ನವದೆಹಲಿ, ಅಕ್ಟೋಬರ್ 1: ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕ ಅವಧಿಗೆ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳ ಬಡ್ಡಿದರ ಪರಿಷ್ಕರಣೆ ಮಾಡಲಾಗಿದೆ. ಸುಕನ್ಯಾ ಸಮೃದ್ದಿ, ಪಿಪಿಎಫ್ ಇತ್ಯಾದಿ ವಿವಿಧ ಯೋಜನೆಗಳಿಗೆ ಬಡ್ಡಿದರದಲ್ಲಿ ಯಾವ ಬದಲಾವಣೆ ಆಗಿಲ್ಲ. ಹಿಂದಿನ ದರಗಳೇ ಮುಂದುವರಿಯಲಿವೆ. ‘2024-25ರ ಹಣಕಾಸು ವರ್ಷದ ಮೂರನೆ ಕ್ವಾರ್ಟರ್ಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಜುಲೈನಿಂದ ಸೆಪ್ಟೆಂಬರ್ವರೆಗಿನ ಕ್ವಾರ್ಟರ್ನಲ್ಲಿ ನಿಗದಿಯಾಗಿದ್ದ ದರಗಳೇ ಮುಂದುವರಿಯಲಿವೆ,’ ಎಂದು ಹಣಕಾಸು ಸಚಿವಾಲಯ ನಿನ್ನೆ ಸೋಮವಾರ (ಸೆ. 30) ಅಧಿಸೂಚನೆಯಲ್ಲಿ ತಿಳಿಸಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ ವಾರ್ಷಿಕ ಶೇ. 8.2ರಷ್ಟು ಬಡ್ಡಿ ಸಿಗುತ್ತದೆ. ಸ್ಮಾಲ್ ಸೇವಿಂಗ್ ಸ್ಕೀಮ್ಗಳ ಪೈಕಿ ಇವೆರಡು ಗರಿಷ್ಠ ಲಾಭ ನೀಡುತ್ತವೆ. ಕಿಸಾನ್ ವಿಕಾಸ್ ಪತ್ರ, ರಾಷ್ಟ್ರೀಯ ಉಳಿತಾಯ ಪತ್ರ ಯೋಜನೆಗಳಲ್ಲೂ ಉತ್ತಮ ಎನಿಸುವ ಬಡ್ಡಿದರ ಇದೆ. ಹಾಗೆಯೇ, ಪಿಪಿಎಫ್ ಇತ್ಯಾದಿ ಸ್ಕೀಮ್ಗಳು ಟ್ಯಾಕ್ಸ್ ಡಿಡಕ್ಷನ್ ಅವಕಾಶ ನೀಡುತ್ತವೆ. ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಡ್ಡಿದರವನ್ನು ಶೇ. 8ರಿಂದ ಶೇ. 8.2ಕ್ಕೆ ಹೆಚ್ಚಿಸಿತ್ತು. ಹಾಗೆಯೇ, 3 ವರ್ಷದ ಫಿಕ್ಸೆಡ್ ಡೆಪಾಸಿಟ್ಗೂ 20 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಿಸಲಾಗಿತ್ತು.
ಇದನ್ನೂ ಓದಿ: ಪಿಪಿಎಫ್, ಸುಕನ್ಯ ಸಮೃದ್ದಿ, ಎನ್ಎಸ್ಎಸ್ ಯೋಜನೆಗಳಲ್ಲಿ ಅ. 1ರಿಂದ ಹೊಸ ನಿಯಮಗಳು; ತಪ್ಪದೇ ತಿಳಿದಿರಿ
ಹಣಕಾಸು ಸಚಿವಾಲಯ ಪ್ರತೀ ಕ್ವಾರ್ಟರ್ಗೂ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸುತ್ತಿರುತ್ತದೆ. ಮುಂದಿನ ಪರಿಷ್ಕರಣೆ ಡಿಸೆಂಬರ್ 31ರಂದು ನಡೆಯಲಿದೆ. ಸರ್ಕಾರದ ವತಿಯಿಂದ ನಡೆಯುತ್ತಿರುವುದರಿಂದ ಈ ಸೇವಿಂಗ್ ಸ್ಕೀಮ್ಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ. ಅಂಚೆ ಕಚೇರಿಯಲ್ಲಿ ಈ ಯೋಜನೆಗಳೆಲ್ಲವೂ ಲಭ್ಯ ಇವೆ. ಪಿಪಿಎಫ್, ಸುಕನ್ಯಾ ಸಮೃದ್ಧಿ ಇತ್ಯಾದಿ ಕೆಲ ಸ್ಕೀಮ್ಗಳನ್ನು ಬ್ಯಾಂಕುಗಳಲ್ಲೂ ಆರಂಭಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ