2021-22ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ (IT Returns) ಸಲ್ಲಿಕೆಯ ಅಂತಿಮ ಗಡುವು ಡಿಸೆಂಬರ್ 31ರಂದು ಕೊನೆಗೊಂಡಿದೆ. ಗಡುವಿಗೂ ಮುನ್ನ ಐಟಿಆರ್ ಸಲ್ಲಿಸಲು ಸಾಧ್ಯವಾಗದವರಿಗೆ ಅಪ್ಡೇಟೆಡ್ ಟ್ಯಾಕ್ಸ್ ರಿಟರ್ನ್ಸ್ ಅಥವಾ ಐಟಿಆರ್ ಯು (ITR U) ಸಲ್ಲಿಸಲು ಅವಕಾಶವಿದೆ. ಈ ಅವಕಾಶವನ್ನು 2022ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ನೀಡಿದೆ. ಇದರಂತೆ, ಸಂಬಂಧಿತ ಮೌಲ್ಯಮಾಪನ ವರ್ಷದ ಕೊನೆಯ ದಿನದಿಂದ 24 ತಿಂಗಳವರೆಗೆ ಐಟಿಆರ್ ಯು ಸಲ್ಲಿಸಬಹುದಾಗಿದೆ. ಆದರೆ, ಕೆಲವೊಂದು ನಿಯಮಗಳು ಇದಕ್ಕೆ ಅನ್ವಯವಾಗುತ್ತವೆ. ಅವುಗಳನ್ನು ಸರಿಯಾಗಿ ಪರಿಶೀಲಿಸಿ ಅಪ್ಡೇಟ್ ಮಾಡುವುದು ಉತ್ತಮ. ಪರಿಷ್ಕೃತ ಮತ್ತು ಅಪ್ಡೇಟೆಡ್ ರಿಟರ್ನ್ಸ್ ಸಲ್ಲಿಕೆ ವಿಧಾನಗಳಲ್ಲಿ ವ್ಯತ್ಯಾಸವಿದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.
ಅಪ್ಡೇಟೆಡ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಮೂಲ ಐಟಿಆರ್ ಸಲ್ಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗುವುದಿಲ್ಲ. ತೆರಿಗೆದಾರರು ಹಚ್ಚುವರಿ ಆದಾಯ ಹೊಂದಿದ್ದು, ತೆರಿಗೆ ಪಾವತಿಸುತ್ತಿದ್ದರೆ ಅಪ್ಡೇಟೆಡ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಶೂನ್ಯ ತೆರಿಗೆ ರಿಟರ್ನ್ ಸಲ್ಲಿಸಲು ಈ ವಿಧಾನ ಬಳಕೆಯಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಹೀಗಾಗಿ ಟಿಡಿಎಸ್ ರಿಫಂಡ್ ಕ್ಲೇಮ್ ಮಾಡಲು ನೀವು ಇಚ್ಛಿಸುವಿರಾದರೆ ಐಟಿಆರ್ ಯು ಸಲ್ಲಿಕೆಯಿಂದ ಹೆಚ್ಚಿನ ಪ್ರಯೋಜನವಾಗದು. ಹೆಚ್ಚುವರಿ ತೆರಿಗೆ ಪಾವತಿಗೆ ಅಪ್ಡೇಟೆಡ್ ರಿಟರ್ನ್ಸ್ ಸಲ್ಲಿಸಬಹುದು ಎಂದು ‘ಟ್ಯಾಕ್ಸ್ಬಡ್ಡಿ’ ಸ್ಥಾಪಕ ಸುಜಿತ್ ಬಂಗಾರ್ ತಿಳಿಸಿರುವುದಾಗಿ ‘ಲೈವ್ ಮಿಂಟ್ ಡಾಟ್ಕಾಂ’ ವರದಿ ಮಾಡಿದೆ.
ಪರಿಷ್ಕೃತ ಮತ್ತು ಅಪ್ಡೇಟೆಡ್ ರಿಟರ್ನ್ಸ್ ಸಲ್ಲಿಕೆ ವಿಧಾನಗಳಲ್ಲಿ ವ್ಯತ್ಯಾಸವಿದೆ. ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆಯಲ್ಲಿ ಮೂಲ ಐಟಿಆರ್ ಅನ್ನು ತಿದ್ದುಪಡಿ ಮಾಡಲು ಅವಕಾಶವಿದೆ. ಆದರೆ, ಅಪ್ಡೇಟೆಡ್ನಲ್ಲಿ ಹೆಚ್ಚುವರಿ ತೆರಿಗೆ ಪಾವತಿಗೆ ಸಂಬಂಧಿಸಿದ ರಿಟರ್ನ್ಸ್ ಮಾತ್ರ ಸಲ್ಲಿಸಬಹುದಾಗಿದೆ.
ಅಪ್ಡೇಟೆಡ್ ರಿಟರ್ನ್ಸ್ ಸಲ್ಲಿಕೆಯಿಂದ ಹೆಚ್ಚು ತೆರಿಗೆ ಮತ್ತು ದಂಡಕ್ಕೆ ಕಾರಣವಾಗುತ್ತದೆ ಎಂಬುದು ನೆನಪಿರಲಿ. ಗಡುವು ಮುಗಿದ ನಂತರ 12 ತಿಂಗಳ ಒಳಗೆ ಸಲ್ಲಿಸಿದರೆ ಶೇ 25 ತೆರಿಗೆ, 24 ತಿಂಗಳ ಒಳಗೆ ಸಲ್ಲಿಸಿದರೆ ಶೇ 50ರ ತೆರಿಗೆ ಹಾಗೂ ಅದರ ಬಡ್ಡಿ ಪಾವತಿಸಬೇಕಾಗುತ್ತದೆ. ಇದು ನಿಯಮಿತ ತೆರಿಗೆ ಸ್ಲ್ಯಾಬ್ ಪ್ರಕಾರ ವಿಧಿಸುವ ತೆರಿಗೆಗಿಂತ ಹೆಚ್ಚಾಗಿರುತ್ತದೆ. ಜುಲೈ 31ರ ನಂತರ ಸಲ್ಲಿಸಿದ್ದ ಐಟಿಆರ್ ಅನ್ನು 30 ದಿನಗಳ ಒಳಗಾಗಿ (ಈ ಹಿಂದೆ 120 ದಿನ ಅವಕಾಶವಿತ್ತು) ಪರಿಷ್ಕರಿಸಬೇಕು ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ ತಿಳಿಸಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ