ವಿದೇಶಗಳಲ್ಲಿ ಹೂಡಿಕೆ (Overseas Investment) ಮಾಡುವುದು ಲಾಭಕರ ಎನ್ನುವ ನಂಬಿಕೆ ಕಳೆದ ವರ್ಷ (2022) ಹುಸಿಯಾಯಿತು. ಅಮೆರಿಕ ಸೇರಿದಂತೆ ಬಹುತೇಕ ವಿದೇಶಿ ಷೇರುಪೇಟೆಗಳಲ್ಲಿ ಮ್ಯೂಚುವಲ್ ಫಂಡ್ಗಳ (Mutual Fund) ಮೂಲಕ ಹೂಡಿಕೆ ಮಾಡಿದ್ದ ಹೂಡಿಕೆದಾರರು ನಷ್ಟ ಅನುಭವಿಸಿದರು. ವಿದೇಶಿ ಫಂಡ್ಗಳ (International Funds) ಕ್ಯಾಟಗರಿ ಅನುಭವಿಸಿದ ನಷ್ಟ ಸುಮಾರು ಶೇ -15 (-15%) ಎಂದು ಅಂದಾಜಿಸಲಾಗಿದೆ. ವಿದೇಶಗಳ ಷೇರುಪೇಟೆಗಳಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಪೈಕಿ ಐಟಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಫಂಡ್ಗಳು ಅನುಭವಿಸಿದ ನಷ್ಟದ ತೀವ್ರತೆಯೂ ಹೆಚ್ಚಾಗಿದೆ. 2022ರ ಡಿಸೆಂಬರ್ ಕೊನೆಯ ಹೊತ್ತಿಗೆ 54 ವಿದೇಶಿ ಫಂಡ್ಗಳು ನೆಗೆಟಿವ್ ರಿಟರ್ನ್ಸ್ ಕೊಟ್ಟಿದ್ದವು. ಕೇವಲ ಎರಡು ಫಂಡ್ಗಳು ಮಾತ್ರ ಎರಡಂಕಿಯ ಲಾಭ (ಶೇ 10ಕ್ಕಿಂತ ಹೆಚ್ಚು) ತಂದುಕೊಟ್ಟಿದ್ದವು. ಈ ಕ್ಯಾಟಗರಿಯಲ್ಲಿ ಟಾಪ್ ಪರ್ಫಾಮೆನ್ಸ್ ತೋರಿಸಿದ್ದು ‘ಎಚ್ಸ್ಬಿಸಿ ಬ್ರೆಜಿಲ್ ಫಂಡ್’ (ಶೇ 16.78) ಮತ್ತು ‘ಡಿಎಸ್ಪಿ ವರ್ಲ್ಡ್ ಮೈನಿಂಗ್ ಫಂಡ್’ (ಶೇ 13.05).
ಭಾರತೀಯ ಹೂಡಿಕೆದಾರರಿಗೆ ತಮ್ಮ ಹೂಡಿಕೆ ಪೋರ್ಟ್ಫೋಲಿಯೊದಲ್ಲಿ ವೈವಿಧ್ಯತೆ ಗಳಿಸಲು ವಿದೇಶಿ ಫಂಡ್ಗಳು ನೆರವಾಗುತ್ತವೆ. ಈ ಫಂಡ್ಗಳು ಅವುಗಳ ಹೆಸರು ಮತ್ತು ಮಾಹಿತಿ ಪತ್ರದ (ಆಫರ್ ಡಾಕ್ಯುಮೆಂಟ್) ಘೋಷಣೆಯಂತೆ ಹೂಡಿಕೆ ಮಾಡುತ್ತವೆ. ಕೆಲವು ಫಂಡ್ಗಳಂತೂ ಹಲವು ದೇಶಗಳ ಷೇರುಪೇಟೆಗಳಲ್ಲಿ ಹೂಡಿಕೆ ಮಾಡುತ್ತವೆ. ಉದಾಹರಣೆಗೆ ಮೋತಿಲಾಲ್ ಓಸ್ವಾಲ್ ಕಂಪನಿಯMSCI EAFE Top100 Select Index Fund ಮೂಲಕ 21 ದೇಶಗಳ ಪ್ರಮುಖ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶ ಸಿಗುತ್ತದೆ. ಆದರೆ ನಮ್ಮ ದೇಶದಲ್ಲಿ ಜನಪ್ರಿಯವಾಗಿರುವ ಬಹುತೇಕ ವಿದೇಶಿ ಫಂಡ್ಗಳು ಅಮೆರಿಕ ಕೇಂದ್ರಿತವಾಗಿವೆ. ಅದರಲ್ಲಿಯೂ ಅಮೆರಿಕದಲ್ಲಿ ಲಿಸ್ಟ್ ಆಗಿರುವ ಹಾಗೂ ತಂತ್ರಜ್ಞಾನ ಆಧರಿತ ಕಂಪನಿಗಳ ಮೇಲೆ ಹೂಡಿಕೆ ಮಾಡುವುದೇ ಹೆಚ್ಚು.
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವು ಈಗ ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಅಮೆರಿಕ ಸಹ ಇದಕ್ಕೆ ಹೊರಗಾಗಿಲ್ಲ. ಏರುತ್ತಿರುವ ಹಣದುಬ್ಬರ, ಹೆಚ್ಚಾಗುತ್ತಿರುವ ಬಡ್ಡಿದರಗಳಿಂದಾಗಿ ಅಮೆರಿಕದ ಷೇರುಪೇಟೆ ತತ್ತರಿಸಿದೆ. ದೇಶವು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಬಹುದು ಎಂದು ಎಚ್ಚರಿಸಲಾಗಿದೆ. ಅಮೆರಿಕದ ಷೇರುಪೇಟೆ ಅನುಭವಿಸಿದ ಹಿನ್ನಡೆಯು ಭಾರತೀಯ ಹೂಡಿಕೆದಾರರ ನಿಧಿ ಕರಗಲು ಒಂದು ಮುಖ್ಯ ಕಾರಣವಾಗಿದೆ. ಕುಸಿತದ ಪ್ರಮಾಣ ತಿಳಿಯಬೇಕೆಂದರೆ ಒಂದೆರೆಡು ಅಂಕಿಅಂಶ ಗಮನಿಸಬೇಕು. ಈಡೆಲ್ವಿಸ್ ಯುಎಸ್ ಟೆಕ್ನಾಲಜಿ ಫಂಡ್ ಶೇ 37, ಮಿರಾಯ್ ಅಸೆಟ್ ಎನ್ವೈಎಸ್ಇ ಇಟಿಎಫ್ ಶೇ 34ರಷ್ಟು ಕುಸಿದಿದೆ.
ಬಾಡದ ಭರವಸೆ
ವಿದೇಶಿ ಫಂಡ್ಗಳ ರಿಟರ್ನ್ಸ್ ಕುಸಿದಿದ್ದರೂ ಅವುಗಳಿಂದ ಹೂಡಿಕೆ ಹಿಂಪಡೆಯಲು ಭಾರತೀಯರು ಮುಂದಾಗುತ್ತಿಲ್ಲ. ಇಂದಲ್ಲ ನಾಳೆ ಪರಿಸ್ಥಿತಿ ಬದಲಾಗಲಿದೆ ಎಂಬ ನಿರೀಕ್ಷೆ ಹೂಡಿಕೆದಾರರದು. ಆದರೆ ಹೊಸ ಹೂಡಿಕೆಗಳ ಪ್ರಮಾಣ ಮಾತ್ರ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಸೆಬಿ ಆರಂಭಿಸಿದ ಹೊಸ ನಿಯಮವೂ ವಿದೇಶಿ ಹೂಡಿಕೆಗಳಿಗೆ ಕಡಿವಾಣ ಹಾಕಿದೆ. ಅದರಂತೆ ಮ್ಯೂಚುವಲ್ ಫಂಡ್ ಉದ್ಯಮ ಒಂದು ವರ್ಷದಲ್ಲಿ 7 ಶತಕೋಟಿ ಡಾಲರ್ ಮೊತ್ತದಷ್ಟು ವಿದೇಶಿ ಹೂಡಿಕೆ ಮಾಡಲು ಮಾತ್ರವೇ ಅವಕಾಶವಿದೆ. ಹೀಗಾಗಿ ಈ ಮೊತ್ತ ತಲುಪಿದ ತಕ್ಷಣ ವಿದೇಶಿ ಫಂಡ್ಗಳು ಹೂಡಿಕೆಗೆ ಹಣ ಪಡೆಯುವುದನ್ನು ನಿಲ್ಲಿಸುತ್ತವೆ.
ಹೂಡಿಕೆದಾರರು ಈಗೇನು ಮಾಡಬೇಕು?
ಮ್ಯೂಚುವಲ್ ಫಂಡ್ಗಳಲ್ಲಿ ಹಲವು ವರ್ಷಗಳಿಂದ ನಿಯಮಿತ ಹೂಡಿಕೆಯ ಮಾರ್ಗ ಅನುಸರಿಸುತ್ತಿರುವವರಿಗೆ ಹೊಸದಾಗಿ ಹೇಳಬೇಕಾದ್ದು ಏನೂ ಇರುವುದಿಲ್ಲ. ಆದರೆ ಪೋರ್ಟ್ಫೋಲಿಯೊಗೆ ವೈವಿಧ್ಯತೆ (Diversify) ತಂದುಕೊಡಲು ವಿದೇಶಿ ಫಂಡ್ಗಳು ಒಳ್ಳೆಯದು. ಆರ್ಥಿಕ ಚಕ್ರ ಮತ್ತೊಂದು ಸುತ್ತು ಹೊರಳಿದಾಗ ಲಾಭ ಬಂದೇ ಬರುತ್ತದೆ. ತಮ್ಮ ಒಟ್ಟು ಪೋರ್ಟ್ಫೋಲಿಯೊದಲ್ಲಿ ದೇಶಿ ಫಂಡ್ಗಳ ಜೊತೆಗೆ ಒಂದಿಷ್ಟು ವಿದೇಶಿ ಫಂಡ್ಗಳು ಇರುವುದು ಯಾವಾಗಲೂ ಒಳ್ಳೆಯದು ಎಂದು ಮ್ಯೂಚುವಲ್ ಫಂಡ್ಗಳ ವಿಶ್ಲೇಷಣಾ ಕಂಪನಿ ಮಾರ್ನಿಂಗ್ಸ್ಟಾರ್ನ ಸಲಹೆಗಾರರಾದ ಕೌಸ್ತುಭ್ ಬೆಲಾಪುರ್ಕರ್ ಅಭಿಪ್ರಾಯಪಡುತ್ತಾರೆ.
‘ಈ ಹಂತದಲ್ಲಿ ಎಸ್ಐಪಿ ನಿಲ್ಲಿಸಬಹುದು. ಆದರೆ ಹೂಡಿಕೆ ತೆಗೆಯಬೇಕೆಂದು ನಾವು ಶಿಫಾರಸು ಮಾಡುವುದಿಲ್ಲ. ತುಸು ಕಾಯುವುದು ಒಳ್ಳೆಯದು’ ಎಂದು ಮತ್ತೋರ್ವ ಸಲಹೆಗಾರರಾದ ಸುರೇಶ್ ಶಡಗೋಪನ್ ಸಲಹೆ ಮಾಡುತ್ತಾರೆ. ‘ಮುಂದಿನ ವರ್ಷವೂ ವಿದೇಶಿ ಫಂಡ್ಗಳು ಉತ್ತಮ ಪ್ರತಿಫಲ ನೀಡುತ್ತವೆ ಎಂದು ಹೇಳಲು ಆಗುವುದಿಲ್ಲ. ಅಂತರರಾಷ್ಟ್ರೀಯ ವಿದ್ಯಮಾನಗಳ ರೀತಿಯೇ ಹಾಗಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.
ಇದನ್ನೂ ಓದಿ: Mutual Funds: ಮ್ಯೂಚುವಲ್ ಫಂಡ್; 5 ವರ್ಷಗಳಲ್ಲಿ 50 ಲಕ್ಷ ರಿಟರ್ನ್ಸ್ಗೆ ಎಷ್ಟು ಮೊತ್ತದ ಎಸ್ಐಪಿ ಅಗತ್ಯ? ಇಲ್ಲಿದೆ ಮಾಹಿತಿ
ವಾಣಿಜ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Fri, 20 January 23