
ಇವತ್ತಿನ ವೇಗದ ಜೀವನದಲ್ಲಿ ಸಮಯ ಹಾಳು ಮಾಡಲು, ಹಣ ಖರ್ಚು ಮಾಡಲು ಹೇರಳ ಅವಕಾಶಗಳಿವೆ. ಎಷ್ಟೇ ಸಂಬಳ ಅಥವಾ ಆದಾಯ ಬಂದರೂ ಸ್ವಲ್ಪ ಎಚ್ಚರ ತಪ್ಪಿದರೆ ಈ ವೆಚ್ಚದಲ್ಲಿ ಎಲ್ಲವೂ ಕೊಚ್ಚಿ ಹೋಗಬಹುದು. ಈಗಾಗಲೇ ಮಧ್ಯ ವಯಸ್ಸು ದಾಟಿದ ಹೆಚ್ಚಿನ ಸಂಬಳದಾರರಿಗೆ ಈ ಕಹಿ ಸತ್ಯ ಅರಿವಾಗಿರಬಹುದು. ಇರುವುದೊಂದೇ ಜೀವನ ಎಂದು ಬಿಂದಾಸ್ ಲೈಫ್ಸ್ಟೈಲ್ ಇಷ್ಟಪಡುವ ಇಂದಿನ ಪೀಳಿಗೆಯ ಜನರು ಕಲಿಯಬೇಕಾದ ಅಮೂಲ್ಯ ಹಣಕಾಸು ಪಾಠಗಳು ಇಂತಿವೆ:
ಗಳಿಸಿದ ಹಣದಲ್ಲಿ ಕಡ್ಡಾಯವಾಗಿ ಉಳಿಸುವುದನ್ನು ರೂಢಿಸಿಕೊಳ್ಳಬೇಕು. ಎಷ್ಟು ಉಳಿಸಬೇಕು ಎಂದು ಗೊಂದಲವಿದ್ದಲ್ಲಿ, ಕನಿಷ್ಠ ಶೇ 20ರಷ್ಟನ್ನಾದರೂ ಉಳಿಸಬೇಕು ಎಂದು ಫಿಕ್ಸ್ ಮಾಡಿಕೊಳ್ಳಿ. ಅಂದರೆ, ನಿಮಗೆ ಸಂಬಳ 25,000 ರೂ ಬರುತ್ತಿದ್ದರೆ ಕನಿಷ್ಠ 5,000 ರೂ ಆದರೂ ಉಳಿಸಬೇಕು. ಅಂದರೆ ನಿಮ್ಮ ಎಲ್ಲಾ ಖರ್ಚು, ಇಎಂಐ, ಬಾಡಿಗೆ ಇತ್ಯಾದಿ ವೆಚ್ಚ ಕಳೆದು ಉಳಿಸುವ ಹಣ ಇದು. ಉಳಿತಾಯವು ಶೇ. 20ಕ್ಕೇ ಸೀಮಿತವಾಗಬೇಕೆಂದಿಲ್ಲ. ಸಾಧ್ಯವಾದರೆ ಇನ್ನೂ ಹೆಚ್ಚು ಉಳಿಸಲು ಯತ್ನಿಸಿ.
ನಿಮ್ಮ ದೈನಂದಿನ ವೆಚ್ಚಗಳ ಪಟ್ಟಿ ಮಾಡಿಕೊಳ್ಳಿ. ಒಂದು ತಿಂಗಳಲ್ಲಿ ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡುತ್ತೀರಿ ಎನ್ನುವ ಲೆಕ್ಕ ಸಿಗುತ್ತದೆ. ಇದರಲ್ಲಿ ಅನಗತ್ಯವಾದ ವೆಚ್ಚಗಳೇನು ಗಮನಿಸಿ, ಅದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಿ.
ಇದನ್ನೂ ಓದಿ: ಹಣ ಮತ್ತು ಗಣಿತದ ಜುಗಲ್ಬಂದಿ ಸೀಕ್ರೆಟ್… 5 ವರ್ಷಕ್ಕೆ 1 ಲಕ್ಷ, ಮುಂದಿನ 10 ವರ್ಷಕ್ಕೆ ಆರು ಪಟ್ಟು ರಿಟರ್ನ್
ಉದ್ಯೋಗನಷ್ಟವಾಗುವುದು, ಆಸ್ಪತ್ರೆಗೆ ದಾಖಲಾಗುವುದು ಇತ್ಯಾದಿ ಸಂಭವಿಸಬಹುದು. ಆಗ ಕೈಯಲ್ಲಿ ಹಣ ಇಲ್ಲದಿದ್ದರೆ ಸಾಲ ಮಾಡಬೇಕಾಗುತ್ತದೆ. ಹೀಗಾಗಿ, ಇಂತಹ ತುರ್ತು ವೆಚ್ಚಕ್ಕೆಂದು ಎಮರ್ಜೆನ್ಸಿ ಫಂಡ್ ನಿರ್ಮಿಸುವುದು ಒಳ್ಳೆಯ ಐಡಿಯಾ. ನಿಮ್ಮ ಮಾಸಿಕ ವೆಚ್ಚದ ಆರು ಪಟ್ಟು ಹಣವಾದರೂ ಇದರಲ್ಲಿರಬೇಕು. ಎಫ್ಡಿಯಲ್ಲೋ, ಸೇವಿಂಗ್ಸ್ ಅಕೌಂಟ್ನಲ್ಲೋ ಅಥವಾ ಲಿಕ್ವಿಡ್ ಮ್ಯುಚುವಲ್ ಫಂಡ್ನಲ್ಲೋ ಈ ಹಣ ಇರಿಸಬಹುದು.
ಎಮರ್ಜೆನ್ಸಿ ಫಂಡ್ ನಿರ್ಮಿಸಿದ ಬಳಿಕ ನೀವು ಮಾಡಬೇಕಾದ ಮೊದಲ ಕೆಲಸ ಎಂದರೆ ಹೂಡಿಕೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಹೂಡಿಕೆ ಆರಂಭಿಸಬೇಕು. ಇದರಿಂದ ದೀರ್ಘಾವಧಿ ಹೂಡಿಕೆ ಸಾಧ್ಯವಾಗಿ ಹೆಚ್ಚಿನ ರಿಟರ್ನ್ಸ್ ನಿರೀಕ್ಷಿಸಬಹುದು.
ನೀವು ಮುಂದೆ ಏನು ಮಾಡಬೇಕೆಂದಿದ್ದೀರಿ, ಯಾವ ಪ್ರಮುಖ ಖರ್ಚುವೆಚ್ಚಗಳಿವೆ ಎಂಬ ಪಟ್ಟಿ ಮಾಡಿ. ಮದುವೆ, ಮಕ್ಕಳ ಓದು, ಮನೆ ಖರೀದಿ, ನಿವೇಶನ ಖರೀದಿ, ರಿಟೈರ್ಮೆಂಟ್ ಹೀಗೆ ಪಟ್ಟಿ ಮಾಡಿ. ರಿಟೈರ್ಮೆಂಟ್ಗೆ ಪ್ರತ್ಯೇಕವಾಗಿ ಹೂಡಿಕೆ ಅವಶ್ಯಕ. ಎಷ್ಟು ವರ್ಷಕ್ಕೆ ರಿಟೈರ್ ಆಗುತ್ತೀರಿ, ಹಣದುಬ್ಬರವನ್ನೂ ಪರಿಗಣಿಸಿ ಆಗ ಎಷ್ಟು ಬೇಕಾಗಬಹುದು ಎಂಬುದನ್ನು ಲೆಕ್ಕ ಮಾಡಿ. ಅದಕ್ಕೆ ಎಷ್ಟು ಹೂಡಿಕೆ ಬೇಕು ಎಂದು ನಿರ್ಧರಿಸಿ ಈಗಿನಿಂದಲೇ ಆರಂಭಿಸಿ. ಬೇರೆ ಬೇರೆ ಅಗತ್ಯಗಳಿಗೂ ಪ್ರತ್ಯೇಕವಾಗಿ ಹೂಡಿಕೆ ಮಾಡಬಹುದು.
ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ಮೊದಲು ಕೈಬಿಟ್ಟುಹೋಗೋದು ಹಣ ಅಲ್ಲ; ಇದು ತಿಳಿದಿರಿ…
ನೀವು ರೆಗ್ಯುಲರ್ ಜಾಬ್ಗೆ ಹೋಗುವುದರ ಜೊತೆಗೆ ಇನ್ನೊಂದು ಇನ್ಕಮ್ ಸೃಷ್ಟಿಸಬಹುದಾ ಯೋಚಿಸಿ. ನೀವು ಈಗ ಉದ್ಯೋಗ ಸ್ಥಳದಲ್ಲಿ ಮಾಡುವ ಕೆಲಸಕ್ಕಿಂತ ಭಿನ್ನವಾದ ಯಾವ ಕೆಲಸದಲ್ಲಿ ನೈಪುಣ್ಯತೆ ಹೊಂದಿದ್ದೀರಿ, ಅಥವಾ ಅಭಿಲಾಷೆ ಹೊಂದಿದ್ದೀರಿ, ಅಂಥದ್ದನ್ನು ಬಿಡುವಿನ ವೇಳೆಯಲ್ಲಿ ಮಾಡಬಹುದು. ಎಲ್ಲಾ ಕಡೆ ಒಂದೇ ತರಹದ ಕೆಲಸ ಮಾಡಿದರೆ ಅದು ಏಕತಾನತೆ ಎನಿಸಬಹುದು. ಈ ರೀತಿ ನೀವಿಷ್ಟಪಡುವ ಬಹುಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕವಾಗಿ ಆಯಾಸ ಆಗುವುದಿಲ್ಲ, ದೈಹಿಕವಾಗಿಯೂ ಬಳಲುವುದಿಲ್ಲ. ವಿವಿಧ ಆದಾಯ ಮೂಲಗಳೂ ಸೃಷ್ಟಿಯಾಗುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ