ನೌಕರರ ರಾಜ್ಯ ಇನ್ಷೂರೆನ್ಸ್ ನಿಗಮದಿಂದ ನಡೆಸುವ ಇಎಸ್ಐ ಯೋಜನೆ (ESI Scheme) ಹೆಸರು ಕೇಳಿರಬಹುದು. ಇಪಿಎಸ್ನಂತೆ ಇದು ಕಡಿಮೆ ವೇತನ ವರ್ಗದ ನೌಕರರಿಗೆ ನೀಡಲಾಗುವ ವಿಮಾ ಸೌಲಭ್ಯವಾಗಿದೆ. ಇಎಸ್ಐಸಿ ನಡೆಸುವ ಈ ಸ್ಕೀಮ್ನಲ್ಲಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ವಿಮಾ ಕವರೇಜ್ ಕೊಡಲಾಗುತ್ತದೆ. ಸದಸ್ಯ ನೌಕರರಿಗೆ ಅನಾರೋಗ್ಯ, ತಾಯ್ತನ (Maternity), ಅಂಗವೈಕಲ್ಯಕ್ಕೆ (Disability) ಪರಿಹಾರ ಕೊಡಲಾಗುತ್ತದೆ. ಕೆಲಸ ಮಾಡುವಾಗ ಗಾಯಗೊಂಡು ಸಾವನ್ನಪ್ಪಿದರೆ ಪರಿಹಾರ ಸಿಗುತ್ತದೆ. ನೌಕರರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಸೌಲಭ್ಯವೂ ಇರುತ್ತದೆ.
ದೇಶಾದ್ಯಂತ 1.5 ಕೋಟಿಗೂ ಹೆಚ್ಚು ಇಎಸ್ಐ ಸದಸ್ಯರಿದ್ದಾರೆ. ಪ್ರತೀ ವರ್ಷ 10 ಲಕ್ಷಕ್ಕೂ ಹೆಚ್ಚು ಹೊಸ ಸದಸ್ಯರ ಸೇರ್ಪಡೆ ಆಗುತ್ತಿದೆ. ಒಟ್ಟು ಫಲಾನುಭವಿಗಳ ಸಂಖ್ಯೆ 8 ಕೋಟಿಯಷ್ಟಿರುವುದು ತಿಳಿದುಬಂದಿದೆ.
ಇದು ಸಂಘಟಿತ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಡಿಮೆ ಸಂಬಳದ ನೌಕರರಿಗೆಂದು ರೂಪಿಸಲಾದ ಯೋಜನೆ. 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಎಲ್ಲಾ ಸಂಸ್ಥೆಗಳು ಇಎಸ್ಐ ಯೋಜನೆ ಜಾರಿಗೊಳಿಸುವುದು ಕಡ್ಡಾಯ. ತಿಂಗಳಿಗೆ 21,000 ರೂ ಹಾಗು ಅದಕ್ಕಿಂತ ಕಡಿಮೆ ಸಂಬಳ ಇರುವ ಉದ್ಯೋಗಿಗಳನ್ನು ಇಎಸ್ಐ ಸ್ಕೀಮ್ಗೆ ಸೇರಿಸುವುದು ಆ ಸಂಸ್ಥೆಯ ಹೊಣೆಗಾರಿಕೆ. ಉದ್ಯೋಗಿಯ ಸಂಬಳದ ಶೇ. 3.25ರಷ್ಟು ಹಣವನ್ನು ಸಂಸ್ಥೆ ಹೆಚ್ಚುವರಿಯಾಗಿ ಹಾಕುತ್ತದೆ. ಉದ್ಯೋಗಿಯ ಸಂಬಳದಿಂದ ಶೇ. 0.75ರಷ್ಟು ಹಣ ಇದಕ್ಕೆ ಹೋಗುತ್ತದೆ. ಒಟ್ಟು ಶೇ. 4ರಷ್ಟು ಸಂಬಳವು ಇಎಸ್ಐ ಸ್ಕೀಮ್ಗೆ ಭರ್ತಿಯಾಗುತ್ತಾ ಹೋಗುತ್ತದೆ.
ಇದನ್ನೂ ಓದಿ: Aadhaar VID: ಆಧಾರ್ ವರ್ಚುವಲ್ ಐಡಿ ಪಡೆಯುವುದು ಹೇಗೆ? ಏನಿದು ವರ್ಚುವಲ್ ಐಡಿ? ಹಳೆಯ ವಿಐಡಿ ರಿಟ್ರೀವ್ ಮಾಡುವುದು ಹೇಗೆ?
ಉದ್ಯೋಗಿಯ ಸಂಬಳ 21,000 ರೂ ಒಳಗೆ ಇರುವವರೆಗೂ ಈ ಯೋಜನೆ ಚಾಲೂ ಇರುತ್ತದೆ. ಕೆಲಸ ಬದಲಿಸಿದರೂ ಅದೇ ಇಎಸ್ಐ ನಂಬರ್ ಮುಂದುವರಿಯುತ್ತಿರುತ್ತದೆ. ಆದರೆ ಆ ಸಂಬಳದ ಗಡಿ ದಾಟಿದರೆ ಸ್ಕೀಮ್ ನಿಂತುಹೋಗುತ್ತದೆ.
ಈ ಸ್ಕೀಮ್ನಲ್ಲಿ ಇಎಸ್ಐಸಿ ಸದಸ್ಯರಿಗೆ ವೈದ್ಯಕೀಯ ಕವರೇಜ್, ಮೆಟರ್ನಿಟಿ ಕವರೇಜ್ ಇರುತ್ತದೆ. ಕೆಲಸ ಮಾಡುವಾಗ ಅಂಗ ಊನವಾದರೆ ಅದಕ್ಕೆ ಪರಿಹಾರ ಇರುತ್ತದೆ. ಸದಸ್ಯರ ಕುಟುಂಬಕ್ಕೂ ಮೆಡಿಕಲ್ ಇನ್ಷೂರೆನ್ಸ್ ಸೌಲಭ್ಯ ಇರುತ್ತದೆ.
ಮತ್ತೊಂದು ವಿಶೇಷತೆ ಎಂದರೆ ಇಎಸ್ಐ ಸದಸ್ಯ ಕೆಲಸ ಮಾಡುವಾಗ ಸಾವನ್ನಪ್ಪಿದರೆ ಅವರ ಅವಲಂಬಿತರೊಬ್ಬರಿಗೆ ತಿಂಗಳಿಗೆ ಕಂತುಗಳ ರೂಪದಲ್ಲಿ ಪರಿಹಾರ ಸಿಗುತ್ತಾ ಹೋಗುತ್ತದೆ.
ಸದಸ್ಯ ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ವೆಚ್ಚಕ್ಕೆಂದು 15,000 ರೂ ನೀಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ