EPF vs VPF: ವಾಲಂಟ್ರಿ ಪಿಎಫ್ ಎಂದರೇನು? ಇಪಿಎಫ್ಗೂ ವಿಪಿಎಫ್ಗೂ ಏನು ವ್ಯತ್ಯಾಸ? ಇದರ ಅನುಕೂಲಗಳೇನು? ವಿವರ ತಿಳಿದಿರಿ
VPF Tax Benefits: ಉದ್ಯೋಗಿಗಳ ಭವಿಷ್ಯ ಭದ್ರತೆಗೆಂದು ಸರ್ಕಾರ ಜಾರಿಗೆ ತಂದಿರುವ ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ನ ಮುಂದುವರಿದ ಭಾಗ ವಿಪಿಎಫ್. ಉದ್ಯೋಗಿ ತನ್ನ ಸಂಬಳದಲ್ಲಿ ಇಪಿಎಫ್ ಜೊತೆಗೆ ವಿಪಿಎಫ್ ಖಾತೆಗೂ ಹೆಚ್ಚುವರಿ ಹಣವನ್ನು ರವಾನೆ ಮಾಡಬಹುದು.
ಸರ್ಕಾರದಿಂದ ಜಾರಿಗೆ ತರಲಾಗಿರುವ ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ (EPF- Employee Provident Fund), ಅಥವಾ ಪಿಎಫ್ ಬಗ್ಗೆ ಗೊತ್ತಿಲ್ಲದವರು ವಿರಳ. ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಮೊತ್ತವನ್ನು ಪಿಎಫ್ ಖಾತೆಗೆ ರವಾನಿಸಲಾಗುತ್ತದೆ. ಈಗಿನ ನಿಯಮದ ಪ್ರಕಾರವಾಗಿ ಉದ್ಯೋಗಿಯ ಸಂಬಳದ ಶೇ. 12ರಷ್ಟು ಹಣ ಪಿಎಫ್ ಅಕೌಂಟ್ಗೆ ಹೋಗುತ್ತದೆ. ಉದ್ಯೋಗಿ ಕೆಲಸ ಮಾಡುವ ಸಂಸ್ಥೆಯಿಂದ ಇಷ್ಟೇ ಮೊತ್ತದ ಹಣ ಪಿಎಫ್ ಖಾತೆ ಹಾಗೂ ಇಪಿಎಸ್ (Employee Pension Scheme) ಖಾತೆಗೆ ಹಂಚಿಕೆ ಆಗುತ್ತದೆ. ಗುತ್ತಿಗೆ ಆಧಾರಿತ ನೌಕರಿಯಲ್ಲಿರುವವರು ಮತ್ತು ಅಸಂಘಟಿತ ವಲಯದಲ್ಲಿರುವ ಕಾರ್ಮಿಕರನ್ನು ಹೊರತಪಡಿಸಿ ಬಹುತೇಕ ಎಲ್ಲಾ ಉದ್ಯೋಗಿಗಳೂ ಪಿಎಫ್ ಯೋಜನೆಗೆ ಜೋಡಿತವಾಗಿದ್ದಾರೆ. ಈಗ ಪಿಎಫ್ ಖಾತೆಗೆ ಉದ್ಯೋಗಿಗಳು ತಮ್ಮ ಸಂಬಳದ ಶೇ. 12ಕ್ಕಿಂತ ಹೆಚ್ಚು ಭಾಗದ ಹಣವನ್ನು ರವಾನಿಸುವ ಅವಕಾಶ ಹೊಂದಿದ್ದಾರೆ. ಅದುವೇ ವಿಪಿಎಫ್, ಅಥವಾ ವಾಲಂಟರಿ ಪ್ರಾವಿಡೆಂಟ್ ಫಂಡ್. ಇದು ಉದ್ಯೋಗಿಯ ಇಚ್ಛೆಯನುಸಾರ ಪಿಎಫ್ ಖಾತೆಗೆ ಅವರ ಸಂಬಳದಿಂದ ಹಣವನ್ನು ತುಂಬಿಸುವ ವ್ಯವಸ್ಥೆ.
ಪಿಎಫ್ ಹಣ ಎಷ್ಟು ಎಂಬ ಲೆಕ್ಕಾಚಾರ ಹೇಗೆ?
ಉದ್ಯೋಗಿಯ ಮೂಲ ವೇತನ (Basic Salary) ಹಾಗೂ ತುಟ್ಟಿಭತ್ಯೆ (DA- Dearness Allowance) ಮೊತ್ತದ ಶೇ. 12ರಷ್ಟು ಹಣವನ್ನು ಸಂಬಳದಿಂದ ಕಡಿತಗೊಳಿಸಿ ಪಿಎಫ್ ಖಾತೆಗೆ ಹಾಕಲಾಗುತ್ತದೆ. ಒಬ್ಬ ಉದ್ಯೋಗಿಯ ಪೂರ್ಣ ಸಂಬಳ 50,000 ರೂ ಇದ್ದು, ಬೇಸಿಕ್ ಸ್ಯಾಲರಿ 20,000 ಇದ್ದರೆ, ಆಗ ಶೇ. 12ರ ಮೊತ್ತ ಎಂದರೆ 2,400 ರೂ ಆಗುತ್ತದೆ. ಉದ್ಯೋಗಿಯ ಸಂಬಳವಾದ 50,000ರೂ ಮೊತ್ತದಲ್ಲಿ ಪಿಎಫ್ ಹಣವಾದ 2,400 ರೂ ಅನ್ನು ಕಡಿತ ಮಾಡಲಾಗುತ್ತದೆ.
ಇದನ್ನೂ ಓದಿ: Green Bond: ಗ್ರೀನ್ ಬಾಂಡ್ ಎಂದರೇನು? ಇದರ ಜನಪ್ರಿಯತೆ ಹೆಚ್ಚುತ್ತಿರುವುದೇಕೆ? ಇದರಿಂದ ಏನು ಅನುಕೂಲ?
ಈಗ ಉದ್ಯೋಗಿಯು ವಿಪಿಎಫ್ ಆಯ್ಕೆಯಲ್ಲಿ ಪಿಎಫ್ ಮೊತ್ತವನ್ನು ಇನ್ನಷ್ಟು ಏರಿಕೆ ಮಾಡಬಹುದು. ಆದರೆ, ಸಂಸ್ಥೆಯ ಕೊಡುಗೆಯಾದ 2,400 ರೂ ಮೊತ್ತದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ವಿಪಿಎಫ್ನಲ್ಲಿ ಎಷ್ಟು ಮೊತ್ತವನ್ನು ಸೇರಿಸುವ ಅವಕಾಶ ಇರುತ್ತದೆ?
ವಾಲಂಟ್ರಿ ಪ್ರಾವಿಡೆಂಟ್ ಫಂಡ್, ಅಥವಾ ವಿಪಿಎಫ್ ನಿಧಿಗೆ ನೀವು ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಮೊತ್ತಕ್ಕೆ ಸಮನಾದ ಹಣವನ್ನು ತುಂಬುವ ಅವಕಾಶ ಇರುತ್ತದೆ. ಅಂದರೆ ಅದು ಗರಿಷ್ಠ ಮೊತ್ತ. ನೀವು 500 ರೂನಿಂದ ನಿಮ್ಮ ಕೊಡುಗೆಯನ್ನು ನಿರ್ಧರಿಸಬಹುದು.
ತೆರಿಗೆ ಲಾಭ ಮತ್ತು ಉಳಿತಾಯ ಲಾಭಕ್ಕೆ ಉತ್ತಮ ಯೋಜನೆ ವಿಪಿಎಫ್
ವಾಲಂಟ್ರಿ ಪಿಎಫ್ ಯೋಜನೆಗೆ ತೆರಿಗೆ ವಿನಾಯಿತಿ ಸೌಲಭ್ಯ ಇದೆ. ನಿಮ್ಮ ಆದಾಯ ತೆರಿಗೆಯನ್ನು ಉಳಿಸಲು ವಿಪಿಎಫ್ ಅನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಅಲ್ಲದೇ ವಿಪಿಎಫ್ ಅನ್ನು ಯಾವಾಗ ಬೇಕಾದರೂ ಹಿಂಪಡೆಯುವ ಅವಕಾಶವೂ ಇರುತ್ತದೆ.
ಇದನ್ನೂ ಓದಿ: FD Schemes: ಬ್ಯಾಂಕಿಗಿಂತ ಪೋಸ್ಟ್ ಆಫೀಸ್ನಲ್ಲಿ ಎಫ್ಡಿ ಇಟ್ಟರೆ ಹೆಚ್ಚು ಅನುಕೂಲ ಹೇಗೆ? ವಿವರ ಇಲ್ಲಿದೆ
ಆಧಾರ್ ಕಾರ್ಡ್ಗೆ ನಿಮ್ಮ ವಿಪಿಎಫ್ ಖಾತೆ ಲಿಂಕ್ ಆಗಿರುವುದರಿಂದ ನೀವು ಕೆಲಸ ಬದಲಿಸಿದರೂ ಇಪಿಎಫ್ ಜೊತೆಗೆ ವಿಪಿಎಫ್ ಖಾತೆಯನ್ನೂ ಸುಲಭವಾಗಿ ವರ್ಗಾಯಿಸಬಹುದು.
ತೆರಿಗೆ ಉಳಿತಾಯದ ಲೆಕ್ಕ ಹಾಕಿ ವಿಪಿಎಫ್ ಮೊತ್ತ ನಿರ್ಧರಿಸಿ
ಈಗ 2.5 ಲಕ್ಷ ರೂವರೆಗೂ ಟ್ಯಾಕ್ಸ್ ಡಿಡಕ್ಷನ್ ಸೌಲಭ್ಯ ಇದೆ. ನಿಮ್ಮ ಇಪಿಎಫ್ ಖಾತೆಗೆ ನಿಮ್ಮ ಸಂಬಳದಲ್ಲಿ ವರ್ಷಕ್ಕೆ 48,000 ರೂ ಹೋಗುತ್ತದೆ ಎಂದಿಟ್ಟುಕೊಂಡರೆ 2 ಲಕ್ಷದಷ್ಟು ಹಣವನ್ನು ವಿಪಿಎಫ್ಗೆ ತುಂಬಿಸಬಹುದಾ ಎಂದು ಯೋಚಿಸಬಹುದು. ನಿಮ್ಮ ಮೂಲವೇತನ 30,000 ರೂ ಇದ್ದರೆ ತಿಂಗಳಿಗೆ ನೀವು 30,000 ರೂ ಅನ್ನು ವಿಪಿಎಫ್ ಖಾತೆಗೆ ತುಂಬಿಸಬಹುದು. ವರ್ಷಕ್ಕೆ 3.6 ಲಕ್ಷದಷ್ಟು ಹಣವನ್ನು ವಿಪಿಎಫ್ಗೆ ಹಾಕಬಹುದು. ಆದರೆ, ನಿಮ್ಮ ತೆರಿಗೆ ಕಡಿತದ ಗರಿಷ್ಠ ಮಿತಿ 2.5 ಲಕ್ಷ ರೂ ಇರುವುದರಿಂದ ನೀವು 2 ಲಕ್ಷದಷ್ಟು ಹಣವನ್ನು ವಿಪಿಎಫ್ ಖಾತೆಗೆ ಹಾಕಬೇಕು. ಅಂದರೆ ತಿಂಗಳಿಗೆ ಸುಮಾರು 16,700 ರೂನಷ್ಟು ಹಣವನ್ನು ವಿಪಿಎಫ್ ಖಾತೆಗೆ ಸೇರಿಸಬಹುದು. ಇದರಿಂದ ಒಟ್ಟು 2.5 ಲಕ್ಷ ರೂ ಮೊತ್ತಕ್ಕೆ ತೆರಿಗೆ ಬೀಳುವುದು ಕಡಿಮೆ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Mon, 24 April 23