ಬೆಂಗಳೂರು: ಆರ್ಡಿ ಅಥವಾ ರೆಕರಿಂಗ್ ಡೆಪಾಸಿಟ್ (RD- Recurring Deposit) ಸಾಮಾನ್ಯ ಜನರಿಗೆ ಬಹಳ ಉಪಯುಕ್ತವಾಗಿರುವ ಮತ್ತು ಸುಲಭವಾಗಿ ಹೂಡಿಕೆ ಮಾಡಲು ಸಾಧ್ಯವಾಗಿಸುವ ಮಾರ್ಗವಾಗಿದೆ. ಅದರಲ್ಲೂ ಸಂಬಳದಾರರ ಪಾಲಿಗೆ ಇದು ಅತಿಹೆಚ್ಚು ಆದ್ಯತೆಯ ಹೂಡಿಕೆ ಮಾರ್ಗವಾಗಿದೆ. ಬ್ಯಾಂಕ್ ಖಾತೆಯಲ್ಲಿ ಪ್ರತೀ ತಿಂಗಳು ನಮ್ಮಿಷ್ಟದ ನಿರ್ದಿಷ್ಟ ಹಣವನ್ನು ಪ್ರತೀ ತಿಂಗಳೂ ಹೂಡಿಕೆ ಮಾಡಬಹುದು. ಹೆಚ್ಚುಕಡಿಮೆ ಫಿಕ್ಸೆಡ್ ಡೆಪಾಸಿಟ್ ಆಥವಾ ನಿಶ್ಚಿತ ಠೇವಣಿಗೆ ಸಿಗುವಷ್ಟೇ ಬಡ್ಡಿ ಆರ್ಡಿಗೂ ಸಿಗುತ್ತದೆ. ಹಿರಿಯ ನಾಗರಿಕರಿಗೆ ಅತಿಹೆಚ್ಚು ಬಡ್ಡಿ ಸಿಗುತ್ತದೆ.
ಬಹುತೇಕ ಎಲ್ಲಾ ಬ್ಯಾಂಕುಗಳೂ ಉತ್ತಮ ಬಡ್ಡಿ ದರಗಳನ್ನು ನೀಡುತ್ತವೆ. ಎಚ್ಡಿಎಫ್ಸಿ ಬ್ಯಾಂಕ್, ಎಸ್ಬಿಐ, ಪೋಸ್ಟ್ ಆಫೀಸ್, ಪಂಬಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಹಿರಿಯ ನಾಗರಿಕರ ಆರ್ಡಿಗೆ ಅತಿಹೆಚ್ಚು ಬಡ್ಡಿ ಕೊಡಲಾಗುತ್ತದೆ.
ಎಸ್ಬಿಐಯಲ್ಲಿ ಠೇವಣಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಶ್ಚಿತ ಠೇವಣಿಗೆ ನೀಡುವಷ್ಟೇ ಬಡ್ಡಿಯನ್ನು ಆರ್ಡಿಗೂ ನೀಡಲಾಗುತ್ತದೆ. ಹಿರಿಯ ನಾಗರಿಕರು 1-2 ವರ್ಷ ಕಾಲ ಇರಿಸುವ ಆರ್ಡಿಗೆ ಶೇ. 7.3ರಷ್ಟು ಬಡ್ಡಿ ಸಿಗುತ್ತದೆ. 5-10 ವರ್ಷ ಕಾಲದ ಠೇವಣಿಗೆ ಶೇ. 7.5ರಷ್ಟು ಬಡ್ಡಿ ಕೊಡಲಾಗುತ್ತದೆ.
ಇದನ್ನೂ ಓದಿ: India-China: ಚೀನಾದ ಕಳಪೆ ವಸ್ತುಗಳಿಂದ ಭಾರತಕ್ಕೆ ಅನ್ಯಾಯ; ಅರ್ಸಿಇಪಿಗೆ ಸಹಿ ಹಾಕದಿದ್ದುದು ಸರಿ: ಕೇಂದ್ರ ಸಚಿವ
ಎಚ್ಡಿಎಫ್ಸಿ ಆರ್ಡಿ:
ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ ಹಿರಿಯ ನಾಗರಿಕರ ಆರ್ಡಿಗೆ ಶೇ. 7.75ರವರೆಗೂ ಬಡ್ಡಿ ಸಿಗುತ್ತದೆ. 6ರಿಂದ 10 ವರ್ಷ ಅವಧಿಯವರೆಗಿನ ಆರ್ಡಿ ಠೇವಣಿಗಳಿಗೆ ಗರಿಷ್ಠ ಬಡ್ಡಿ ಇದೆ. 24ರಿಂದ 60 ತಿಂಗಳ ಅವಧಿಯ ಆರ್ಡಿಗಳಿಗೆ ಶೇ. 7.5ರಷ್ಟು ಬಡ್ಡಿ ಕೊಡಲಾಗುತ್ತದೆ.
ಪಿಎನ್ಬಿಯಲ್ಲಿ ಶೇ. 7.55 ಬಡ್ಡಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಹಿರಿಯ ನಾಗರಿಕರು ಇರಿಸುವ ರೆಕರಿಂಗ್ ಡೆಪಾಸಿಟ್ಗಳಿಗೆ ಶೇ. 7.55ರಷ್ಟು ಬಡ್ಡಿ ಕೊಡಲಾಗುತ್ತದೆ. ಇದು 2-3 ವರ್ಷಗಳ ಅವಧಿಯ ಠೇವಣಿಗೆ ಸಿಗುವ ಬಡ್ಡಿ. 5ರಿಂದ 10 ವರ್ಷಗಳ ಆರ್ಡಿಗೆ ಶೇ. 7.35ರಷ್ಟು ಬಡ್ಡಿ ಕೊಡಲಾಗುತ್ತದೆ.
ಅಂಚೆ ಕಚೇರಿಯ ಆರ್ಡಿ
ಅಂಚೆ ಕಚೇರಿಯ ನ್ಯಾಷನಲ್ ಸೇವಿಂಗ್ಸ್ ಆರ್ಡಿ ಖಾತೆ ತೆರೆದರೆ ಶೇ. 5.8ರಷ್ಟು ಬಡ್ಡಿ ಸಿಗುತ್ತದೆ. ಆದರೆ, ಇಲ್ಲಿನ ಆರ್ಡಿ ಮೆಚ್ಯೂರ್ ಆಗುವುದು 5 ವರ್ಷಕ್ಕೆ.
ಬ್ಯಾಂಕುಗಳಲ್ಲಿನ ಆರ್ಡಿಗಳನ್ನು ನಿಶ್ಚಿತ ಅವಧಿಯವರೆಗೆ ಮುಂದುವರಿಸಿದರೆ ನಿಶ್ಚಿತ ಬಡ್ಡಿ ದರಗಳು ಅನ್ವಯ ಆಗುತ್ತವೆ. ತುರ್ತಾಗಿ ಹಣ ಬೇಕಿದ್ದು ಆರ್ಡಿಯನ್ನು ಅವಧಿಗೂ ಮುನ್ನವೇ ಖಾತೆ ಮುಚ್ಚಿದರೆ ಬಡ್ಡಿ ಕಡಿಮೆ ಸಿಗುತ್ತದೆ. ಕಟ್ಟಿರುವ ಅಸಲು ಹಣಕ್ಕೆ ತುಸು ಬಡ್ಡಿ ಜಮೆಯಾಗಿ ಹಣ ಕೈಸೇರುತ್ತದೆ.
Published On - 12:27 pm, Sun, 26 February 23