದಸ್ಯರ ವಯಸ್ಸು 58 ವರ್ಷ ಮುಟ್ಟಿದಾಗ ಮಾತ್ರ ಅವರ ಖಾತೆಯ ಅವಧಿ ಮುಗಿದಂತೆ. ಅವರ ಇಪಿಎಫ್ ಖಾತೆಗಳಿಗೆ ಬಡ್ಡಿ ಬರುವುದು ನಿಲ್ಲುತ್ತದೆ. ಇವರ ಇಪಿಎಫ್ ಹಣದಲ್ಲಿ ಸ್ವಲ್ಪ ಭಾಗವು ಇಪಿಎಸ್ಗೆ ಹೋಗಿರುತ್ತದೆ. ಅದನ್ನು ಬಿಟ್ಟು ಉಳಿದ ಹಣವನ್ನು ಪೂರ್ಣವಾಗಿ ವಿತ್ಡ್ರಾ ಮಾಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ