
ಬೆಂಗಳೂರು, ಸೆಪ್ಟೆಂಬರ್ 19: ಹೆಚ್ಚಿನ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ (Income Tax) ಸಲ್ಲಿಸಲು ನೀಡಲಾಗಿದ್ದ ಸೆಪ್ಟೆಂಬರ್ 16ರ ಗಡುವು ಮುಗಿದಾಗಿದೆ. ಬಹುತೇಕ ಜನರು ಐಟಿಆರ್ ಸಲ್ಲಿಸಿದ್ದಾರೆ. ಆಗಸ್ಟ್ ತಿಂಗಳಲ್ಲೇ ಹಲವರು ಐಟಿಆರ್ ಫೈಲ್ ಮಾಡಿರುವುದುಂಟು. ಅನೇಕರು ತಮಗೆ ಇನ್ನೂ ರೀಫಂಡ್ ಬಂದಿಲ್ಲ ಎಂದು ಕಳವಳಪಡುತ್ತಿರುವುದುಂಟು. ಆದರೆ, ಇನ್ಕಮ್ ಟ್ಯಾಕ್ಸ್ ರೀಫಂಡ್ (IT Refund) ವಿಳಂಬವಾಗಲು ಕೆಲ ನಿರ್ದಿಷ್ಟ ಕಾರಣಗಳಿರಬಹುದು. ವಿಳಂಬವಾಗಿ ನಿಮಗೆ ಸಿಕ್ಕರೂ ಇಲಾಖೆ ನಿಮ್ಮ ಹಣಕ್ಕೆ ಬಡ್ಡಿ ಸೇರಿಸಿಕೊಡುತ್ತದೆ ಎಂಬುದು ತಿಳಿದಿರಲಿ.
ಸಾಮಾನ್ಯವಾಗಿ ಸಣ್ಣ ಮೊತ್ತದ ರೀಫಂಡ್ಗೆ ಕ್ಲೇಮ್ ಇದ್ದರೆ ಕೆಲವೇ ದಿನಗಳಲ್ಲಿ ಅಕೌಂಟ್ಗೆ ಹಣ ಬಂದು ಬಿಡುತ್ತದೆ. ಕೆಲವರಿಗೆ, ಐಟಿಆರ್ ವೆರಿಫೈ ಆದ ದಿನವೇ ರೀಫಂಡ್ ಸಿಕ್ಕಿರುವುದುಂಟು. ಅದೇ ದಿನ ಸಿಕ್ಕದೇ ಹೋದರೂ ಬೆರಳೆಣಿಕೆಯ ದಿನಗಳಲ್ಲಿ ರೀಫಂಡ್ ಬರುತ್ತದೆ.
ಐಟಿಆರ್ ಸಲ್ಲಿಸಿದ ಬಳಿಕ ರೀಫಂಡ್ ಬರಲು ಸರಾಸರಿಯಾಗಿ ನಾಲ್ಕರಿಂದ ಐದು ವಾರ ಆಗಬಹುದು. ಆದಾಯ ತೆರಿಗೆ ಇಲಾಖೆಯು ಸೆಕ್ಷನ್ 143(1) ಅಡಿಯಲ್ಲಿ ಪರಿಶೀಲನೆಗಳನ್ನುನಡೆಸುತ್ತದೆ. ಇದರಿಂದ ಪ್ರೋಸಸಿಂಗ್ ಆಗುವುದು ವಿಳಂಬವಾಗುತ್ತದೆ.
ಇದನ್ನೂ ಓದಿ: ಇಪಿಎಫ್ಒನಲ್ಲಿ ಹೊಸ ಫೀಚರ್ಸ್; ಪಾಸ್ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ
ಈ ವರ್ಷ ಡಿಡಕ್ಷನ್ ಮತ್ತು ಎಕ್ಸೆಂಪ್ಷನ್ಗಳಿಗೆ ಹೊಸ ವೆರಿಫಿಕೇಶನ್ ಪ್ರೋಸಸ್ಗಳನ್ನು (ಪರಿಶೀಲಿಸುವ ಕ್ರಮ) ತರಲಾಗಿದೆ. ದೊಡ್ಡ ಮೊತ್ತದ ರೀಫಂಡ್ಗೆ ಕ್ಲೇಮ್ ಸಲ್ಲಿಸಿದ್ದಾಗ ವೆರಿಫಿಕೇಶನ್ ಮಾಡುವುದು ತುಸು ತಡವಾಗುತ್ತಿದೆ.
ಕ್ಯಾಪಿಟಲ್ ಗೇನ್, ಬ್ಯುಸಿನೆಸ್ ಮತ್ತಿತರ ಮೂಲಗಳಿಂದ ಆದಾಯ ಬಂದಿದ್ದರೆ ಇಲಾಖೆಯು ಹೆಚ್ಚು ನಿಗಾ ಇಟ್ಟು ಪರಿಶೀಲನೆ ನಡೆಸುತ್ತದೆ. ತೆರಿಗೆ ಬಾಧ್ಯತೆಗೂ, ಕ್ಲೇಮ್ ಮಾಡಲಾದ ರೀಫಂಡ್ಗೂ ಸರಿಯಾಗಿ ತಾಳಮೇಳ ಇಲ್ಲ ಎಂದನಿಸಿದಲ್ಲಿ ತೆರಿಗೆಪಾವತಿದಾರರಿಂದ ಇಲಾಖೆಯು ಸ್ಪಷ್ಟನೆ ಕೋರಬಹುದು. ಇಂಥ ಪ್ರಕರಣಗಳಲ್ಲಿ ರೀಫಂಡ್ಗೆ ಅನುಮೋದನೆ ಸಿಗುವುದು ಒಂದು ತಿಂಗಳಿಗಿಂತ ಹೆಚ್ಚು ಕಾಲ ಹಿಡಿಯಬಹುದು.
ನಿಮಗೆ ರೀಫಂಡ್ ಸಿಗುವುದು ವಿಳಂಬವಾದರೆ ಚಿಂತೆಪಡಬೇಕಿಲ್ಲ. ಡಿಸೆಂಬರ್ನಲ್ಲೇ ನಿಮಗೆ ರೀಫಂಡ್ ಆಗಲಿ, ಇಲಾಖೆಯು ನಿಮ್ಮ ರೀಫಂಡ್ ಹಣಕ್ಕೆ ಬಡ್ಡಿ ಸಮೇತವಾಗಿ ಸಂದಾಯ ಮಾಡುತ್ತದೆ. ಇಲಾಖೆಯು ವಾರ್ಷಿಕ ಶೇ. 6ರ ಬಡ್ಡಿಯನ್ನು ನಿಮ್ಮ ಹಣಕ್ಕೆ ಸೇರಿಸುತ್ತದೆ.
ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ
ಬಡ್ಡಿಯು ಏಪ್ರಿಲ್ 1ರಿಂದಲೇ ಅನ್ವಯ ಆಗುತ್ತದೆ. ನಿಮಗೆ ಅಕ್ಟೋಬರ್ ತಿಂಗಳಿಗೆ ರೀಫಂಡ್ ಆದರೆ ಆರು ತಿಂಗಳು ನಿಮ್ಮ ಹಣಕ್ಕೆ ಬಡ್ಡಿ ಜಮೆ ಆಗಿರುತ್ತದೆ. ನವೆಂಬರ್ನಲ್ಲಿ ಬಂದರೆ, ಏಳು ತಿಂಗಳು ಬಡ್ಡಿ ಸೇರ್ಪಡೆಯಾಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Fri, 19 September 25