ಸರಿಯಾದ ಸಮಯದಲ್ಲಿ ಸರಿಯಾದ ಹಣಕಾಸು ನಿರ್ಧಾರ (Financial Decision) ತೆಗೆದುಕೊಳ್ಳುವುದು ಬಹಳ ಮುಖ್ಯ. ಕೆಲ ಸಂದರ್ಭಗಳು ಖಚಿತ ನಿರ್ಧಾರವನ್ನು ಕಷ್ಟಸಾಧ್ಯವಾಗಿಸುತ್ತವೆ. ಉದಾಹರಣೆಗೆ, ಸಾಲ, ಹೂಡಿಕೆ ಮತ್ತು ಉಳಿತಾಯ ಹಣ ಇವು ಮೂರೂ ಕೂಡ ನಿಮ್ಮಲ್ಲಿ ಇದ್ದಾಗ ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಗೊಂದಲ ಉಂಟಾಗಬಹುದು. ಉದಾಹರಣೆಗೆ, ನಿಮ್ಮಲ್ಲಿ 5 ಲಕ್ಷ ರೂ ಸಾಲ ಕಟ್ಟುವುದು ಬಾಕಿ ಇದೆ. ಇದರ ಜೊತೆಗೆ ನೀವು ಈಕ್ವಿಟಿಯ ಎಸ್ಐಪಿಯಲ್ಲಿ (Equity SIP) ತಿಂಗಳಿಗೆ 10,000 ರೂ ಹೂಡಿಕೆ ಮಾಡುತ್ತಿರುತ್ತೀರಿ. ಇದರ ಜೊತೆಗೆ ನಿಮ್ಮ ಇಪಿಎಫ್ ಖಾತೆಯಲ್ಲಿ 5 ಲಕ್ಷ ರೂ ಸೇರಿರುತ್ತದೆ. ಈಗ ನೀವು ಇಪಿಎಫ್ ಹಣವನ್ನು ತೆಗೆಯಬೇಕಾ? ಅದನ್ನು ತೆಗೆದರೆ ಆ ಹಣವನ್ನು ಸಾಲ ತೀರಿಸಲು ಉಪಯೋಗಿಸಬೇಕಾ? ಅಥವಾ ಎಸ್ಐಪಿ ಹೆಚ್ಚಿಸಬೇಕಾ? ಎಂಬ ಪ್ರಶ್ನೆ ಉದ್ಭವಿಸಬಹುದು.
ನೀವು ತೆಗೆದುಕೊಂಡಿರುವ ಸಾಲಕ್ಕೆ ಎಷ್ಟು ಬಡ್ಡಿ ಎಂಬುದರ ಮೇಲೆ ನಿಮ್ಮ ನಿರ್ಧಾರ ಅವಲಂಬಿತವಾಗಬೇಕು. ಉದಾಹರಣೆಗೆ ನಿಮ್ಮದು ವೈಯಕ್ತಿಕ ಸಾಲವಾಗಿದ್ದರೆ ಅದಕ್ಕೆ ಬಡ್ಡಿ ಶೇ. 14ರಿಂದ ಶೇ. 18ರವರೆಗೂ ಇರುತ್ತದೆ. ನಿಮ್ಮ ಇಪಿಎಫ್ ಖಾತೆಗೆ ಸಿಗುವ ಬಡ್ಡಿ ಶೇ. 8ರ ಅಸುಪಾಸು ಮಾತ್ರವೇ. ಇನ್ನು, ಎಸ್ಐಪಿಯಿಂದ ಸಿಗುವ ರಿಟರ್ನ್ ವರ್ಷಕ್ಕೆ ಶೇ. 12ರಿಂದ 14 ಎಂದು ಭಾವಿಸಬಹುದು. ಇಂಥ ಸಂದರ್ಭದಲ್ಲಿ ನಿಮ್ಮ ಇಪಿಎಫ್ ಖಾತೆಯಿಂದ ಹಣ ಹಿಂಪಡೆದು, ಅದನ್ನು ಸಾಲ ತೀರಿಸಲು ಉಪಯೋಗಿಸುವುದು ಹೆಚ್ಚು ಸೂಕ್ತ.
ಇದನ್ನೂ ಓದಿ: ನಿಮಗೆ ಸಂಪಾದನೆ ಎಷ್ಟೇ ಇರಲಿ, ಹಣ ನಿರ್ವಹಣೆಗೆ ನೆನಪಿರಲಿ 3 ಬಕೆಟ್ ಫಾರ್ಮುಲಾ
ಕೆಲ ಹಣಕಾಸು ತಜ್ಞರು ನೀಡುವ ಸಲಹೆ ಪ್ರಕಾರ, ಇಪಿಎಫ್ನಂತಹ ನಿಧಿಯಲ್ಲಿರುವ ಹಣವನ್ನು ಸಾಲ ತೀರಿಸುವುದಕ್ಕೆ ಉಪಯೋಗಿಸುವುದಕ್ಕಿಂತ ಎಸ್ಐಪಿಯಂತಹ ಸ್ಕೀಮ್ನಲ್ಲಿ ತೊಡಗಿಸಿಕೊಳ್ಳುವುದು ದೀರ್ಘಾವಧಿಗೆ ಬಹಳ ಅನುಕೂಲವಾಗುತ್ತದಂತೆ. ನಿಮ್ಮ ಸಾಲದ ಮೇಲಿನ ಬಡ್ಡಿಗಿಂತ ಶೇ. 4ಕ್ಕಿಂತ ಹೆಚ್ಚು ಮಟ್ಟದಲ್ಲಿ ಎಸ್ಐಪಿಯಿಂದ ರಿಟರ್ನ್ ನಿರೀಕ್ಷಿಸುತ್ತಿದ್ದರೆ ಎಸ್ಐಪಿಗೆ ಹಣ ಹಾಕುವುದು ಒಳ್ಳೆಯ ಐಡಿಯಾ.
ಇಪಿಎಫ್ನಿಂದಲೇ ಹಣ ಹಿಂಪಡೆಯಬೇಕೆಂದೇನೂ ಅಲ್ಲ. ಶೇ. 8ರಷ್ಟು ಬಡ್ಡಿ ಸಿಗುವಂತಹ ಯಾವುದಾದರೂ ಸೇವಿಂಗ್ ಸ್ಕೀಮ್ನಲ್ಲಿ ನಿಮ್ಮ ಹಣ ಇದ್ದರೆ ಅದನ್ನು ಸಾಲ ತೀರಿಸಲು ಉಪಯೋಗಿಸುವುದು ಸಮಂಜಸ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Mon, 4 September 23