ನವದೆಹಲಿ, ಡಿಸೆಂಬರ್ 25: ಗ್ರಾಹಕರಿಂದ ಠೇವಣಿಗಳನ್ನು ಆಕರ್ಷಿಸಲು ಪೈಪೋಟಿಗೆ ಬಿದ್ದಂತಿರುವ ಬ್ಯಾಂಕುಗಳು ತಮ್ಮಲ್ಲಿನ ಠೇವಣಿ ದರಗಳನ್ನು (Fixed deposit rates) ಪರಿಷ್ಕರಿಸುತ್ತಲೇ ಇವೆ. ಆರ್ಬಿಐ ಸತತ ಐದು ಬಾರಿ ರೆಪೋ ದರವನ್ನು ಶೇ. 6.5ರಲ್ಲೇ ಉಳಿಸಿಕೊಂಡು ಬರುತ್ತಿದ್ದರೂ ಬ್ಯಾಂಕುಗಳು ಠೇವಣಿ ದರ ಹೆಚ್ಚಿಸುವುದು ನಿಂತಿಲ್ಲ. ಇದೀಗ ನಾಲ್ಕು ಬ್ಯಾಂಕುಗಳು ಎಫ್ಡಿ ದರಗಳನ್ನು ಹೆಚ್ಚಿಸಿವೆ. ಬ್ಯಾಂಕ್ ಆಫ್ ಇಂಡಿಯಾ, ಡಿಸಿಬಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕುಗಳು ಡೆಪಾಸಿಟ್ ದರಗಳನ್ನು ಹೆಚ್ಚಿಸಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಿವೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ತನ್ನ ಕಿರು ಅವಧಿಯ ಠೇವಣಿ ಪ್ಲಾನ್ಗಳಿಗೆ ದರ ಹೆಚ್ಚಿಸಿದೆ. 46 ದಿನಗಳಿಂದ ಆರಂಭವಾಗಿ ಒಂದು ವರ್ಷದ ಅವಧಿಯ ವಿವಿಧ ಅವಧಿಗೆ ವಿವಿಧ ದರ ಪರಿಷ್ಕರಣೆ ಮಾಡಲಾಗಿದೆ. ಒಂದು ವರ್ಷದ ಠೇವಣಿಗೆ ಬಡ್ಡಿದರವನ್ನು ಶೇ. 7.25ಕ್ಕೆ ಹೆಚ್ಚಿಸಲಾಗಿದೆ. ಆದರೆ, ಇವೆಲ್ಲವೂ ಕೂಡ 2 ಕೋಟಿ ರೂಗಿಂತ ಮೇಲ್ಪಟ್ಟ ಠೇವಣಿಗಳಿಗೆ ಅನ್ವಯ ಆಗುತ್ತದೆ.
ಇದನ್ನೂ ಓದಿ: ಆಧಾರ್ ಅಪ್ಡೇಟ್ನಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿವರೆಗೂ ಡಿಸೆಂಬರ್ 31ಕ್ಕೆ ಡೆಡ್ಲೈನ್ ಇರುವ ಕಾರ್ಯಗಳಿವು
ಕೋಟಕ್ ಮಹೀಂದ್ರ ಬ್ಯಾಂಕ್ ತನ್ನ ಮೂರರಿಂದ ಐದು ವರ್ಷ ಅವಧಿಯ ವಿವಿಧ ಠೇವಣಿ ಪ್ಲಾನ್ಗಳಿಗೆ ಬಡ್ಡಿ ದರ ಹೆಚ್ಚಿಸಿದೆ. 10ವರ್ಷ ಅವಧಿಯವರೆಗಿನ ಠೇವಣಿಗಳಿಗೆ ಈ ಬ್ಯಾಂಕ್ ಶೇ. 2.75ರಿಂದ ಶೇ. 7.25ರವರೆಗೆ ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇ. 7.80ರವರೆಗೆ ಬಡ್ಡಿ ಸಿಗುತ್ತದೆ.
ಡಿಸಿಬಿ ಬ್ಯಾಂಕ್ ಎರಡು ಕೋಟಿ ರೂ ಒಳಗಿನ ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ ನೀಡುತ್ತಿದೆ. ಸಾಮಾನ್ಯ ಗ್ರಾಹಕರ 2 ಕೋಟಿ ರೂ ಒಳಗಿನ ಠೇವಣಿಗಳಿಗೆ ಶೇ. 3.75ರಿಂದ ಶೇ. 8ರವರೆಗೆ ಬಡ್ಡಿ ಕೊಡುತ್ತದೆ. ಹಿರಿಯ ನಾಗರಿಕರಿಗೆ ಶೇ. 4.25ರಿಂದ ಶೇ. 8.60ರವರೆಗೆ ಬಡ್ಡಿ ಆಫರ್ ಮಾಡಿದೆ.
ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?
ಫೆಡರಲ್ ಬ್ಯಾಂಕ್ ಕೂಡ ಠೇವಣಿ ದರಗಳನ್ನು ಈ ತಿಂಗಳು ಪರಿಷ್ಕರಣೆ ಮಾಡಿದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.50ರವರೆಗೆ ಬಡ್ಡಿ ಕೊಡುತ್ತದೆ. 500 ದಿನಗಳ ಠೇವಣಿಗೆ ಗರಿಷ್ಠ ಬಡ್ಡಿ ಇದೆ. ಹಿರಿಯ ನಾಗರಿಕರ 500 ದಿನದ ಠೇವಣಿಗೆ ಶೇ. 8.15ರಷ್ಟು ಬಡ್ಡಿ ಕೊಡುತ್ತದೆ. 21 ತಿಂಗಳಿಂದ 3 ವರ್ಷ ಅವಧಿಯ ಠೇವಣಿಗೆ ಶೇ. 7.80ರಷ್ಟು ಬಡ್ಡಿ ಕೊಡುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ