Suicide Insurance: ಇನ್ಷೂರೆನ್ಸ್ ಮಾಡಿಸಿದವರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗಬಹುದು; ಈ ಬಗ್ಗೆ ನಿಯಮಗಳು ತಿಳಿದಿರಲಿ

|

Updated on: Apr 10, 2023 | 2:32 PM

Insurance Coverage For Suicide: ಆತ್ಮಹತ್ಯೆ ಮಾಡಿಕೊಂಡರೆ ಇನ್ಷೂರೆನ್ಸ್ ಹಣ ಸಿಕ್ಕೋದಿಲ್ಲ ಎಂದೇ ಹಲವರು ಭಾವಿಸಿದ್ದಾರೆ. ಇದು ಅರ್ಧಸತ್ಯ ಮಾತ್ರ. ಎಲ್ಲಾ ಇನ್ಷೂರೆನ್ಸ್ ಪಾಲಿಸಿಯಲ್ಲದಿದ್ದರೂ ಕೆಲ ಪಾಲಿಸಿಗಳಲ್ಲಿ ಆತ್ಮಹತ್ಯೆಯಿಂದಾದ ಸಾವನ್ನೂ ಕವರ್ ಮಾಡಲಾಗುತ್ತದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Suicide Insurance: ಇನ್ಷೂರೆನ್ಸ್ ಮಾಡಿಸಿದವರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗಬಹುದು; ಈ ಬಗ್ಗೆ ನಿಯಮಗಳು ತಿಳಿದಿರಲಿ
ಆತ್ಮಹತ್ಯೆ ಆಲೋಚನೆ
Follow us on

ಇವತ್ತಿನ ಅನಿಶ್ಚಿತ ಕಾಲಘಟ್ಟದಲ್ಲಿ ಯಾರಿಗೆ ಏನು ಬೇಕಾದರೂ ಆಗಬಹುದು. ರಸ್ತೆಯಲ್ಲಿ ನಡೆದು ಹೋಗುವಾಗ ಅಪಘಾತವಾಗಿ ಸಾವು ಎರಗಬಹುದು. ನಿಂತಲ್ಲೇ ಆರೋಗ್ಯ ಕೈಕೊಟ್ಟು ಕುಸಿದು ಸಾವನ್ನಪ್ಪಬಹುದು. ಹೇಗೆ ಬೇಕಾದರೂ ಜವರಾಯನ (Death) ಆಗಮನವಾಗಬಹುದು. ಹೀಗಾಗಿ, ಜೀವ ವಿಮೆ, ಅಪಘಾತ ವಿಮೆಗಳನ್ನು ಮಾಡಿಸುವುದು ಇಂದಿನ ಬಹಳ ಅಗತ್ಯ. ಕೆಲ ಕಠಿಣ ಸಮಯ ಸಂದರ್ಭಗಳು ಆತ್ಮಹತ್ಯೆಗೂ ದಾರಿ ಮಾಡಿಕೊಡಬಹುದು. ಆತ್ಮಹತ್ಯೆಯಾದರೆ ಇನ್ಷೂರೆನ್ಸ್ ಹಣ ಕ್ಲೈಮ್ (Insurance claim) ಮಾಡಬಹುದೇ ಎಂಬ ಪ್ರಶ್ನೆ ಬಹಳ ಕಾಲದಿಂದ ಇದೆ. ಈ ವಿಚಾರದಲ್ಲಿ ಬಹಳ ಮಂದಿಗೆ ಇನ್ನೂ ಗೊಂದಲ ಇದೆ. ವಾಸ್ತವವಾಗಿ ಇದು ಸಂಕೀರ್ಣ ಸಂಗತಿ ಎಂಬುದು ಹೌದು. ಆತ್ಮಹತ್ಯೆ ಮಾಡಿಕೊಂಡರೆ ಇನ್ಷೂರೆನ್ಸ್ ಹಣ ಸಿಕ್ಕೋದಿಲ್ಲ ಎಂದೇ ಹಲವರು ಭಾವಿಸಿದ್ದಾರೆ. ಇದು ಅರ್ಧಸತ್ಯ ಮಾತ್ರ. ಎಲ್ಲಾ ಇನ್ಷೂರೆನ್ಸ್ ಪಾಲಿಸಿಯಲ್ಲದಿದ್ದರೂ ಕೆಲ ಪಾಲಿಸಿಗಳಲ್ಲಿ ಆತ್ಮಹತ್ಯೆಯಿಂದಾದ ಸಾವನ್ನೂ (Suicidal Death) ಕವರ್ ಮಾಡಲಾಗುತ್ತದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಹೆಚ್ಚಿನ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಆತ್ಮಹತ್ಯೆ ಕವರೇಜ್ ಇರುತ್ತದೆ

ಭಾರತದಲ್ಲಿರುವ ಹೆಚ್ಚಿನ ಲೈಫ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಆತ್ಮಹತ್ಯೆಗೆ ಹಣ ಕ್ಲೈಮ್ ಮಾಡುವ ಸೌಲಭ್ಯ ಇರುತ್ತದೆ. ಆದರೆ, ಮೊದಲೇ ಆತ್ಮಹತ್ಯೆಯ ಯೋಚನೆಯಲ್ಲಿದ್ದು ಪರಿಹಾರ ಸಿಗಲಿ ಎಂದು ಇನ್ಷೂರೆನ್ಸ್ ಮಾಡಿಸಿ ಆ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಯಂತ್ರಿಸಲು ವಿಮಾ ಕಂಪನಿಗಳು ಕೆಲ ನಿಯಮಗಳನ್ನು ಸೇರಿಸುತ್ತವೆ. ಅದೇ ಸೂಸೈಡ್ ಎಕ್ಸ್​ಕ್ಲೂಷನ್ ಕ್ಲಾಸ್ (Suicide Exclusion Clause). ಅಂದರೆ, ನಿರ್ದಿಷ್ಟ ಅವಧಿಯೊಳಗೆ ಆತ್ಮಹತ್ಯೆಯಾದರೆ ಅದಕ್ಕೆ ಇನ್ಷೂರೆನ್ಸ್ ಕಂಪನಿಯಿಂದ ಪರಿಹಾರ ಸಿಗುವುದಿಲ್ಲ. ಈ ಅವಧಿ ಸಾಮಾನ್ಯವಾಗಿ ಎರಡು ವರ್ಷ ಇರುತ್ತದೆ. ಈ ಅವಧಿ ಬಳಿಕ ಅಚಾನಕ್ಕಾಗಿ ಪಾಲಿಸಿದಾರ ಆತ್ಮಹತ್ಯೆ ಮಾಡಿಕೊಂಡರೆ, ಅವರ ವಾರಸುದಾರರು ಇನ್ಷೂರೆನ್ಸ್ ಹಣ ಕ್ಲೈಮ್ ಮಾಡಲು ಅವಕಾಶ ಇರುತ್ತದೆ.

ಯಾವುದೇ ಇನ್ಷೂರೆನ್ಸ್ ಪಾಲಿಸಿ ತೆಗೆದುಕೊಳ್ಳುವ ಮುನ್ನ ನಿಯಮಗಳನ್ನು ತಪ್ಪದೇ ಓದಿ

ಆತ್ಮಹತ್ಯೆ ಮಹಾಪಾಪ. ಕಾನೂನಿನ ದೃಷ್ಟಿಯಲ್ಲಿ ಅಪರಾಧ. ಪೂರ್ವದಲ್ಲೇ ಆತ್ಮಹತ್ಯೆ ಯೋಚನೆ ಮಾಡಿ ಆ ಬಳಿಕ ಇನ್ಷೂರೆನ್ಸ್ ಪಾಲಿಸಿ ಪಡೆಯುವುದು ತಪ್ಪು. ಅಂಥ ಆಲೋಚನೆ ಇದ್ದರೆ ದಯವಿಟ್ಟು ಮನಸ್ಸು ಶುದ್ಧ ಮಾಡಿಕೊಂಡು ಸಂಕಷ್ಟ ಎದುರಿಸುವ ಗಟ್ಟಿತನ ಬೆಳೆಸಿಕೊಳ್ಳಿ. ಆದಾಗ್ಯೂ ಕೆಲ ಸಂದರ್ಭಗಳು ಗಟ್ಟಿ ಮನಸುಗಳನ್ನೂ ಆತ್ಮಹತ್ಯೆ ಆಲೋಚನೆಗೆ ನೂಕಿಬಿಡುತ್ತವೆ. ಅವರನ್ನು ನಂಬಿಕೊಂಡ ಕುಟುಂಬ ಸದಸ್ಯರಿಗೆ ಸಂಕಷ್ಟ ಆಗುತ್ತದೆ. ಹೀಗಾಗಿ, ಇಂಥ ಅನಿರೀಕ್ಷಿತ ಸಂದರ್ಭ ಎದುರಿಸಲು ವಿಮಾ ಪಾಲಿಸಿ ಅಗತ್ಯ ಹೌದು.

ಇದನ್ನೂ ಓದಿPM Kisan: ಪಿಎಂ ಕಿಸಾನ್ 14ನೇ ಕಂತು ಯಾವಾಗ? ಹೊಸ ರೈತರು ನೊಂದಾಯಿಸುವುದು ಹೇಗೆ? ಎಲ್ಲಾ ವಿವರ ಇಲ್ಲಿದೆ

ವಿಮಾ ಪಾಲಿಸಿ ಪಡೆಯುವ ಮುನ್ನ ಅದರಲ್ಲಿರುವ ಎಲ್ಲಾ ನಿಯಮಗಳನ್ನು ತಪ್ಪದೇ ಓದಿ. ಕೆಲ ಪಾಲಿಸಿಗಳಲ್ಲಿ ಆತ್ಮಹತ್ಯೆಯಾದರೆ ಪರಿಹಾರ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಬರೆದಿರುತ್ತದೆ. ಇನ್ನೂ ಕೆಲ ಪಾಲಿಸಿಗಳು ನಿರ್ದಿಷ್ಟ ಅವಧಿಯವರೆಗೆ ಆತ್ಮಹತ್ಯೆಯನ್ನು ಕವರೇಜ್​ನಿಂದ ಹೊರಗಿಡುತ್ತವೆ. ಹೀಗಾಗಿ ನಿಯಮಗಳನ್ನು ಸೂಕ್ಷ್ಮವಾಗಿ ಓದಿ ಅವಲೋಕಿಸಿ.

ಆತ್ಮಹತ್ಯೆ ಕವರೇಜ್ ಇದ್ದರೂ ಪರಿಹಾರ ಕೊಡುವುದು ಇನ್ಷೂರೆನ್ಸ್ ಕಂಪನಿಯ ಪರಾಮರ್ಶೆಗೆ ಬಿಟ್ಟಿದ್ದು

ಒಂದು ವೇಳೆ ಇನ್ಷೂರೆನ್ಸ್ ಪಾಲಿಸಿಯಲ್ಲಿದ್ದಂತೆ ನಿರ್ದಿಷ್ಟ ಅವಧಿ ಬಳಿಕ ಪಾಲಿಸಿದಾರ ಆತ್ಮಹತ್ಯೆ ಮಾಡಿಕೊಂಡಿದ್ದರೆ ವಾರಸುದಾರರಿಗೆ ಪೂರ್ಣ ಪರಿಹಾರ ಹಣ ಸಿಗುತ್ತೆ ಎಂದು ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ಆತ್ಮಹತ್ಯೆ ಎಂಥ ಪರಿಸ್ಥಿತಿಯಲ್ಲಿ ಆಯಿತು ಎಂಬುದನ್ನು ಇನ್ಷೂರೆನ್ಸ್ ಕಂಪನಿ ಪರಾಮರ್ಶಿಸಬಹುದು. ಆತ್ಮಹತ್ಯೆ ಮಾಡಿಕೊಂಡ ಪಾಲಿಸಿದಾರ ಮದ್ಯವ್ಯಸನಿಯೋ, ಡ್ರಗ್ ಅಡಿಕ್ಟ್ ಆಗಿದ್ದರೆ, ಆತನ ಮಾನಸಿಕ ಸ್ಥಿತಿ ತಹಬದಿಯಲ್ಲಿರಲಿಲ್ಲ ಎಂದು ಇನ್ಷೂರೆನ್ಸ್ ಕಂಪನಿ ವಾದಿಸಿ, ಪರಿಹಾರ ಕೊಡಲು ನಿರಾಕರಿಸಬಹುದು.

ಇದನ್ನೂ ಓದಿProfitable Stocks; ಟಾಟಾ ಮೋಟಾರ್ಸ್ ಸೇರಿದಂತೆ ಹಲವು ಷೇರುಗಳಿಗೆ ಬೇಡಿಕೆ; ಹಣ ಹಾಕೋದಾದರೆ ಈ ಷೇರುಗಳು ಗಮನದಲ್ಲಿರಲಿ

ಅಥವಾ ಕಳ್ಳತನ, ದರೋಡೆ ಇತ್ಯಾದಿ ಪಾತಕ ಕೃತ್ಯಗಳನ್ನು ಎಸಗಿ, ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆಗಲೂ ಇನ್ಷೂರೆನ್ಸ್ ಕಂಪನಿ ಪರಿಹಾರ ಕೊಡಲು ಹಿಂದೇಟು ಹಾಕಬಹುದು.

ಆದರೆ, ಯಾವುದೇ ಸಂದರ್ಭದಲ್ಲಿ ಆತ್ಮಹತ್ಯೆಯಾದರೆ ಆ ವ್ಯಕ್ತಿ ಆವರೆಗೂ ಕಟ್ಟಿರುವ ಇನ್ಷೂರೆನ್ಸ್ ಹಣ ಪಾಲಿಸಿಯ ನಾಮಿನಿಯ ಕೈಸೇರುವುದು ಖಚಿತ. ಪೂರ್ಣ ವಿಮಾ ಹಣ ಕೊಡುವುದು ಬಿಡುವುದು ಆತ್ಮಹತ್ಯೆಯ ಸಂದರ್ಭ, ಕಾರಣ ಇತ್ಯಾದಿ ಮೇಲೆ ಅವಲಂಬಿತವಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ