ಅದಿದ್ದವರಿಗೆ ಇದು ಬೇಕು, ಇದಿದ್ದವರೆಗೆ ಅದು ಬೇಕು. ಇದು ಮನುಷ್ಯನ ಸಹಜ ಪ್ರವೃತ್ತಿ. ಬಿಸಿನೆಸ್ ಆರಂಭಿಸಿ 24 ಗಂಟೆ ತಲೆಕೆಡಿಸಿಕೊಳ್ಳುವ ಜನರು, ತಮಗೆ ಆರಾಮವಾಗಿ ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ವಾಪಸ್ ಬರುವಂತಹ ಒಳ್ಳೆಯ ಉದ್ಯೋಗ ಸಿಕ್ಕರೆ ಅದೆಷ್ಟು ಚೆನ್ನ ಎಂದೆಣಿಸುತ್ತಾರೆ. ಅದೇ 9ರಿಂದ 6ರವರೆಗೆ ಕೆಲಸ ಮಾಡುವ ಉದ್ಯೋಗಿಗಳು, ತಮಗೆ ನಿತ್ಯದ ಈ ಕೆಲಸದ ಜಂಜಾಟ ಎಂದು ಕೊನೆಯಾಗುವುದೋ ಎಂದು ಪರಿತಪಿಸುತ್ತಿದ್ದಾರೆ. ಬಿಸಿನೆಸ್ ಬೇಡ, ಉದ್ಯೋಗವೂ ಬೇಡ, ಸಾಧ್ಯವಾದಷ್ಟೂ ಹಣ ಸಂಪಾದಿಸಿ ಬೇಗನೇ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸೋಣ ಎಂದು ಎರಡೂ ಗುಂಪಿನವರು ಅಂದುಕೊಳ್ಳುವುದುಂಟು. ಅದೇ ಯೋಚನೆಗಳಲ್ಲಿ ಹುಟ್ಟುಕೊಂಡಿದ್ದೇ ಫೈರ್ (FIRE) ಎನ್ನುವ ಕಾನ್ಸೆಪ್ಟು.
FIRE ಎಂದರೆ ಫೈನಾನ್ಷಿಯ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ. ಅಂದರೆ ಹಣಕಾಸು ಸ್ವಾತಂತ್ರ್ಯ ಪಡೆದು ಬೇಗನೇ ನಿವೃತ್ತಿ ಪಡೆಯುವುದು. ನಿವೃತ್ತರಾಗಿ, ಸಾಯುವವರೆಗೂ ಆರಾಮವಾಗಿ ಬದುಕುವಷ್ಟು ಹಣ ಸಂಪಾದಿಸುವುದೇ ಹಣಕಾಸು ಸ್ವಾತಂತ್ರ್ಯ. ಈ ಹಣಕಾಸು ಸ್ವಾತಂತ್ರ್ಯಕ್ಕೆ ಎಷ್ಟು ಹಣ ಅಗತ್ಯ ಎನ್ನುವುದೇ ಫೈರ್ ನಂಬರ್.
ಇದನ್ನೂ ಓದಿ: ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ
ಸಾಮಾನ್ಯವಾಗಿ, ನಿಮ್ಮ ವಾರ್ಷಿಕ ವೆಚ್ಚದ 30 ಪಟ್ಟು ಹಣ ಸಂಪಾದಿಸಿದರೆ ಆಗ ನಿವೃತ್ತರಾಗಬಹುದು ಎನ್ನುವ ಸಲಹೆ ಕೇಳಿಬರುತ್ತದೆ. ಅಂದರೆ, ನಿಮ್ಮ ವಾರ್ಷಿಕ ವೆಚ್ಚ 5 ಲಕ್ಷ ರೂ ಇದ್ದಲ್ಲಿ, ಒಂದೂವರೆ ಕೋಟಿ ರೂ ಕಾರ್ಪಸ್ ಬೇಕಾಗುತ್ತದೆ. ಈ ಹಣವನ್ನು ಮ್ಯೂಚುವಲ್ ಫಂಡ್ನಂತಹ ಯಂತ್ರಗಳಲ್ಲಿ ಹೂಡಿಕೆ ಮಾಡಿ, ಅದರಿಂದ ವರ್ಷಕ್ಕೆ ಶೇ. 4ರಷ್ಟು ಹಣ ವಿತ್ಡ್ರಾ ಮಾಡುತ್ತಾ ಹೋಗಬಹುದು. ಆಗ ಸಾಯುವವರೆಗೂ ಯಾವ ಕೆಲಸದ ಗೊಡವೆ ಇಲ್ಲದೇ ಆರಾಮವಾಗಿ ಇರಬಹುದು ಎನ್ನುವುದು ಈ ಫೈರ್ ಕಾನ್ಸೆಪ್ಟ್.
ಫೈರ್ ಕಾನ್ಸೆಪ್ಟ್ನ ಪ್ರಮುಖ ಲೋಪವೆಂದರೆ ಅದು ಜೀವನದ ಅನಿರೀಕ್ಷಿತ ತಿರುವುಗಳನ್ನು ನಿರೀಕ್ಷಿಸುವುದಿಲ್ಲ. ಯಾವುದಾದರೂ ತುರ್ತು ಸಮಸ್ಯೆಯಾಗಿ ಸಾಕಷ್ಟು ಹಣ ಖರ್ಚಾಗಿ ಹೋದರೆ ಫೈರ್ ಅಂದಾಜೆಲ್ಲಾ ಉಲ್ಟಾ ಹೊಡೆಯುತ್ತದೆ. ಹಾಗೆಯೇ, ಜೀವನ ವೆಚ್ಚ ಈಗ ಇದ್ದದ್ದು 10 ವರ್ಷದ ಬಳಿಕ ಬೇರೆಯೇ ಮಟ್ಟದಲ್ಲಿ ಇರುತ್ತದೆ. ವಯಸ್ಸು ಹೆಚ್ಚಾದಂತೆ ಖರ್ಚು ವೆಚ್ಚಗಳ ಸಾಧ್ಯತೆ ಹೆಚ್ಚಾಗಬಹುದು.
‘ಬೇಗನೇ ನಿವೃತ್ತರಾಗಬೇಕೆನ್ನುವುದರಲ್ಲಿ ತಪ್ಪಿಲ್ಲ. ಆದರೆ, ನಿವೃತ್ತಿಗೆ ಹಣ ಮಾತ್ರವೇ ಮಾನದಂಡ ಅಲ್ಲ. ನಿವೃತ್ತರಾದ ಬಳಿಕ ಎದುರಾಗುವ ಮಾನಸಿಕ, ಭಾವನಾತ್ಮಕ, ಹಣಕಾಸು ಸಮಸ್ಯೆಗಳ ಬಗ್ಗೆ ಹೆಚ್ಚಿನ ಜನರು ಆಲೋಚನೆಯನ್ನೇ ಮಾಡಿರುವುದಿಲ್ಲ. ಮುಂದೆ ಅವರು ತಮ್ಮ ನಿರ್ಧಾರಕ್ಕೆ ಪಶ್ಚಾತಾಪ ಪಡುವಂತಾಗುತ್ತದೆ,’ ಎಂದು ಝಿರೋಧ ಸಂಸ್ಥಾಪಕ ನಿತಿನ್ ಕಾಮತ್ ಅವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
I hadn’t realized how popular this Financial Independence, Retire Early (FIRE) trend had become until I saw this @Zero1ByZerodha video 😬. There’s nothing wrong with wanting to retire early, but retirement isn’t just about money.
From what I’ve seen, many people don’t consider… pic.twitter.com/pXuDAAuVPF
— Nithin Kamath (@Nithin0dha) November 4, 2024
ಇದನ್ನೂ ಓದಿ: ಹಣ ನೋಡುವ ದೃಷ್ಟಿ ಜಪಾನೀಯರದ್ದು ವಿಭಿನ್ನ; ಎರಿಗಾಟು ಸೂತ್ರ ತಿಳಿದಿರಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ