ವಿದೇಶಗಳಿಗೆ ಹೋಗಿ ಭಾರತಕ್ಕೆ ಮರಳುವಾಗ ಚಿನ್ನ ತರಲು ಕೆಲ ನಿರ್ಬಂಧಗಳಿವೆ. ಇಷ್ಟ ಬಂದಷ್ಟು ಚಿನ್ನವನ್ನು ಹಾಗೇ ಸುಮ್ಮನೆ ತರಲು ಆಗುವುದಿಲ್ಲ. ನೀವು ವಿದೇಶಕ್ಕೆ ಚಿನ್ನ ತೆಗೆದುಕೊಂಡು ಹೋಗುವಾಗ ಅಥವಾ ಅಲ್ಲಿಂದ ಮರಳುವಾಗ ಚಿನ್ನ ತರುವಾಗ ಕೆಲವಾರು ನಿಯಮಗಳು ಇವೆ. ಒಬ್ಬ ವ್ಯಕ್ತಿ ಒಂದು ಕಿಲೋಗಿಂತ ಹೆಚ್ಚು ಚಿನ್ನವನ್ನು ಭಾರತಕ್ಕೆ ಸಾಗಿಸುವಂತಿಲ್ಲ. ನಿರ್ದಿಷ್ಟ ಮೊತ್ತದ ಚಿನ್ನಕ್ಕೆ ಆಮದು ಸುಂಕ ಇರುವುದಿಲ್ಲ. ಹೆಚ್ಚಿನ ಚಿನ್ನಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಚಿನ್ನ ಸಾಗಾಣಿಕೆಗೆ ಎಷ್ಟು ಕಸ್ಟಮ್ಸ್ ತೆರಿಗೆ ಕಟ್ಟಬೇಕು ಇತ್ಯಾದಿ ಮಾಹಿತಿ ಇಲ್ಲಿದೆ…
ಒಬ್ಬ ವ್ಯಕ್ತಿ 18 ವರ್ಷ ಮೇಲ್ಪಟ್ಟ ಪುರುಷನಾದರೆ 20 ಗ್ರಾಮ್ ಚಿನ್ನ ಅಥವಾ 50,000 ರೂ ಮೌಲ್ಯದ ಚಿನ್ನ ತರುತ್ತಿದ್ದರೆ ಮಾತ್ರ ಅದಕ್ಕೆ ಆಮದು ಸುಂಕ ಅಥವಾ ಕಸ್ಟಮ್ಸ್ ಡ್ಯೂಟಿ ಇರುವುದಿಲ್ಲ. ಮಹಿಳೆ ಅಥವಾ ಮಕ್ಕಳು 40 ಗ್ರಾಮ್ ಚಿನ್ನ, ಅಥವಾ 1,00,000 ರೂ ಮೌಲ್ಯದ ಚಿನ್ನವನ್ನು ತೆರಿಗೆ ರಹಿತವಾಗಿ ತರಬಹುದು.
ಈ ಮಿತಿಗಿಂತ ಹೆಚ್ಚು ಪ್ರಮಾಣದ ಚಿನ್ನ ತರುತ್ತಿದ್ದರೆ ಅದಕ್ಕೆ ಶೇ. 3ರಿಂದ ಶೇ. 10ರವರೆಗೂ ಕಸ್ಟಮ್ಸ್ ಡ್ಯೂಟಿ ಪಾವತಿಸಬೇಕಾಗುತ್ತದೆ. ಡ್ಯೂಟಿ ಫ್ರೀ ಚಿನ್ನವೆಂದರೆ ಇಲ್ಲಿ ಆಭರಣ ಚಿನ್ನವಾಗಿರುತ್ತದೆ. ನೀವು ಗೋಲ್ಡ್ ಕಾಯಿನ್, ಗೋಲ್ಡ್ ಬಾರ್ ಇತ್ಯಾದಿ ಸಾಗಿಸುತ್ತಿದ್ದರೆ ಅದಕ್ಕೆ ಕಸ್ಟಮ್ಸ್ ಡ್ಯೂಟಿ ಅನ್ವಯ ಆಗುತ್ತದೆ.
ಇದನ್ನೂ ಓದಿ: ಬಳಕೆಯಲ್ಲಿ ಇಲ್ಲದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸುವ ಕ್ರಮ
ನೀವು ಚಿನ್ನ ಅಥವಾ ಬೆಳ್ಳಿ ಇತ್ಯಾದಿಯ ಆಭರಣ ಹೊಂದಿದ್ದರೆ ಅದನ್ನು ಖರೀದಿಸಿದ್ದಕ್ಕೆ ರಸೀದಿ ಇತ್ಯಾದಿ ದಾಖಲೆಗಳು ಇರಬೇಕು. ಅಧಿಕಾರಿಗಳು ಕೇಳಿದಾಗ ತೋರಿಸಬೇಕು. ಒಂದು ವೇಳೆ ಡ್ಯೂಟಿ ಫ್ರೀ ಮಿತಿಗಿಂತ ಹೆಚ್ಚು ಚಿನ್ನ ಹೊಂದಿದ್ದರೆ ಅದನ್ನು ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ವಿಭಾಗದಲ್ಲಿ ಘೋಷಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳು ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.
ನೀವು ವಿದೇಶ ಪ್ರವಾಸಕ್ಕೆ ಹೋಗಿ ಅಲ್ಲಿಂದ ಚಿನ್ನ ಖರೀದಿಸಿ ತಂದರೆ ಕಸ್ಟಮ್ಸ್ ಡ್ಯೂಟಿ ಕಟ್ಟಲೇ ಬೇಕು. ವಿದೇಶಕ್ಕೆ ಹೋಗಿ ಆರು ತಿಂಗಳ ಒಳಗಾಗಿ ಮರಳುತ್ತಿದ್ದರೆ, 10 ಗ್ರಾಮ್ ಚಿನ್ನವಾದರೂ ತೆರಿಗೆ ಕಟ್ಟಲೇಬೇಕು. ವಿದೇಶದಲ್ಲಿ ಕನಿಷ್ಠ ಆರು ತಿಂಗಳು ನೆಲಸಿ ಭಾರತಕ್ಕೆ ಬರುತ್ತಿದ್ದರೆ ಆಗ ಚಿನ್ನಕ್ಕೆ ಡ್ಯೂಟಿ ಫ್ರೀ ಇರುತ್ತದೆ. ಇಲ್ಲಿ ಮಿತಿಗಿಂತ ಹೆಚ್ಚು ಪ್ರಮಾಣದ ಚಿನ್ನ ಇದ್ದರೆ ಡ್ಯೂಟಿ ಫ್ರೀ ಇರಲ್ಲ, ತೆರಿಗೆ ಕಟ್ಟಲೇ ಬೇಕು.
ಇದನ್ನೂ ಓದಿ: 2016-17ರ ಸರಣಿಯ ಸಾವರೀನ್ ಗೋಲ್ಡ್ ಬಾಂಡ್ನಿಂದ ಸಿಕ್ಕ ಲಾಭ ಶೇ. 140; ಹೂಡಿಕೆದಾರರ ಕೈಹಿಡಿದ ಚಿನ್ನ
ಮತ್ತೊಂದು ಸಂಗತಿ ಎಂದರೆ, ನೀವು ವಿದೇಶಕ್ಕೆ ಹೋಗಿ ಆರು ತಿಂಗಳ ಒಳಗಾಗಿ 1 ಕಿಲೋ ಚಿನ್ನದೊಂದಿಗೆ ವಾಪಸ್ ಬರುತ್ತಿದ್ದರೆ ಕಸ್ಟಮ್ಸ್ ಡ್ಯೂಟಿ ಶೇ. 38ರವರೆಗೂ ಇರುತ್ತದೆ. ಆರು ತಿಂಗಳಿಗೂ ಹೆಚ್ಚು ಕಾಲವಾಗಿದ್ದರೆ ಒಂದು ಕಿಲೋ ಚಿನ್ನಕ್ಕೆ ಶೇ. 13.7ರಷ್ಟು ಸುಂಕ ವಿಧಿಸಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ