ನೂರು ಕೋಟಿ ಗಳಿಸುವ ಸಿಂಪಲ್ ಐಡಿಯಾ; 25 ವರ್ಷದ ಯುವಜನರಿಗೆ ಉದ್ಯಮಿ ಕಿವಿಮಾತು
Anupam Mittal advice to youngsters: ಷೇರು, ಚಿನ್ನ, ಮನೆ, ಇವುಗಳ ಮೇಲೆ ಹಣ ಹೂಡಿಕೆ ಮಾಡುವುದು ಯಾವತ್ತೂ ತಪ್ಪಲ್ಲ ಎನ್ನುತ್ತಾರೆ ಉದ್ಯಮಿ ಅನುಪಮ್ ಮಿಟ್ಟಲ್. ಹೂಡಿಕೆಯ ಕಾಂಪೌಂಡಿಂಗ್ ಗುಣ ತಿಳಿದಿರಬೇಕು. ದೀರ್ಘಾವಧಿ ಹೂಡಿಕೆಯಿಂದ ಲಾಭ ಹೆಚ್ಚು. ಒಂದು ಸ್ವಂತ ಮನೆ ಹೊಂದಿರುವುದು ಬಹಳ ಮುಖ್ಯ ಎಂದು ಅನುಪಮ್ ಮಿತ್ತಲ್ ಹೇಳುತ್ತಾರೆ.

ನವದೆಹಲಿ, ಅಕ್ಟೋಬರ್ 14: ಬಹಳ ಜನರಿಗೆ ಒಂದು ಕೋಟಿ ರೂ ಸಂಪಾದಿಸುವುದೇ ಜೀವನದ ಪರಮ ಗುರಿಯಾಗಿರುತ್ತದೆ. ನೂರು ಕೋಟಿ ರೂ ಗಳಿಸುವ ಕನಸಂತೂ ದೂರದ ಮಾತೇ ಆಗಿರಬಹುದು. ಅದರಲ್ಲೂ ಸಂಬಳಕ್ಕೆ ಕೆಲಸ ಮಾಡುವವರಂತೂ ಕನಸು ಕೂಡ ಕಾಣುವುದಿಲ್ಲ. ಆದರೆ, ಯಾರು ಬೇಕಾದರೂ ಕೋಟಿಗಟ್ಟಲೆ ಹಣ ಸಂಪಾದಿಸಬಹುದು, ಬಿಲಿಯನೇರ್ಗಳಾಗಬಹುದು. ಹಾಗಂತ, ಶಾದಿ ಡಾಟ್ ಕಾಮ್ ಸಂಸ್ಥಾಪಕ ಹಾಗೂ ಉದ್ಯಮಿ ಅನುಪಮ್ ಮಿಟ್ಟಲ್ (Anupam Mittal) ಹೇಳುತ್ತಾರೆ. 30 ವರ್ಷದೊಳಗಿನ ವಯಸ್ಸಿನ ಯುವಜನರಿಗೆ ಮಿಟ್ಟಲ್ ಅದ್ಭುತ ಟಿಪ್ಸ್ ಕೊಡುತ್ತಾರೆ.
ಹಣದ ಕಾಂಪೌಂಡಿಂಗ್ ಗುಣ ಗ್ರಹಿಸಬೇಕು: ಮಿಟ್ಟಲ್
ಹಣದ ಕಾಂಪೌಂಡಿಂಗ್ ಗುಣದ (money compounding effect) ಬಗ್ಗೆ ಇವತ್ತಿನ ಹುಡುಗರಿಗೆ ಅರ್ಥವಾಗುತ್ತಿಲ್ಲ. ಮನುಷ್ಯನ ಮಿದುಳು ಕೂಡ ಇದನ್ನು ಸರಿಯಾಗಿ ಗ್ರಹಿಸುವುದಿಲ್ಲ. ಹೀಗಾಗಿ, ಬಹಳ ಬೇಗ ಶ್ರೀಮಂತರಾಗುವ ಸ್ಕೀಮ್ಗಳ ಬಲೆಗೆ ಜನರು ಬೀಳುತ್ತಾರೆ. ಶ್ರೀಮಂತಿಕೆ ಸಂಪಾದಿಸಬೇಕಾದರೆ ಕಾಂಪೌಂಡಿಂಗ್ ಎಷ್ಟು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅನುಪಮ್ ಮಿಟ್ಟಲ್ ಹೇಳುತ್ತಾರೆ.
ಇದನ್ನೂ ಓದಿ: ಮನೆಗೆಲಸದವಳ ಬಳಿ 60 ಲಕ್ಷ ರೂ ಫ್ಲಾಟ್, ಎರಡಂತಸ್ತಿನ ಮನೆ, ಅಂಗಡಿ; ಮಾಲೀಕರು ಶಾಕ್
ದೀರ್ಘಾವಧಿ ಹೂಡಿಕೆ ಮುಖ್ಯ: ಮಿಟ್ಟಲ್
ಭಾರತದ ಷೇರು ಮಾರುಕಟ್ಟೆಯಲ್ಲೇ ನೀವು 20 ವರ್ಷ ನಿರಂತರವಾಗಿ ಎಸ್ಐಪಿ ಮೂಲಕ ಹೂಡಿಕೆ ಮಾಡಿದರೆ ಹೇರಳ ಸಂಪತ್ತು ಪಡೆಯಬಹುದು. 100 ಕೋಟಿ ರೂ ಬಳಸಿ ನಿಮ್ಮ ಜೀವಿತಾವಧಿಯಲ್ಲೇ ಬಿಲಿಯನೇರ್ ಆಗಬಹುದು. ಯಾವ ಷೇರುಗಳಲ್ಲಿ ಹೂಡಿಕೆ ಮಾಡಬೇಕು ಎಂದು ತಲೆಕೆಡಿಸಿಕೊಳ್ಳುವುದು ಬೇಡ. 30 ವರ್ಷ ಇಂಡೆಕ್ಸ್ ಅನ್ನು ಖರೀದಿಸುತ್ತಾ ಹೋದರೆ ಸಾಕು. ಕಾಂಪೌಂಡಿಂಗ್ನಿಂದಾಗಿ ನಿಮ್ಮ ಹೂಡಿಕೆ ಬೆಳೆಯುತ್ತಾ ಹೋಗುತ್ತದೆ ಎಂದು ಶಾರ್ಕ್ ಟ್ಯಾಂಕ್ ರಿಯಾಲಿಟಿ ಶೋದಲ್ಲಿ ಹೂಡಿಕೆದಾರರಾಗಿ ಕಾಣಿಸುವ ಅನುಪಮ್ ಮಿಟ್ಟಲ್ ತಿಳಿಸುತ್ತಾರೆ.
ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಬಹುದಾ?
ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಮಾಡಬಹುದಾ ಎನ್ನುವ ಬಗ್ಗೆ ಅನುಪಮ್ ಮಿಟ್ಟಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ: ‘ಚಿನ್ನ ಖರೀದಿಸಿ ಎಂದು ಹಿಂದೆ ದೊಡ್ಡವರು ಹೇಳುತ್ತಿದ್ದರು. ಚಿನ್ನದಿಂದ ಯಾವ ಕಾಂಪೌಂಡಿಂಗ್ ಆಗೋದಿಲ್ಲ ಅಂತ ಹೇಳುತ್ತಿದ್ದೆ. ಆದರೆ, ಈಗ ನೋಡಿದರೆ ಚಿನ್ನದ ಬೆಲೆ 3-4 ಪಟ್ಟು ಬೆಳೆದಿದೆ. ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ ಎಂದು ಈಗ ಹೇಗೆ ಹೇಳಲು ಸಾಧ್ಯ?’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ತಿಂಗಳಿಗೆ 10,000 ರೂ ಹೂಡಿಕೆಯಲ್ಲಿ 10 ವರ್ಷದಲ್ಲಿ ಒಂದು ಕೋಟಿ ಸಾಧ್ಯವಾ?
ಒಂದು ಮನೆ ಬೇಕೇ ಬೇಕು…
ಮನೆ ಖರೀದಿಸಲು ಮಾಡುವ ಹೂಡಿಕೆಗಿಂತ ಬಾಡಿಗೆ ಕಟ್ಟಿಕೊಂಡು ಹೋಗುವುದೇ ಲೇಸು ಎಂದು ಈಗೀಗ ಸೋಷಿಯಲ್ ಮೀಡಿಯಾದಲ್ಲಿ ಇನ್ಫ್ಲುಯನ್ಸರ್ಗಳು ಹೇಳುತ್ತಿರುತ್ತಾರೆ. ಇದು ತಪ್ಪು ಕಲ್ಪನೆ ಎಂಬುದು ಮಿಟ್ಟಲ್ ಅನಿಸಿಕೆ.
‘ಹಣ ಇದ್ದರೆ ಚಿನ್ನ ಖರೀದಿಸು, ಮನೆ ಖರೀದಿಸು ಎಂದು ಹಿರಿಯರು ಕಿವಿಮಾತು ಹೇಳುತ್ತಿರುತ್ತಾರೆ. ತಲೆ ಮೇಲೆ ಒಂದು ಸೂರಂತೂ ಬೇಕೇ ಬೇಕು. ಸ್ವಂತ ಮನೆ ಇದ್ದರೆ ನೀವು ದೊಡ್ಡ ರಿಸ್ಕ್ ತೆಗೆದುಕೊಳ್ಳಬಹುದು’ ಎಂದು ಶಾದಿ ಡಾಟ್ ಕಾಂ ಸಂಸ್ಥಾಪಕರು ಹೇಳಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




