Tax Audit Due Date: ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಡೆಡ್​ಲೈನ್ ಒಂದು ವಾರ ವಿಸ್ತರಣೆ; ಗಡುವು ದಾಟಿದರೆ ಏನಾಗುತ್ತೆ?

Income tax returns filing process: 2023-24ರ ಅಸೆಸ್ಮೆಂಟ್ ವರ್ಷದ ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸಲು ಸೆ. 30ಕ್ಕೆ ಇದ್ದ ಗಡುವನ್ನು ಒಂದು ವಾರ ವಿಸ್ತರಿಸಲಾಗಿದೆ. ಒಂದು ಕೋಟಿ ರೂಗೂ ಹೆಚ್ಚು ವಾರ್ಷಿಕ ವಹಿವಾಟು ಹೊಂದಿರುವ ಉದ್ದಿಮೆಗಳು, ಹಾಗೂ 50 ಲಕ್ಷ ರೂಗೂ ಹೆಚ್ಚು ಸ್ವೀಕೃತಿಗಳನ್ನು ಹೊಂದಿರುವ ವೃತ್ತಿಪರರು ತಮ್ಮ ಖಾತೆಗಳ ಟ್ಯಾಕ್ಸ್ ಆಡಿಟಿಂಗ್ ಮಾಡಿಸಬೇಕು ಎನ್ನುವ ನಿಯಮ ಇದೆ.

Tax Audit Due Date: ಆಡಿಟ್ ರಿಪೋರ್ಟ್ ಸಲ್ಲಿಕೆಗೆ ಡೆಡ್​ಲೈನ್ ಒಂದು ವಾರ ವಿಸ್ತರಣೆ; ಗಡುವು ದಾಟಿದರೆ ಏನಾಗುತ್ತೆ?
ಐಟಿಆರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 30, 2024 | 2:20 PM

ನವದೆಹಲಿ, ಸೆಪ್ಟೆಂಬರ್ 30: ಆಡಿಟ್ ರಿಪೋರ್ಟ್​ಗಳನ್ನು ಸಲ್ಲಿಸಲು ಸೆಪ್ಟೆಂಬರ್ 30ಕ್ಕೆ ನಿಗದಿ ಮಾಡಲಾಗಿದ್ದ ಡೆಡ್​ಲೈನ್ ಅನ್ನು ಅಕ್ಟೋಬರ್ 7ಕ್ಕೆ ವಿಸ್ತರಿಸಲಾಗಿದೆ. 2023-24ರ ಮೌಲ್ಯಮಾಪನ ವರ್ಷಕ್ಕೆ (ಅಸೆಸ್ಮೆಂಟ್) ಆಡಿಟ್ ರಿಪೋರ್ಟ್​ಗಳನ್ನು ಸಲ್ಲಿಸಲು ಇರುವ ಗಡುವು ಇದು. ಖಾತೆಗಳ ಆಡಿಟಿಂಗ್ ಅವಶ್ಯಕತೆ ಇರುವ ಎಲ್ಲಾ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಇದು ಅನ್ವಯ ಆಗುತ್ತದೆ. 2023-24ರ ಹಣಕಾಸು ವರ್ಷಕ್ಕೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಇವರಿಗೆ ಅಕ್ಟೋಬರ್ 31ಕ್ಕೆ ಡೆಡ್​ಲೈನ್ ಇದೆ.

ಸಾಮಾನ್ಯವಾಗಿ ಆಡಿಟಿಂಗ್ ಅವಶ್ಯಕತೆ ಇಲ್ಲದ ವ್ಯಕ್ತಿಗಳಿಗೆ ಐಟಿಆರ್ ಫೈಲ್ ಮಾಡಲು ಜುಲೈ 31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ವರ್ಗದ ಆದಾಯ ತೆರಿಗೆ ಪಾವತಿದಾರರು ಬಹುತೇಕ ಸಂಬಳದಾರರನೇ ಆಗಿರುತ್ತಾರೆ. ಬಿಸಿನೆಸ್ ಇತ್ಯಾದಿಗಳಿಂದ ಆದಾಯ ಬರುವ ವ್ಯಕ್ತಿಗಳು ಮತ್ತು ಕಂಪನಿಗಳ ಖಾತೆಗಳಿಗೆ ಆಡಿಟಿಂಗ್ ಅವಶ್ಯಕತೆ ಇದ್ದರೆ ಅಂಥವರಿಗೆ ಅಕ್ಟೋಬರ್ 31ರವರೆಗೆ ಕಾಲಾವಕಾಶ ನೀಡಲಾಗುತ್ತದೆ. ಒಂದು ತಿಂಗಳು ಮುಂಚೆ ಅವರು ಟ್ಯಾಕ್ಸ್ ಆಡಿಟ್ ವರದಿಗಳನ್ನು ಸಲ್ಲಿಸಬೇಕಾಗುತ್ತದೆ.

ಇ-ಫೈಲಿಂಗ್ ವೆಬ್​ಸೈಟ್ ಬಹಳ ನಿಧಾನಗೊಂಡಿದೆ. ಅಪ್​ಲೋಡ್ ಮಾಡಲು ಕಷ್ಟವಾಗುತ್ತಿದೆ ಎನ್ನುವಂತಹ ವರದಿಗಳು ಇತ್ತೀಚೆಗೆ ಸಾಕಷ್ಟು ಕೇಳಿಬಂದಿದ್ದವು. ಪೋರ್ಟಲ್​ನಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಇದೀಗ ಆಡಿಟ್ ರಿಪೋರ್ಟ್ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ.

ಇದನ್ನೂ ಓದಿ: ಪಿಪಿಎಫ್, ಸುಕನ್ಯ ಸಮೃದ್ದಿ, ಎನ್​ಎಸ್​ಎಸ್ ಯೋಜನೆಗಳಲ್ಲಿ ಅ. 1ರಿಂದ ಹೊಸ ನಿಯಮಗಳು; ತಪ್ಪದೇ ತಿಳಿದಿರಿ

ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸದೇ ಹೋದರೆ ಏನಾಗುತ್ತೆ?

ನಿರ್ದಿಷ್ಟ ಮೊತ್ತದಷ್ಟು ಬಿಸಿನೆಸ್ ಹೊಂದಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಟ್ಯಾಕ್ಸ್ ಆಡಿಟಿಂಗ್ ನಡೆಸಬೇಕು. ಟ್ಯಾಕ್ಸ್ ಆಡಿಟಿಂಗ್​ನಲ್ಲಿ ಸ್ವೀಕೃತಿಗಳು, ವೆಚ್ಚಗಳು, ಸವಕಳಿ (ಡಿಪ್ರಿಶಿಯೇಶನ್) ಇತ್ಯಾದಿ ವಿವಿಧ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಂತಿಮ ವರದಿ ಸಿದ್ಧಪಡಿಸಲಾಗುತ್ತದೆ. ಇದರಲ್ಲಿ ತೆರಿಗೆ ಬಾಧ್ಯತೆ ಎಷ್ಟಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಚಾರ್ಟರ್ಡ್ ಅಕೌಂಟ್​ಗಳು ಟ್ಯಾಕ್ಸ್ ಆಡಿಟಿಂಗ್ ಮಾಡಿಸಲು ಇರುವ ಅಧಿಕೃತ ವ್ಯಕ್ತಿಗಳಾಗಿರುತ್ತಾರೆ.

ಟ್ಯಾಕ್ಸ್ ಆಡಿಟ್ ರಿಪೋರ್ಟ್ ಅನ್ನು ಸಲ್ಲಿಸದೇ ಹೋದರೆ, ಅಥವಾ ಗಡುವಿನೊಳಗೆ ಸಲ್ಲಿಸದೇ ಹೋದರೆ ದಂಡ ಕಟ್ಟಬೇಕಾಗುತ್ತದೆ. ಗರಿಷ್ಠ ಒಂದೂವರೆ ಲಕ್ಷ ರೂವರೆಗೂ ದಂಡ ವಿಧಿಸಬಹುದು. ಅಥವಾ, ಬಿಸಿನೆಸ್​ನಲ್ಲಿ ಆದ ಒಟ್ಟು ಮಾರಾಟ, ಟರ್ನೋವರ್ ಅಥವಾ ಒಟ್ಟು ಸ್ವೀಕೃತಿಗಳ ಶೇ. 0.5ರಷ್ಟು ಮೊತ್ತವನ್ನು ದಂಡವಾಗಿ ಪಡೆಯಬಹುದು.

ಆಡಿಟ್ ರಿಪೋರ್ಟ್ ಯಾರು ಸಲ್ಲಿಸಬೇಕು?

ಒಂದು ಹಣಕಾಸು ವರ್ಷದಲ್ಲಿ ಒಂದು ಕೋಟಿ ರೂಗಿಂತ ಹೆಚ್ಚು ಟರ್ನೋವರ್ ಹೊಂದಿರುವ ಉದ್ದಿಮೆಗಳು ತಮ್ಮ ಅಕೌಂಟ್​ಗಳ ಆಡಿಟ್ ಮಾಡಿಸಬೇಕಾಗುತ್ತದೆ. ಒಂದು ವೇಳೆ ಈ ಬಿಸಿನೆಸ್​ನಲ್ಲಿ ಶೇ. 95ರಷ್ಟು ಹಣಪಾವತಿಯು ಡಿಜಿಟಲ್ ಮೂಲಕ ಆಗಿದ್ದಲ್ಲಿ ಟ್ಯಾಕ್ಸ್ ಆಡಿಟ್ ಮಾಡಲು ಇರುವ ಮಿತಿ 10 ಕೋಟಿ ರೂ ಇದೆ. ಅಂದರೆ ಇಂಥ ಬಿಸಿನೆಸ್​ಗಳು 10 ಕೋಟಿ ರೂಗಿಂತ ಕಡಿಮೆ ಟರ್ನೋವರ್ ಹೊಂದಿದ್ದರೆ ಟ್ಯಾಕ್ಸ್ ಆಡಿಟ್ ಮಾಡುವ ಅಗತ್ಯ ಇರುವುದಿಲ್ಲ.

ಇದನ್ನೂ ಓದಿ: 2016-17ರ ಸರಣಿಯ ಸಾವರೀನ್ ಗೋಲ್ಡ್ ಬಾಂಡ್​ನಿಂದ ಸಿಕ್ಕ ಲಾಭ ಶೇ. 140; ಹೂಡಿಕೆದಾರರ ಕೈಹಿಡಿದ ಚಿನ್ನ

ವೈದ್ಯರು, ಆರ್ಕಿಟೆಕ್ಟ್​ಗಳು, ವಕೀಲರು ಇತ್ಯಾದಿ ವೃತ್ತಿಪರರ ಒಟ್ಟಾರೆ ಸ್ವೀಕೃತಿ ಒಂದು ವರ್ಷದಲ್ಲಿ 50 ಲಕ್ ರೂ ಮೀರಿದರೆ ಅಂಥವರು ಟ್ಯಾಕ್ಸ್ ಆಡಿಟಿಂಗ್ ಮಾಡಿಸಿ ರಿಪೋರ್ಟ್ ಸಲ್ಲಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ