ಒಬ್ಬ ಉದ್ಯೋಗಿ ನಿವೃತ್ತಿಗೆ ಮುನ್ನ ಇಪಿಎಫ್ ಖಾತೆಯಲ್ಲಿರುವ ಹಣವನ್ನು ಹಿಂಪಡೆಯುವ (EPF Withdrawal) ಅವಕಾಶ ಇದೆಯಾದರೂ ಅದರ ಷರತ್ತು, ನಿಯಮಗಳು ಬಹಳ ಇವೆ. ಅಷ್ಟು ಸುಲಭಕ್ಕೆ ಉದ್ಯೋಗಿ ಭವಿಷ್ಯ ನಿಧಿ ಖಾತೆಯಿಂದ ಹಣ ಹಿಂಪಡೆಯಲು ಆಗುವುದಿಲ್ಲ. ಇಪಿಎಫ್ ಎಂಬುದು ಉದ್ಯೋಗಿಯ ನಿವೃತ್ತಿ ನಂತರದ ಜೀವನ ಸುಲಭವಾಗಿಸಲು ಮಾಡಿರುವ ಉಳಿತಾಯ ಯೋಜನೆ. ಇದರಲ್ಲಿ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಮೊತ್ತ, ಅವರು ಕೆಲಸ ಮಾಡುವ ಸಂಸ್ಥೆಯಿಂದ ನಿರ್ದಿಷ್ಟ ಮೊತ್ತದ ಕೊಡುಗೆ, ಸರ್ಕಾರದಿಂದ ಬಡ್ಡಿ ಇತ್ಯಾದಿ ಹೆಚ್ಚುವರಿ ಹಣ ಪಿಎಫ್ ಖಾತೆಗೆ ಜಮೆ ಆಗುತ್ತಾ ಹೋಗುತ್ತದೆ. ಆದರೆ, ಉದ್ಯೋಗಿ ನಿವೃತ್ತಿಗೆ ಮುನ್ನ ವೆಚ್ಚ ಅನಿವಾರ್ಯ ಎನಿಸುವ ಕೆಲ ತುರ್ತು ಸಂದರ್ಭಗಳು ಬರಬಹುದು. ಅಂತಹ ಸಂದರ್ಭಗಳಲ್ಲಿ ಪಿಎಫ್ ಖಾತೆಯಿಂದ ಉದ್ಯೋಗಿ ಹಣ ಹಿಂಪಡೆಯಲು ಅವಕಾಶ ಇದೆ.
ನಿವೃತ್ತಿಗೆ ಮುನ್ನ ಇಪಿಎಫ್ ಖಾತೆಯಿಂದ ಪೂರ್ತಿ ಹಣ ಹಿಂಪಡೆಯಲು ಆಗುವುದಿಲ್ಲ. ಮುಂಗಡವಾಗಿ ನಿರ್ದಿಷ್ಟ ಮೊತ್ತದ ಹಣ ಪಡೆಯಬಹುದು. ಕೆಲಸ ಕಳೆದುಕೊಂಡು 3 ತಿಂಗಳು ಉದ್ಯೋಗ ಸಿಗದ ಸ್ಥಿತಿಯಲ್ಲಿದ್ದರೆ ಪಿಎಫ್ ಅಡ್ವಾನ್ಸ್ ಪಡೆಯಬಹುದು. ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು, ಮದುವೆ ಖರ್ಚಿಗೆ, ಮಕ್ಕಳ ಶಾಲಾ ಶಿಕ್ಷಣಕ್ಕೆ, ಮನೆಯ ಸಾಲಕ್ಕೆ, ಮನೆ ಕಟ್ಟುವ ವೆಚ್ಚಕ್ಕೆ ಇಪಿಎಫ್ ಖಾತೆಯಿಂದ ಅಡ್ವಾನ್ಸ್ ಹಣ ಹಿಂಪಡೆಯಲು ಸಾಧ್ಯ.
ಇಪಿಎಫ್ಒ ನಿಯಮದ ಪ್ರಕಾರ ವೈದ್ಯಕೀಯ ಕಾರಣಕ್ಕೆ ಇಪಿಎಫ್ಒ ಖಾತೆಯಿಂದ 1 ಲಕ್ಷ ರೂ ಹಣ ವಿತ್ಡ್ರಾ ಮಾಡಬಹುದು. ಜೀವಕ್ಕೆ ಮಾರಕವಾಗುವ ರೋಗದಿಂದ ಆಸ್ಪತ್ರೆಗೆ ದಾಖಲಾಗಬೇಕಾದ ಸ್ಥಿತಿ ಬಂದರೆ ಪಿಎಫ್ ಹಣ ಬಳಸಬಹುದು. ಈಗ ಈ ಕೆಲಸವನ್ನು ತುಸು ಸುಗಮಗೊಳಿಸಲಾಗಿದೆ.
ಇದನ್ನೂ ಓದಿ: Aadhaar: ಆಧಾರ್ ಕಾರ್ಡ್ನಲ್ಲಿ ನಿಮ್ಮ ಫೋಟೋ ಬದಲಿಸಬೇಕಾ? ಇಲ್ಲಿದೆ ವಿಧಾನ
ಮೊದಲಾಗಿದ್ದರೆ ಇಪಿಎಫ್ ಸದಸ್ಯರು ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಎಸ್ಟಿಮೇಟ್ ಪಡೆದು ಅದನ್ನು ಇಪಿಎಫ್ಒಗೆ ನೀಡಬೇಕು. ಆಗ ಮೆಡಿಕಲ್ ಅಡ್ವಾನ್ಸ್ ಪಡೆಯಲು ಸಾಧ್ಯವಾಗುತ್ತಿತ್ತು. ನಂತರ ಈ ನಿಯಮವನ್ನು ತುಸು ಸಡಿಲಿಸಲಾಯಿತು. ವ್ಯಕ್ತಿ ಆಸ್ಪತ್ರೆಗೆ ದಾಖಲಾಗುತ್ತಿದ್ದರೆ ಆಸ್ಪತ್ರೆಯಿಂದ ಎಸ್ಟಿಮೇಟ್ ಪಡೆದು ಸಲ್ಲಿಸುವ ಅಗತ್ಯ ಇಲ್ಲದೇ 1 ಲಕ್ಷ ರೂವರೆಗೂ ಅಡ್ವಾನ್ಸ್ ಹಣ ಪಡೆಯಬಹುದು.
ಪಿಎಫ್ ಸದಸ್ಯರ ಆರೋಗ್ಯ ಗಂಭೀರವಾಗಿದ್ದು ಅವರು ಆಸ್ಪತ್ರೆಗೆ ದಾಖಲಾಗುವುದು ಬಹಳ ಮುಖ್ಯ. ಆಸ್ಪತ್ರೆಗೆ ದಾಖಲಾಗುವುದಕ್ಕೆ ಮುನ್ನ ಆಸ್ಪತ್ರೆಯಿಂದ ಎಸ್ಟಿಮೇಟ್ ಪಡೆದು ಪಿಎಫ್ ಹಣ ವಿತ್ಡ್ರಾ ಮಾಡುವುದು ತರವಲ್ಲ. ಹೀಗಾಗಿ, ಆಸ್ಪತ್ರೆಯಿಂದ ಎಸ್ಟಿಮೇಟ್ ಪಡೆಯುವ ಅಗತ್ಯ ಇಲ್ಲದೇ ಪಿಎಫ್ ಅಡ್ವಾನ್ಸ್ ಪಡೆಯಲು ಅವಕಾಶ ನೀಡಲಾಗಿದೆ. ಆದರೆ, ಸರ್ಕಾರಿ ಅಥವಾ ಪಬ್ಲಿಕ್ ಸೆಕ್ಟರ್ ಆಸ್ಪತ್ರೆಗಳಲ್ಲಿ ದಾಖಲಾದರೆ ಸುಲಭವಾಗಿ ಪಿಎಫ್ ಅಡ್ವಾನ್ಸ್ ಪಡೆಯಬಹುದು. ಖಾಸಗಿ ಆಸ್ಪತ್ರೆಯಾದರೆ ಇಪಿಎಫ್ಒದಿಂದ ಬ್ಯಾಕ್ಗ್ರೌಂಡ್ ವೆರಿಫಿಕೇಶನ್ ನಡೆದು ಬಳಿಕ ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: LIC Premium Income: ಪ್ರೀಮಿಯಮ್ಗಳಿಂದ ಎಲ್ಐಸಿ ಈ ವರ್ಷ ಗಳಿಸಿದ ಆದಾಯ ಎಷ್ಟು? ಖಾಸಗಿ ವಿಮಾ ಕಂಪನಿಗಳದ್ದೆಷ್ಟು?
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಉದ್ಯೋಗಿಯು ಆಸ್ಪತ್ರೆಯ ಮೆಡಿಕಲ್ ಬಿಲ್ಗಳನ್ನು 45 ದಿನಗಳೊಳಗಾಗಿ ಇಪಿಎಫ್ಒಗೆ ಸಲ್ಲಿಸಬೇಕು. ಆಗ ಪಿಎಫ್ ಹಣವನ್ನು ವಿತ್ಡ್ರಾ ಮಾಡಲು ಸಾಧ್ಯವಾಗುತ್ತದೆ.