ಬಹಳ ಮಂದಿ ಈಗ ಪೋಸ್ಟ್ ಆಫೀಸ್ ಸ್ಕೀಮ್ಗಳಲ್ಲಿ (Post Office Schemes) ತಮ್ಮ ಉಳಿತಾಯದ ಹಣ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಇಮೇಲ್ ಬಂದ ಬಳಿಕ ಅಂಚೆಗಳ ಕತೆ ಮುಗಿಯಿತು, ಅಂಚೆ ಕಚೇರಿಗಳು ಬಂದ್ ಆಗುವುದು ಅನಿವಾರ್ಯ ಎಂದು ಎಲ್ಲರೂ ಭಾವಿಸುತ್ತಿರುವಂತೆಯೇ ಕೇಂದ್ರ ಸರ್ಕಾರ ವಿವಿಧ ಉಳಿತಾಯ ಸ್ಕೀಮ್ಗಳನ್ನು ಪೋಸ್ಟ್ ಆಫೀಸ್ ಹೆಸರಿನಲ್ಲಿ ಅರಂಭಿಸಿತು. ಅದಾದ ಬಳಿಕ ಪೋಸ್ಟ್ ಆಫೀಸ್ ಚರ್ಯೆಯೆ ಬದಲಾಗಿ ಹೋಗಿದೆ. ಅನೇಕ ಅಂಚೆ ಕಚೇರಿಗಳಲ್ಲಿ ಜನರು ಸರದಿಯಲ್ಲಿ ನಿಂತು ಸೇವೆ ಪಡೆಯುವುದನ್ನು ಕಾಣಬಹುದು. ಇದು ಅಂಚೆ ಕಚೇರಿಯ ವಿವಿಧ ಸೇವಿಂಗ್ ಸ್ಕೀಮ್ ಮತ್ತು ಇನ್ವೆಸ್ಟ್ಮೆಂಟ್ ಸ್ಕೀಮ್ಗಳು ಜನಪ್ರಿಯತೆ ಪಡೆಯುತ್ತಿರುವುದಕ್ಕೆ ಸಾಕ್ಷಿ. ಅಂಚೆ ಕಚೇರಿಯ ಹಲವು ಜನಪ್ರಿಯ ಯೋಜನೆಗಳಲ್ಲಿ ಅದರ ಆರ್ಡಿ ಸ್ಕೀಮ್ಗಳೂ ಇವೆ. ಪೋಸ್ಟ್ ಆಫೀಸ್ ಆರ್ಡಿ ಸ್ಕೀಮ್ನಲ್ಲಿ (Post Office RD Scheme) ಇರಿಸುವ ಠೇವಣಿಗಳಿಗೆ ವರ್ಷಕ್ಕೆ ಶೇ. 6.2ರಷ್ಟು ಬಡ್ಡಿ ಕೊಡಲಾಗುತ್ತದೆ. ಈ ಹೊಸ ಬಡ್ಡಿದರ 2023 ಏಪ್ರಿಲ್1ರಿಂದ ಅನ್ವಯಕ್ಕೆ ಬರುತ್ತದೆ.
ಅಂಚೆ ಕಚೇರಿ ಆರ್ಡಿ ಯೋಜನೆ 5 ವರ್ಷದ ಅವಧಿಯದ್ದಾಗಿದೆ. ಆರ್ಡಿ ಖಾತೆ ತೆರೆದು 60 ತಿಂಗಳವರೆಗೆ ಪ್ರತೀ ತಿಂಗಳು ಠೇವಣಿ ಇಡಬಹುದು. ಗ್ರಾಹಕರು ಬಯಸಿದರೆ ಇನ್ನೂ 5 ವರ್ಷ ಇದರ ಅವಧಿ ವಿಸ್ತರಿಸಬಹುದು. ಒಟ್ಟು 10 ವರ್ಷದವರೆಗೆ ಈ ಸ್ಕೀಮ್ನ ಲಾಭ ಪಡೆಯಬಹುದು. ಹೆಚ್ಚುವರಿ 5 ವರ್ಷದ ಅವಧಿ ವಿಸ್ತರಣೆ ಬೇಕೆಂದವರು ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕೋರಬಹುದು. ತಿಂಗಳ ಕಂತು ಕನಿಷ್ಠ 100 ರೂನಿಂದ ಅರಂಭವಾಗುತ್ತದೆ. ಗರಿಷ್ಠ ಕಂತಿನ ಹಣಕ್ಕೆ ಮಿತಿ ಇಲ್ಲ.
ನೀವು ಅಂಚೆ ಕಚೇರಿಯಲ್ಲಿ ಆರ್ಡಿ ಅಕೌಂಟ್ ತೆರೆದು ತಿಂಗಳಿಗೆ 1,000 ರೂ ಕಟ್ಟಿದರೆ 5 ವರ್ಷಕ್ಕೆ ನೀವು 60,000 ರೂ ಹಣ ತುಂಬಿಸಿದಂತಾಗುತ್ತದೆ. ಇದಕ್ಕೆ ಬಡ್ಡಿ ಸೇರಿ ನಿಮ್ಮ ಖಾತೆಯಲ್ಲಿ 70,431 ರೂ ಜಮೆಯಾಗುತ್ತದೆ. ನೀವು 10 ವರ್ಷಕ್ಕೆ ಈ ಸ್ಕೀಮ್ ವಿಸ್ತರಿಸಿದರೆ ಬಡ್ಡಿ ಸೇರಿ ಒಟ್ಟು 1.66 ಲಕ್ಷ ರೂ ಮೊತ್ತ ನಿಮ್ಮ ಆರ್ಡಿ ಖಾತೆಯಲ್ಲಿರುತ್ತದೆ.
ಪೋಸ್ಟ್ ಆಫೀಸ್ನ ಆರ್ಡಿ ಸ್ಕೀಮ್ನಲ್ಲಿ ನೀವು ತಿಂಗಳಿಗೆ 10,000 ರೂ ಕಟ್ಟುತ್ತಾ ಹೋದರೆ 5 ವರ್ಷದಲ್ಲಿ 7.04 ಲಕ್ಷ ರೂ ಜಮೆ ಆಗುತ್ತದೆ. 10 ವರ್ಷಕ್ಕೆ 16.6 ಲಕ್ಷ ರೂ ಸೇರುತ್ತದೆ. ಇದು ಬಡ್ಡಿ ಸೇರಿ ಸಿಗುವ ಮೊತ್ತ.
ಪೋಸ್ಟ್ ಆಫೀಸ್ನ ಆರ್ಡಿ ಸ್ಕೀಮ್ನಲ್ಲಿ ಪ್ರತೀ ತಿಂಗಳು ತಪ್ಪದೇ ಕಂತು ಕಟ್ಟಬೇಕು. ಒಂದು ವೇಳೆ ನೀವು ಕಂತು ಕಟ್ಟಲು ವಿಳಂಬ ಮಾಡಿದರೆ ಅಥವಾ ಕಂತು ಕಟ್ಟಲು ಮರೆತುಹೋದರೆ ಶೇ. 1ರಷ್ಟು ದಂಡ ಕಟ್ಟಬೇಕಾಗುತ್ತದೆ. ಅಂದರೆ ನೀವು ತಿಂಗಳಿಗೆ 1,000 ರೂ ಕಂತು ಕಟ್ಟುತ್ತಿದ್ದರೆ ದಂಡದ ಮೊತ್ತ 10 ರೂ ಇರುತ್ತದೆ.
ನೀವು ಸತತ ನಾಲ್ಕು ತಿಂಗಳು ಕಂತು ಕಟ್ಟದಿದ್ದರೆ ಆರ್ಡಿ ಖಾತೆಯೇ ನಿಷ್ಕ್ರಿಯಗೊಳ್ಳುತ್ತದೆ.
ಆರ್ಡಿ ದರದಲ್ಲಿ ಇಂದು ಪ್ರಮುಖ ಬ್ಯಾಂಕುಗಳು ಉತ್ತಮ ಬಡ್ಡಿ ದರ ನೀಡುತ್ತವೆ. ಎಸ್ಬಿಐನಲ್ಲಿ ಆರ್ಡಿಗೆ ಶೇ. 7.1ರಷ್ಟು ಬಡ್ಡಿ ನೀಡಲಾಗುತ್ತದೆ. ಎಚ್ಡಿಎಫ್ಸಿ ಬ್ಯಾಂಕ್ ಸೇರಿದಂತೆ ಬಹುತೇಕ ಪ್ರಮುಖ ಬ್ಯಾಂಕುಗಳು ತಮ್ಮ ಆರ್ಡಿ ಠೇವಣಿಗಳಿಗೆ ಶೇ. 6.5ಕ್ಕಿಂತ ಹೆಚ್ಚು ಬಡ್ಡಿ ಆಫರ್ ಮಾಡುತ್ತವೆ.
ಪೋಸ್ಟ್ ಆಫೀಸ್ನಲ್ಲಿ ಆರ್ಡಿಗೆ ಸಿಗುವ ಬಡ್ಡಿ ಶೇ. 6.2 ಮಾತ್ರ. ಕನಿಷ್ಠ 5 ವರ್ಷದವರೆಗೆ ಖಾತೆಗೆ ಹಣ ತುಂಬಿಸಬೇಕು. ಬ್ಯಾಂಕ್ನಲ್ಲಾದರೆ ಆರ್ಡಿ ಅವಧಿ 6 ತಿಂಗಳಿಂದ ಆರಂಭವಾಗುತ್ತದೆ.