ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು
Few Loan Rule Changes in 2026: ಆರ್ಬಿಐ ಈ ವರ್ಷದಿಂದ ಕೆಲ ಹೊಸ ಸಾಲ ನಿಯಮಗಳನ್ನು ತಂದಿದೆ. ಕ್ರೆಡಿಟ್ ಸ್ಕೋರ್ ಈಗ ತಿಂಗಳಿಗೊಮ್ಮೆ ಬದಲು ವಾರಕ್ಕೊಮ್ಮೆ ಪರಿಷ್ಕರಣೆ ಆಗುತ್ತದೆ. ಇದರಿಂದ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳಲು ಹೆಚ್ಚು ಅವಕಾಶ ಸಿಗುತ್ತದೆ. ಬ್ಯಾಂಕ್ ಖಾತೆಗಳಿಗೆ ನಾಲ್ಕು ಮಂದಿಯನ್ನು ನಾಮಿನಿಗಳಾಗಿ ಹೆಸರಿಸಬಹುದು.

ಜನಸಾಮಾನ್ಯರಿಗೆ ಅನುಕೂಲವಾಗುವ ಉದ್ದೇಶದಿಂದ ಸಾಲ ನಿಯಮಗಳಲ್ಲಿ ಆರ್ಬಿಐ (RBI) ಕೆಲ ಬದಲಾವಣೆ ಮಾಡಿದೆ. ಬ್ಯಾಂಕ್ ಅಕೌಂಟ್ ಮತ್ತು ಲಾಕರ್ಗಳಿಗೆ ಹೆಚ್ಚು ಜನರನ್ನು ಹೆಸರಿಸಲು ಅವಕಾಶ ನೀಡಿರುವುದು; ಕ್ರೆಡಿಟ್ ಸ್ಕೋರ್ ಬೇಗ ಅಪ್ಡೇಟ್ ಆಗುವುದು, ಸಾಲಗಳ ಮರುಪಾವತಿಗೆ ಪ್ರೀಪೇಮೆಂಟ್ ಚಾರ್ಜ್ ಇಲ್ಲದಿರುವುದು ಇತ್ಯಾದಿ ಹೊಸ ನಿಯಮಗಳು ಜಾರಿಗೆ ಬಂದಿವೆ. ಬ್ಯಾಂಕ್ ಗ್ರಾಹಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಈ ವರ್ಷದಿಂದ ಜಾರಿಗೆ ಬರಲಿರುವ ಕೆಲ ಬ್ಯಾಂಕಿಂಗ್ ಮತ್ತು ಹಣಕಾಸು ನಿಯಮಗಳು ಈ ಕೆಳಕಂಡಂತಿವೆ:
ನಾಲ್ಕು ನಾಮಿನಿಗಳಿಗೆ ಅವಕಾಶ
ಬ್ಯಾಂಕ್ ಖಾತೆ ಹೊಂದಿರುವವರು ನಾಲ್ಕು ನಾಮಿನಿಗಳನ್ನು ಸೇರಿಸುವ ಅವಕಾಶ ಇರುತ್ತದೆ. ಬ್ಯಾಂಕ್ ಲಾಕರ್ಗಳಿಗೂ ನಾಲ್ಕು ನಾಮಿನಿಗಳನ್ನು ಹೆಸರಿಸಬಹುದು. ಆದರೆ, ಇದು ಕಡ್ಡಾಯವಲ್ಲ, ಕೇವಲ ಮಿತಿ. ಒಂದು ಬ್ಯಾಂಕ್ ಖಾತೆಗೆ ಕನಿಷ್ಠ ಒಬ್ಬರಾದರೂ ನಾಮಿನಿ ಇರಬೇಕು. ಗರಿಷ್ಠ ನಾಲ್ಕು ಮಂದಿಯ ಹೆಸರನ್ನು ಸೇರಿಸಬಹುದು.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?
ಬೇಗ ಅಪ್ಡೇಟ್ ಆಗುತ್ತೆ ಕ್ರೆಡಿಟ್ ಸ್ಕೋರ್
ಸಿಬಿಲ್ ಇತ್ಯಾದಿ ಏಜೆನ್ಸಿಗಳು ನೀಡುವ ಕ್ರೆಡಿಟ್ ಸ್ಕೋರ್ ಈಗ ವೇಗವಾಗಿ ಅಪ್ಡೇಟ್ ಆಗಲಿದೆ. ಸದ್ಯ ತಿಂಗಳಿಗೆ ಒಮ್ಮೆ ಸ್ಕೋರ್ ಅಪ್ಡೇಟ್ ಆಗುತ್ತದೆ. ಇನ್ಮುಂದೆ ಅದು ಪ್ರತೀ ಏಳು ದಿನಗಳಿಗೊಮ್ಮೆ ಅಪ್ಡೇಟ್ ಆಗುತ್ತದೆ.
ಪ್ರತೀ ತಿಂಗಳ 7, 14, 21 ಮತ್ತು 28ನೇ ತಾರೀಖಿನಲ್ಲಿ ಸ್ಕೋರ್ ಪರಿಷ್ಕರಣೆ ಆಗುತ್ತದೆ. ನೀವು ಇಎಂಐ ಕಟ್ಟಿದಾಗೆಲ್ಲಾ ಅದರ ದತ್ತಾಂಶವು ಕ್ರೆಡಿಟ್ ಏಜೆನ್ಸಿಗೆ ವಾರಕ್ಕೊಮ್ಮೆ ರವಾನೆಯಾಗುತ್ತದೆ. ಇಎಂಐ ಪಾವತಿ ತಪ್ಪಿದರೂ ಅದು ನಿಮ್ಮ ಸ್ಕೋರ್ನಲ್ಲಿ ಬೇಗ ಪ್ರತಿಫಲಿಸಬಹುದು.
ಸಾಲಗಳ ಮೇಲೆ ಪ್ರೀಪೇಮೆಂಟ್ ಚಾರ್ಜಸ್ ಇರುವುದಿಲ್ಲ
ಫ್ಲೋಟಿಂಗ್ ರೇಟ್ನಲ್ಲಿ ಸಾಲ ಪಡೆದು ಒಂದಷ್ಟನ್ನು ಮುಂಗಡವಾಗಿ ಪಾವತಿಸಿದರೆ ಅದಕ್ಕೆ ಪ್ರೀಪೆಮೆಂಟ್ ಚಾರ್ಜಸ್ ಹಾಕಲಾಗುತ್ತದೆ. ಮುಂಗಡವಾಗಿ ಸಾಲವನ್ನು ಪೂರ್ತಿಯಾಗಿ ಕಟ್ಟಿದರೂ ಫೋರ್ಕ್ಲೋಶರ್ ಚಾರ್ಜಸ್ ಹಾಕಲಾಗುತ್ತದೆ. ಆದರೆ, 2026ರ ಜನವರಿ 1ರಿಂದ ಹೋಮ್ಲೋನ್, ಕಾರ್ ಲೋನ್, ಎಜುಕೇಶನ್ ಲೋನ್, ಪರ್ಸನಲ್ ಲೋನ್ಗಳಿಗೆ ಯಾವುದೇ ಪ್ರೀಪೇಮೆಂಟ್ ಚಾರ್ಜಸ್ ಅಥವಾ ಫೋರ್ಕ್ಲೋಶರ್ ಚಾರ್ಜಸ್ ಹಾಕಲಾಗುವುದಿಲ್ಲ.
ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು
ಆಭರಣ ವ್ಯಾಪಾರಿಗಳಿಗೆ ರೀಪೇಮೆಂಟ್ ಅವಧಿ ವಿಸ್ತರಣೆ
ಜ್ಯೂವೆಲರಿ ಬ್ಯುಸಿನೆಸ್ನಲ್ಲಿ ತೊಡಗಿರುವವರು ಗೋಲ್ಡ್ ಮೆಟಲ್ ಲೋನ್ಗಳನ್ನು ಪಡೆಯಲು ಅವಕಾಶ ಇರುತ್ತದೆ. ಇಂಥ ಸಾಲಗಳಿಗೆ ಮರುಪಾವತಿಗೆ ಇರುವ ಅವಧಿ ಮಿತಿ 180 ದಿನಗಳಿದೆ. ಇದನ್ನು 270 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ. ಇದರಿಂದ ಆಭರಣ ವ್ಯಾಪಾರಿಗಳಿಗೆ ಹಣ ನಿರ್ವಹಣೆ ಸ್ವಲ್ಪ ಸುಗಮವಾಗಲಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
