Investments: ಕೆವಿಪಿ, ಪಿಪಿಎಫ್, ಎಸ್​ಎಸ್​ವೈ ಇತ್ಯಾದಿ ಇತ್ಯಾದಿ… ಯಾವ ಸರ್ಕಾರಿ ಸ್ಕೀಮ್ ನಿಮ್ಮ ಹೂಡಿಕೆಗೆ ಬೆಸ್ಟ್? ಇಲ್ಲಿದೆ ಒಂದು ಹೋಲಿಕೆ

|

Updated on: Apr 26, 2023 | 1:55 PM

Government Schemes For Good Investments: ಕಿಸಾನ್ ವಿಕಾಸ್ ಪತ್ರ, ಸುಕನ್ಯ ಸಮೃದ್ಧಿ ಯೋಜನೆ, ಪಿಪಿಎಫ್ ಹೀಗೆ ಸರ್ಕಾರದ ಹಲವು ಹೂಡಿಕೆ ಯೋಜನೆಗಳು ಈಗ ಬೇಡಿಕೆಯಲ್ಲಿವೆ. ಈ ಸರ್ಕಾರಿ ಸ್ಕೀಮ್​ಗಳಲ್ಲಿ ಯಾವುದು ಉತ್ತಮ ಎಂದು ನಿರ್ಧರಿಸಲು ಅನುಕೂಲವಾಗುವ ವಿವರ ಇಲ್ಲಿದೆ.

Investments: ಕೆವಿಪಿ, ಪಿಪಿಎಫ್, ಎಸ್​ಎಸ್​ವೈ ಇತ್ಯಾದಿ ಇತ್ಯಾದಿ... ಯಾವ ಸರ್ಕಾರಿ ಸ್ಕೀಮ್ ನಿಮ್ಮ ಹೂಡಿಕೆಗೆ ಬೆಸ್ಟ್? ಇಲ್ಲಿದೆ ಒಂದು ಹೋಲಿಕೆ
ಹೂಡಿಕೆ
Follow us on

ಕೇಂದ್ರ ಸರ್ಕಾರ ನಾನಾ ರೀತಿಯ ಉಳಿತಾಯ ಯೋಜನೆಗಳು, ಹೂಡಿಕೆ ಯೋಜನೆಗಳನ್ನು (Investment Schemes) ಚಾಲನೆಯಲ್ಲಿ ಇಟ್ಟಿದೆ. ವಿವಿಧ ಜನರ ಹಣಕಾಸು ಅಗತ್ಯಗಳಿಗೆ ತಕ್ಕಂತೆ ಹೂಡಿಕೆ ಯೋಜನೆಗಳಿವೆ. ಮಕ್ಕಳ ವಿದ್ಯಾಭ್ಯಾಸ ಮತ್ತಿತರ ಖರ್ಚಿಗೆ ಅನುಕೂಲವಾಗಲೆಂದು ಸ್ಕೀಮ್​ಗಳಿವೆ. ಹೆಣ್ಮಕ್ಕಳಿಗೆಂದು ಯೋಜನೆಗಳಿವೆ. ವೃದ್ಧಾಪ್ಯಕ್ಕೆ ಪಿಂಚಣಿ (Pension Schemes) ಬರಲೆಂದು ಯೋಜನೆಗಳಿವೆ. ಈಗ ಈ ಎಲ್ಲಾ ಯೋಜನೆಗಳಲ್ಲೂ ಹೂಡಿಕೆಗೆ ಆಕರ್ಷಕ ಬಡ್ಡಿ ದರ ನೀಡಲಾಗುತ್ತದೆ. ಜೊತೆಗೆ ತೆರಿಗೆ ಲಾಭ ಕೂಡ ಸಿಗುತ್ತದೆ. ಹೀಗಾಗಿ, ಜನರು ಇಂಥ ಸರ್ಕಾರಿ ಸ್ಕೀಮ್​ಗಳತ್ತ ಹೆಚ್ಚು ಹೆಚ್ಚು ಕಣ್ಣು ಹಾಯಿಸುತ್ತಿದ್ದಾರೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮುನ್ನ ನಿಮ್ಮ ಭವಿಷ್ಯದ ಹಣಕಾಸು ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಎಷ್ಟು ಹಣ ಬೇಕಾಗಬಹುದು, ಎಷ್ಟು ಹಣ ಹೂಡಿಕೆ ಮಾಡಬಹುದು ಎಂಬುದನ್ನು ಲೆಕ್ಕ ಹಾಕುವುದು ಒಳಿತು. ನಿಮ್ಮ ಮಕ್ಕಳ ಶಿಕ್ಷಣ, ಮದುವೆ ಖರ್ಚು, ಬಳಿಕ ವೃದ್ಧಾಪ್ಯಕ್ಕೆ ಪಿಂಚಣಿ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ವರ್ಷಕ್ಕೆ ಎಷ್ಟು ಮೊತ್ತ ಹೂಡಿಕೆ ಮಾಡಬಹುದು ಎಂಬುದನ್ನು ನಿರ್ಧರಿಸಿ. ಸರ್ಕಾರದ ಕೆಲ ಪ್ರಮುಖ ಸ್ಕೀಮ್​ಗಳ ಮಾಹಿತಿ ಈ ಕೆಳಕಂಡಂತಿದೆ.

ಸುಕನ್ಯ ಸಮೃದ್ಧಿ ಯೋಜನೆ ವಿವರ

ಹೆಣ್ಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಕ್ಕೆಂದು ರೂಪಿಸಲಾಗಿರುವುದು ಸುಕನ್ಯಾ ಸಮೃದ್ಧಿ ಯೋಜನೆ. ಇದರಲ್ಲಿ ಅಧಿಕ ಬಡ್ಡಿ ದರ ಹಾಗೂ ತೆರಿಗೆ ಲಾಭಗಳುಂಟು. 10 ವರ್ಷದೊಳಗಿನ ಬಾಲಕಿಯ ಹೆಸರಿನಲ್ಲಿ ಈ ಯೋಜನೆ ಆರಂಭಿಸಬಹುದು. ವರ್ಷಕ್ಕೆ ಕನಿಷ್ಠ 250ರೂನಿಂದ ಗರಿಷ್ಠ 1.50 ಲಕ್ಷದವರೆಗೂ ಹೂಡಿಕೆಗೆ ಅವಕಾಶ ಇದೆ. ಪ್ರೀಮಿಯಮ್ ಪಾವತಿಸುವ ಕನಿಷ್ಠ ಅವಧಿ 15 ವರ್ಷದ್ದಾಗಿದೆ.

ಪಿಪಿಎಫ್ ಯೋಜನೆ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವವಾ ಸಾರ್ವಜನಿಕ ಭವಿಷ್ಯ ನಿಧಿ ದೀರ್ಘಾವಧಿ ಹೂಡಿಕೆಗೆ ಹೇಳಿಮಾಡಿಸಿದ ಒಂದು ಯೋಜನೆ. ಇದೂ ಕೂಡ ಮಕ್ಕಳ ಹೆಸರಿನಲ್ಲಿ ಪಡೆಯಬಹುದು. ಉತ್ತಮ ಬಡ್ಡಿ ನೀಡಲಾಗುತ್ತದೆ. ಇದರ ಬಡ್ಡಿಗೆ ತೆರಿಗೆ ಇರುವುದಿಲ್ಲ. ವರ್ಷಕ್ಕೆ 500 ರೂನಿಂದ 1.5 ಲಕ್ಷ ರೂವರೆಗೂ ಈ ಯೋಜನೆ ಮೇಲೆ ಹೂಡಿಕೆ ಮಾಡಬಹುದು.

ಇದನ್ನೂ ಓದಿ: EPF vs VPF: ವಾಲಂಟ್ರಿ ಪಿಎಫ್ ಎಂದರೇನು? ಇಪಿಎಫ್​ಗೂ ವಿಪಿಎಫ್​ಗೂ ಏನು ವ್ಯತ್ಯಾಸ? ಇದರ ಅನುಕೂಲಗಳೇನು? ವಿವರ ತಿಳಿದಿರಿ

ಮಕ್ಕಳ ಶಿಕ್ಷಣಕ್ಕೆ ಮುಂದಿನ 15 ವರ್ಷದಲ್ಲಿ ನಿಮಗೆ 25 ಲಕ್ಷ ರೂ ಬೇಕೆಂದರೆ ವರ್ಷಕ್ಕೆ 1 ಲಕ್ಷ ಹಣವನ್ನಾದರೂ ನೀವು ಹೂಡಿಕೆ ಮಾಡುತ್ತಾ ಹೋಗಬಹುದು. ಬಡ್ಡಿ ಬೆಳೆದು ಒಟ್ಟು ಹಣ 25 ಲಕ್ಷ ರೂ ದಾಟುತ್ತದೆ.

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆ ಬಗ್ಗೆ

ಎನ್​ಎಸ್​ಸಿ ಅಥವಾ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಒಂದು ನಿಶ್ಚಿತ ಆದಾಯದ ಹೂಡಿಕೆ ಯೋಜನೆ. ಐದು ವರ್ಷದ ಈ ಸ್ಕೀಮ್​ನಲ್ಲಿ ಬಡ್ಡಿ ದರ ನಿಶ್ಚಿತವಾಗಿರುತ್ತದೆ. ಅಂದರೆ ಹೊರಗಿನ ಬಡ್ಡಿ ದರ ಏನೇ ವ್ಯತ್ಯಯವಾದರೂ ಎನ್​​ಎಸ್​ಸಿ ಪಡೆಯುವಾಗ ನಿಶ್ಚಯಿಸಲಾದ ಬಡ್ಡಿ ದರವೇ 5 ವರ್ಷದವರೆಗೂ ಅನ್ವಯ ಆಗುತ್ತದೆ. ಈ ಬಡ್ಡಿ ಹಣಕ್ಕೆ ತೆರಿಗೆ ಕಡಿತ ಆಗುತ್ತದಾದರೂ ಐಟಿ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಬಹುದು.

ಇಎಲ್​ಎಸ್​ಎಸ್ ಯೋಜನೆ

ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್​ಎಸ್​ಎಸ್) ಬಹಳ ಉಪಯುಕ್ತ ಎನಿಸುವ ಯೋಜನೆ. ಮ್ಯೂಚುವಲ್ ಫಂಡ್ ಮೇಲೆ ಹಣ ಹೂಡಿಕೆಗೆ ಅವಕಾಶ ಸಿಗುತ್ತದೆ. 3 ವರ್ಷ ಲಾಕ್ ಇನ್ ಪೀರಿಯಡ್ ಇರುತ್ತದೆ. ಅಂದರೆ ಕನಿಷ್ಠ 3 ವರ್ಷದವರೆಗೂ ನೀವು ಈ ಸ್ಕೀಮ್​ನಿಂದ ಹೊರಬರುವಂತಿಲ್ಲ. ಇದರಲ್ಲಿ ತೆರಿಗೆ ಉಳಿತಾಯದ ಲಾಭವೂ ಉಂಟು.

ಇದನ್ನೂ ಓದಿ: FD Schemes: ಬ್ಯಾಂಕಿಗಿಂತ ಪೋಸ್ಟ್ ಆಫೀಸ್​ನಲ್ಲಿ ಎಫ್​ಡಿ ಇಟ್ಟರೆ ಹೆಚ್ಚು ಅನುಕೂಲ ಹೇಗೆ? ವಿವರ ಇಲ್ಲಿದೆ

ಕಿಸಾನ್ ವಿಕಾಸ್ ಪತ್ರ ಯೋಜನೆ

ಕೆವಿಪಿ ಅಥವಾ ಕಿಸಾನ್ ವಿಕಾಸ್ ಪತ್ರ ಕೂಡ ನಿಶ್ಚಿತ ಆದಾಯದ ಹೂಡಿಕೆ ಯೋಜನೆ. 124 ತಿಂಗಳಲ್ಲಿ, ಅಂದರೆ ಸುಮಾರು 10 ವರ್ಷದಲ್ಲಿ ನೀವು ಹಾಕಿದ ಹಣ ದ್ವಿಗುಣಗೊಳ್ಳುತ್ತದೆ. ಇದರಲ್ಲಿ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ಇರುತ್ತದೆ.

ಎಸ್​ಸಿಎಸ್​ಎಸ್ (SCSS) ಸ್ಕೀಮ್

ಎಸ್​ಸಿಎಸ್​ಎಸ್ ಅಥವಾ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಅಧಿಕ ಬಡ್ಡಿ ಮತ್ತು ತೆರಿಗೆ ಲಾಭಕ್ಕೆ ಹೆಸರಾದ ಯೋಜನೆ. ಇದು ವೃದ್ಧಾಪ್ಯದಲ್ಲಿ ಜನರಿಗೆ ಅನುಕೂಲ ಆಗಲೆಂದು ರೂಪಿಸಲಾಗಿರುವ ಸ್ಕೀಮ್. ಏಕಕಾಲದಲ್ಲಿ ಪ್ರೀಮಿಯಮ್ ಕಟ್ಟಬೇಕು. 30 ಲಕ್ಷ ರೂವರೆಗೂ ಹೂಡಿಕೆಗೆ ಅವಕಾಶ ಇದೆ. ಇದಕ್ಕೆ ಬಡ್ಡಿ ದರ ಶೇ. 8 ಇದೆ. 60 ವರ್ಷ ಮೇಲ್ಪಟ್ಟ ಜನರು ಈ ಯೋಜನೆಯ ಲಾಭ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ