ಬಳಕೆಯಾಗದೇ ಸುಮ್ಮನೆ ಬ್ಯಾಂಕ್ ಲಾಕರ್ನಲ್ಲೋ, ಬೀರು ಪೆಟ್ಟಿಗೆಯಲ್ಲೋ ಚಿನ್ನ ಕೊಳೆಯುತ್ತಿರುತ್ತದೆ. ಇಂತಹ ಚಿನ್ನವನ್ನು ಲಾಭಕ್ಕೆ ಬಳಸಿಕೊಳ್ಳಲು ನಾಗರಿಕರಿಗೆ ಅವಕಾಶ ತರುವ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ (Gold Monetisation Scheme) ಅನ್ನು ಕೇಂದ್ರ ಸರ್ಕಾರ 2015ರಲ್ಲಿ ಹಿಂದೆ ಜಾರಿಗೆ ತಂದಿದೆ. ಇಂತಹ ಚಿನ್ನವನ್ನು ಠೇವಣಿ ಇರಿಸಿದರೆ ನಿರ್ದಿಷ್ಟ ಬಡ್ಡಿ ಸಿಗುತ್ತದೆ. ಈ ಮೂಲಕ ಬಳಕೆಯಲ್ಲಿಲ್ಲದ ಚಿನ್ನದಿಂದಲೂ ಜನರು ಹಣ ಸಂಪಾದನೆ ಮಾಡಬಹುದು. ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಬರುವ ಮುನ್ನವೂ ಕೆಲ ಗೋಲ್ಡ್ ಸ್ಕೀಮ್ಗಳಿದ್ದವು. ಇವು ಜನರಿಂದ ಚಿನ್ನವನ್ನು ಸಂಗ್ರಹಿಸುವ ಸ್ಕೀಮ್ಗಳಾಗಿದ್ದವೇ ಹೊರತು ಬಡ್ಡಿ ಕೊಡುವ ಯೋಜನೆಯಾಗಿರಲಿಲ್ಲ. ಜನರ ಅನುಪಯೋಗಿ ಚಿನ್ನಕ್ಕೆ ಬಡ್ಡಿ ಕೊಡುವ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿರೀಕ್ಷಿತ ರೀತಿಯಲ್ಲಿ ಯಶಸ್ಸು ಕಂಡಿಲ್ಲ ಎಂಬುದು ಗಮನಾರ್ಹ. ಇದಕ್ಕೆ ಕೆಲ ಪ್ರಮುಖ ಕಾರಣವನ್ನು ಉಲ್ಲೇಖಿಸಬಹುದು. ಇದಕ್ಕೆ ಮುನ್ನ ಈ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಏನು ಎಂಬುದು ತಿಳಿದುಕೊಳ್ಳುವುದು ಅಗತ್ಯ.
ಗೋಲ್ಡ್ ಮಾನಿಟೈಸೆಶನ್ ಸ್ಕೀಮ್ನಲ್ಲಿ ಚಿನ್ನವನ್ನು ಠೇವಣಿಯಾಗಿ ಇಡಬಹುದು. ಎಲ್ಲಾ ಬ್ಯಾಂಕುಗಳಲ್ಲೂ ಇದು ಲಭ್ಯ ಇರುತ್ತದೆ. ಕಿರು ಅವಧಿ, ಮಧ್ಯಮ ಅವಧಿ ಮತ್ತು ದೀರ್ಘ ಅವಧಿಯ ಠೇವಣಿ ವೈವಿಧ್ಯತೆ ಇರುತ್ತದೆ. ಮಧ್ಯಮ ಅವಧಿಯ ಠೇವಣಿಯಾದರೆ ಕನಿಷ್ಠ 3 ವರ್ಷ ಲಾಕ್–ಇನ್ ಪೀರಿಯಡ್ ಇರುತ್ತದೆ. ಅಂದರೆ ಈ ಮೂರು ವರ್ಷ ಕಾಲ ಗ್ರಾಹಕರು ತಮ್ಮ ಚಿನ್ನವನ್ನು ವಾಪಸ್ ಪಡೆಯುವಂತಿಲ್ಲ. ಈ ಠೇವಣಿಗೆ ಶೇ. 2.25ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಇನ್ನು, ದೀರ್ಘಾವಧಿಯ ಠೇವಣಿಗೆ ಶೇ. 2.50ರಷ್ಟು ಬಡ್ಡಿ ಸಿಗುತ್ತದೆ.
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ನಲ್ಲಿ ನೀವು ಉಪಯೋಗಿಸಬಹುದಾದ ಆಭರಣವನ್ನು ಠೇವಣಿಯಾಗಿ ಇಡಲು ಹೋಗಬೇಡಿ. ನೀವು ಇಡುವ ಆಭರಣ ಇತ್ಯಾದಿ ಯಾವುದೇ ಚಿನ್ನದ ಶುದ್ಧತೆಯನ್ನು ಬ್ಯಾಂಕ್ ಪರಿಶೀಲಿಸುತ್ತದೆ. ಆಭರಣ ಆಗಿದ್ದರೆ ಅದನ್ನು ಕರಗಿಸಿ ಚಿನ್ನದ ಗಟ್ಟಿ, ಗೋಲ್ಡ್ ಕಾಯಿನ್ ಆಗಿ ಪರಿವರ್ತಿಸಲಾಗುತ್ತೆ. ಹೀಗಾಗಿ, ನೀವು ಬಳಕೆ, ಸರ ಇತ್ಯಾದಿ ರೂಪದಲ್ಲಿರುವ ಚಿನ್ನವನ್ನು ಜಿಎಂಎಸ್ ಸ್ಕೀಮ್ನಲ್ಲಿ ಠೇವಣಿ ಇಟ್ಟರೆ, ಸ್ಕೀಮ್ ಅವಧಿ ಬಳಿಕ ನಿಮಗೆ ಅವು ಚಿನ್ನದ ನಾಣ್ಯದ ರೂಪದಲ್ಲಿ ಮರಳಿರುತ್ತವೆ.
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ನಲ್ಲಿ ಜನರು ಠೇವಣಿಯಾಗಿ ಇರಿಸುವ ಆಭರಣವನ್ನು ಕರಗಿಸಿ ಚಿನ್ನದ ಗಟ್ಟಿಯಾಗಿ ಮಾಡುವುದರಿಂದ ಬಹಳ ಜನರು ಈ ಸ್ಕೀಮ್ನಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೆಚ್ಚಿನ ಭಾರತೀಯರು ಚಿನ್ನವನ್ನು ಹೊಂದಿರುವುದು ಒಡವೆಗಳ ರೂಪದಲ್ಲೇ. ಗೋಲ್ಡ್ ಕಾಯಿನ್ ಇತ್ಯಾದಿ ಕಚ್ಛಾ ಚಿನ್ನವನ್ನು ಇಟ್ಟುಕೊಂಡಿರುವವರು ಕಡಿಮೆ. ಹೂಡಿಕೆಯಾಗಿ ಚಿನ್ನವನ್ನು ಖರೀದಿಸುವವರು ಮಾತ್ರ ಗೋಲ್ಡ್ ಬಿಸ್ಕತ್, ಕಾಯಿನ್ ಇತ್ಯಾದಿ ರೂಪದಲ್ಲಿ ಚಿನ್ನವನ್ನು ಇಟ್ಟುಕೊಂಡಿರುತ್ತಾರೆ. ಇಂತಹವರಿಗೆ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ತುಸು ವರ್ಕೌಟ್ ಅಗಬಹುದು.
ಇದನ್ನೂ ಓದಿ: Travel Insurance: ಪ್ರಯಾಣಕ್ಕೂ ಇನ್ಷೂರೆನ್ಸ್ ಸ್ಕೀಮ್; ಇದರಲ್ಲಿ ಏನೇನು ಕವರ್ ಆಗುತ್ತೆ? ಇಲ್ಲಿದೆ ಡೀಟೇಲ್ಸ್
ಅಲ್ಲದೇ, ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ನಲ್ಲಿ ನೀವು ಠೇವಣಿ ಇರಿಸುವ ಚಿನ್ನದ ಆಧಾರದ ಮೇಲೆ ಸಾಲವನ್ನೂ ಪಡೆಯಬಹುದು. ಇದು ಸೆಕ್ಯೂರ್ಡ್ ಲೋನ್ ಆಗಿರುವುದರಿಂದ ಶೇ. 12ಕ್ಕಿಂತ ಹೆಚ್ಚು ಬಡ್ಡಿ ಇರುವುದಿಲ್ಲ.
Published On - 6:50 pm, Tue, 11 April 23