ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನ ಇಂದು ಸೆಪ್ಟೆಂಬರ್ 17. ಭಾರತದ ಆರ್ಥಿಕತೆಗೆ ಅಗಾಧ ಬೆಳವಣಿಗೆಗೆ ಕಾರಣರಾಗಿರುವ ಅವರು ವೈಯಕ್ತಿಕವಾಗಿ ಎಷ್ಟು ಆಸ್ತಿವಂತರಾಗಿರಬಹುದು ಎಂಬ ಕುತೂಹಲ ಯಾರಲ್ಲಿಯಾದರೂ ಇರಬಹುದು. ಆದರೆ, ಅವರು ಕಳೆದ ವರ್ಷ ಮಾಡಿಕೊಂಡಿರುವ ಆಸ್ತಿಘೋಷಣೆ ಪ್ರಕಾರ ಅವರ ಬಳಿ ಇರುವ ಒಟ್ಟಾರೆ ಆಸ್ತಿ ಮೌಲ್ಯ 2 ಕೋಟಿ ರೂಗಿಂತ ತುಸು ಹೆಚ್ಚು. ಎಲ್ ಅಂಡ್ ಟಿ ಇನ್ಫ್ರಾಸ್ಟ್ರಕ್ಚರ್ ಬಾಂಡ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ನಲ್ಲಿ (NSC- National Savings Certificate) ಸ್ವಲ್ಪ ಹಣ ಹೂಡಿಕೆ ಮಾಡಿದ್ದಾರೆ. 45 ಗ್ರಾಮ್ಗಳನಷ್ಟು ಚಿನ್ನಾಭರಣಗಳನ್ನು ಹೊಂದಿದ್ದಾರೆ. ಸುಮಾರು ಒಂದು ಕೋಟಿ ರೂ ಮೌಲ್ಯ ಇರುವ ಒಂದು ನಿವೇಶನ ಗಾಂಧಿನಗರದಲ್ಲಿ ಇದೆ. ಕಾರಿಲ್ಲ, ಯಾವುದೇ ವಾಹನವೂ ಇಲ್ಲ. ಷೇರುಪೇಟೆಯಲ್ಲೂ ಹೂಡಿಕೆ ಹೊಂದಿಲ್ಲ. ಇದೆಲ್ಲದರ ಜೊತೆ ಇನ್ಷೂರೆನ್ಸ್ ಪಾಲಿಸಿ ಪಡೆಯುವುದನ್ನು ಪ್ರಧಾನಿಯವರು ಮರೆತಿಲ್ಲ. ಹಣಕಾಸು ವಿಚಾರದಲ್ಲಿ ನಿರ್ಮೋಹಿ ಸಂತನಂತೆ ಕಾಣುವ ನರೇಂದ್ರ ಮೋದಿ ಅವರು ಜೀವ ವಿಮೆಗೆ (Life Insurance Policy) ಪ್ರಾಮುಖ್ಯತೆ ಕೊಟ್ಟಿರುವುದು ಮೇಲ್ನೋಟಕ್ಕೆ ಕಾಣುತ್ತದೆ.
ವಿಮಾ ಯೋಜನೆಗಳು ಬಹಳ ಹೆಚ್ಚು ಮಟ್ಟದಲ್ಲಿ ರಿಟರ್ನ್ ಕೊಡುವುದಿಲ್ಲವಾದರೂ ನಮ್ಮ ಜೀವನದ ಭದ್ರತೆಗೆ ಬೇಕಾಗಿರುವ ಸ್ಕೀಮ್ಗಳಲ್ಲಿ ಅದೂ ಒಂದು. ನಮ್ಮನ್ನು ನಂಬಿಕೊಂಡಿರುವ ವ್ಯಕ್ತಿಗಳಿಗೆ ಇದು ಧೈರ್ಯ ಮತ್ತು ಸುರಕ್ಷೆಯನ್ನು ಒದಗಿಸುತ್ತದೆ. ಜೊತೆಗೆ, ನಿವೃತ್ತಿ ಬದುಕಿಗೊಂದು ಆಧಾರವಾಗಿರುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿದೆ ನರೇಂದ್ರ ಮೋದಿಯ ಉಳಿತಾಯ ಹಣ; ಎನ್ಎಸ್ಸಿ ಯೋಜನೆ ಬಗ್ಗೆ ತಿಳಿಯಿರಿ
ಇನ್ಷೂರೆನ್ಸ್ ಪಾಲಿಸಿಗಳಲ್ಲಿ ನಾವು ಕಟ್ಟುವ ಪ್ರೀಮಿಯಮ್ಗಳಿಂದ ದೊರಕುವ ಬಡ್ಡಿದರ ಸಾಮಾನ್ಯವೇ. ಅದರೆ, ಅಕಸ್ಮಾತ್ ಆಗಿ ನಾವು ಮೃತಪಟ್ಟರೆ ನಮ್ಮ ಕುಟುಂಬಕ್ಕೆ ನೆರವು ಸಿಗುತ್ತದೆ. ಇದರಿಂದ ನಾವು ಹೆಚ್ಚು ಚಿಂತೆ ಇಲ್ಲದಂತೆ ನೆಮ್ಮದಿ ಬದುಕು ನಡೆಸಲು ಸಾಧ್ಯವಾಗುತ್ತದೆ.
ಇನ್ಷೂರೆನ್ಸ್ ಪಾಲಿಸಿಗಳಿಗೆ ನಾವು ಕಟ್ಟುವ ಪ್ರೀಮಿಯಮ್ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಈ ದೃಷ್ಟಿಯಿಂದ ತೆರಿಗೆ ಉಳಿತಾಯದ ಒಂದು ಮಾರ್ಗ ಇದಾಗಿದೆ.
ದೀರ್ಘಕಾಲದ ಹೂಡಿಕೆ, ಮಧ್ಯಮಾವಧಿ ಗುರಿ, ನಿವೃತ್ತಿ ಯೋಜನೆ ಇತ್ಯಾದಿ ನಮ್ಮ ವಿವಿಧ ಅಗತ್ಯಗಳಿಗೆ ತಕ್ಕಂತೆ ಇನ್ಷೂರೆನ್ಸ್ ಪಾಲಿಸಿಗಳಿರುತ್ತವೆ. ಒಬ್ಬ ವ್ಯಕ್ತಿ ತನ್ನ ಭವಿಷ್ಯದ ಭದ್ರತೆಗಾಗಿ ಕನಿಷ್ಠ ಒಂದಾದರೂ ಇನ್ಷೂರೆನ್ಸ್ ಪಾಲಿಸಿ ಹೊಂದಿರುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ತಜ್ಞರು.
ಲೈಫ್ ಇನ್ಷೂರೆನ್ಸ್ನಂತೆ ಮೆಡಿಕಲ್ ಇನ್ಷೂರೆನ್ಸ್ ಬಹಳ ಬಹಳ ಮುಖ್ಯ. ಇದು ನಮಗೆ ಎರಗಬಹುದಾದ ಅನಿರೀಕ್ಷಿತ ಅನಾರೋಗ್ಯದಿಂದ ಉದ್ಭವಿಸುವ ಖರ್ಚಿನಿಂದ ನಮ್ಮನ್ನು ಕಾಪಾಡುತ್ತದೆ. ಲೈಫ್ ಇನ್ಷೂರೆನ್ಸ್ ಮತ್ತು ಮೆಡಿಕಲ್ ಇನ್ಷೂರೆನ್ಸ್ ಬಹಳ ಅವಶ್ಯ ಇರುವ ವಿಮಾ ಯೋಜನೆಗಳಾಗಿವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ