
ನೀವೆಷ್ಟೇ ದುಡಿದು, ಹಣ ಸಂಪಾದಿಸಿದರೂ, ಅದು ನಿಮ್ಮೊಂದಿಗೆ ನಿಲ್ಲದೇ ಹೋದರೆ ಯಾವ ಪ್ರಯೋಜನವೂ ಇಲ್ಲ. ಹಣ ಉಳಿಕೆಯು (savings) ಹಣ ಗಳಿಕೆಗೆ ಸಮ ಎಂದು ತಿಳಿದವರು ಹೇಳುತ್ತಾರೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅಭಿಷೇಕ್ ವಾಲಿಯಾ ಇತ್ತೀಚೆಗೆ ತಮ್ಮ ಲಿಂಕ್ಡ್ಇನ್ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಇಬ್ಬರು ಸ್ನೇಹಿತರ ಕಥೆಯನ್ನು (ಕಾಲ್ಪನಿಕ) ವಿವರಿಸಿದ್ದಾರೆ. ಆ ಇಬ್ಬರು ಗೆಳೆಯರದ್ದು ಒಂದೇ ಕೆಲಸ, ಒಂದೇ ಸಂಬಳ, ಒಂದೇ ಜೀವನ ಶೈಲಿ. ಆದರೆ, ಅವರಿಬ್ಬರ ಬದುಕಿನ ಸ್ಥಿತಿಗತಿಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಅದು ಹೇಗೆ ಎಂದು ಅಭಿಷೇಕ್ ಹೇಳುತ್ತಾರೆ.
ಒಬ್ಬ ಗೆಳೆಯ ಸಾಲಮುಕ್ತನಾಗಿದ್ದಾನೆ. ಮತ್ತೊಬ್ಬ ಗೆಳೆಯ ತಿಂಗಳಿಗೆ 30,000 ಇಎಂಐನಲ್ಲಿ ಸಿಲುಕಿಕೊಂಡಿದ್ದಾನೆ. ಈ ಎರಡನೇ ಗೆಳೆಯನ ಬದುಕು ಗಾಣದೆತ್ತಿನಂತೆ ಇರುತ್ತದೆ. ಅದೇ ಸುತ್ತು ಹಾಕುವುದೇ ಕಾಯಕವಾಗಿರುತ್ತದೆ.
ಇದನ್ನೂ ಓದಿ: ನೂರು ಕೋಟಿ ಗಳಿಸುವ ಸಿಂಪಲ್ ಐಡಿಯಾ; 25 ವರ್ಷದ ಯುವಜನರಿಗೆ ಉದ್ಯಮಿ ಕಿವಿಮಾತು
ಇಎಂಐಗಳು ನಿಮ್ಮ ತಿಂಗಳ ಆದಾಯವನ್ನು ತಿಂದು ಹಾಕುತ್ತಿರುತ್ತವೆ. ನಿಮ್ಮ ಧೈರ್ಯವನ್ನು ಉಡುಗಿಸುತ್ತಿರುತ್ತವೆ. ಹೂಡಿಕೆ ಮಾಡುವ ಅವಕಾಶವನ್ನು ಮೊಟಕುಗೊಳಿಸುತ್ತಿರುತ್ತವೆ. ಜೀವನದಲ್ಲಿ ದುಡ್ಡಿನ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಾಗದಂತೆ ಮಾಡಬಹುದು. ಸಾಲವು ಅವನ ಕೈಯನ್ನು ಕಟ್ಟಿಹಾಕುತ್ತದೆ ಎಂದು ಚಾರ್ಟರ್ಡ್ ಅಕೌಂಟೆಂಟ್ ಬಿಡಿಸಿ ಹೇಳುತ್ತಾರೆ.
ಮೊದಲ ಗೆಳೆಯ ಯಾವ ಇಎಂಐ ಗಾಳಕ್ಕೆ ಬಿದ್ದಿಲ್ಲ. ತಿಂಗಳ ಆದಾಯದಲ್ಲಿ ಹೆಚ್ಚಿನ ಮೊತ್ತವು ಉಳಿತಾಯ ಆಗುತ್ತಿರುತ್ತದೆ. ಯಾವುದಾದರೂ ಹೂಡಿಕೆ ಅವಕಾಶ ಸಿಕ್ಕಿದರೆ ಅದನ್ನು ಪ್ರಯತ್ನಿಸುವ ಧೈರ್ಯ ಸಿಗುತ್ತದೆ. ಹಣದಿಂದ ಹಣ ಬೆಳೆಯುತ್ತಾ ಹೋಗುತ್ತದೆ ಎಂಬುದು ಅಭಿಷೇಕ್ ವಾಲಿಯಾ ಅವರ ವಾದ.
ಇದನ್ನೂ ಓದಿ: ಮನೆಗೆಲಸದವಳ ಬಳಿ 60 ಲಕ್ಷ ರೂ ಫ್ಲಾಟ್, ಎರಡಂತಸ್ತಿನ ಮನೆ, ಅಂಗಡಿ; ಮಾಲೀಕರು ಶಾಕ್
ಇಎಂಐಗಳು ಮೇಲ್ನೋಟಕ್ಕೆ ಬಹಳ ಆಕರ್ಷಕ. ನಿಮಗೆ ಅಗತ್ಯ ಇಲ್ಲದ ಲಕ್ಷುರಿ ವಸ್ತುಗಳನ್ನು ನೀವು ಇಎಂಐ ಇದೆ ಅನ್ನೋ ಕಾರಣಕ್ಕೆ ಖರೀದಿಸುವ ಸಾಧ್ಯತೆ ಹೆಚ್ಚು. ಹೀಗೆ ನಿಮಗೆ ಗೊತ್ತೇ ಇಲ್ಲದಂತೆ ಇಎಂಐಗಳ ಜಾಲಕ್ಕೆ ಬಹಳ ಮಂದಿ ಸಿಲುಕಿ ಬಿಡುತ್ತಾರೆ.
ತಜ್ಞರ ಪ್ರಕಾರ ಗೃಹಸಾಲವೇ ಆಗಲೀ, ಗೃಹೋಪಕರಣಗಳ ಖರೀದಿಯಾಗಲೀ ಒಟ್ಟೂ ಇಎಂಐಗಳು ನಿಮ್ಮ ಆದಾಯದ ಶೇ. 40ಕ್ಕಿಂತ ಹೆಚ್ಚು ಇರಬಾರದು. ಶೇ. 25ಕ್ಕಿಂತ ಒಳಗೆ ಇರುವುದು ಉತ್ತಮ. ಅಂದರೆ ನಿಮಗೆ ಸಂಬಳ 50,000 ರೂ ಬರುತ್ತಿದ್ದರೆ, ನಿಮ್ಮ ಎಲ್ಲಾ ಇಎಂಐಗಳು ಸೇರಿಸಿದರೂ ಅದು 12,500 ರೂ ಮೀರದಂತೆ ನೋಡಿಕೊಳ್ಳಬೇಕು ಎಂಬುದು ತಜ್ಞರುಗಳ ಸಲಹೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ