ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಖುಷಿ ಸುದ್ದಿ. ಲೀವ್ ಎನ್ಕ್ಯಾಷ್ಮೆಂಟ್ಗೆ ತೆರಿಗೆ ವಿಧಿಸುವ (Leave Encashment Tax) ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಬದಲಾವಣೆ ಮಾಡಿದೆ. ರಜೆ ನಗದೀಕರಣಕ್ಕೆ ತೆರಿಗೆ ವಿನಾಯಿತಿಗೆ ಇರುವ ಮಿತಿಯನ್ನು 3 ಲಕ್ಷದಿಂದ 25 ಲಕ್ಷ ರುಪಾಯಿಗೆ ಏರಿಸಲಾಗಿದೆ. ಅಂದರೆ ಲೀವ್ ಎನ್ಕ್ಯಾಷ್ ಮಾಡಿ ಗಳಿಸುವ 25 ಲಕ್ಷ ರೂವರೆಗಿನ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಈ ಹೊಸ ಲೀವ್ ಎನ್ಕ್ಯಾಷ್ಮೆಂಟ್ ತೆರಿಗೆ ವಿನಾಯಿತಿ ಮಿತಿ ನಿಯಮವು 2023 ಏಪ್ರಿಲ್ 1ರಿಂದ ಅನ್ವಯ ಆಗುತ್ತದೆ. ಇದು ಖಾಸಗಿ ಉದ್ಯೋಗಿಗಳಿಗೆ ಮಾತ್ರ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಾರಿ ಬಜೆಟ್ನಲ್ಲಿ ಲೀವ್ ಎನ್ಕ್ಯಾಷ್ಮೆಂಟ್ಗೆ ವಿಧಿಸಲಾಗುವ ತೆರಿಗೆಯಲ್ಲಿ ಬದಲಾವಣೆ ತರುವುದಾಗಿ ಭರವಸೆ ನೀಡಿದ್ದರು. ಮೇ 25ರಂದು ಈ ಸಂಬಂಧ ಸಚಿವಾಲಯವು ನೋಟಿಫಿಕೇಶನ್ ಹೊರಡಿಸಿದೆ.
ಇದನ್ನೂ ಓದಿ: Angel Tax: 21 ದೇಶಗಳಿಗೆ ಏಂಜೆಲ್ ಟ್ಯಾಕ್ಸ್ನಿಂದ ವಿನಾಯಿತಿ ಕೊಟ್ಟ ಭಾರತ; ಏನಿದು ಏಂಜೆಲ್ ತೆರಿಗೆ? ಇಲ್ಲಿದೆ ಡೀಟೇಲ್ಸ್
2002ರಲ್ಲಿ ಅಂದಿನ ಕೇಂದ್ರ ಸರ್ಕಾರವು ಲೀವ್ ಎನ್ಕ್ಯಾಷ್ಮೆಂಟ್ನ ಮೊತ್ತಕ್ಕೆ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂಗೆ ಹೆಚ್ಚಿಸಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಬದಲಾವಣೆ ಮಾಡಲಾಗಿದೆ. 3 ಲಕ್ಷ ರೂ ಇರುವ ವಿನಾಯಿತಿ ಮಿತಿಯನ್ನು 25 ಲಕ್ಷ ರೂಗೆ ಏರಿಸಲಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ಇದು ಮಿತಿ ಹೆಚ್ಚಳವು ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಅನ್ವಯ ಆಗುತ್ತದೆ.
ಸರ್ಕಾರಿ ಉದ್ಯೋಗಿಗಳ ಲೀವ್ ಎನ್ಕ್ಯಾಷ್ಮೆಂಟ್ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಖಾಸಗಿ ಉದ್ಯೋಗಿ ತನ್ನ ವೃತ್ತಿಜೀವನದಲ್ಲಿ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ್ದು, ಅಲ್ಲೆಲ್ಲಾ ಲೀವ್ ಎನ್ಕ್ಯಾಷ್ ಮಾಡಿಕೊಂಡು ಗಳಿಸಿರುವ ಹಣದ ಒಟ್ಟು ಮೊತ್ತವು 30 ಲಕ್ಷ ರೂ ಮೀರುವಂತಿಲ್ಲ. 30 ಲಕ್ಷ ಮೀರಿದರೆ ಹೆಚ್ಚುವರಿ ಮೊತ್ತಕ್ಕೆ ತೆರಿಗೆ ಹಾಕಲಾಗುತ್ತದೆ. ಆದರೆ, ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ಟ್ಯಾಕ್ಸ್ ಡಿಡಕ್ಷನ್ ಮೂಲಕ ಕ್ಲೈಮ್ ಮಾಡಿಕೊಳ್ಳಲು ಸಾಧ್ಯವಿದೆ.
ಇದನ್ನೂ ಓದಿ: FD Rates: ಬಡ್ಡಿ ಮೇಲೆ ಟಿಡಿಎಸ್; ನಿಮ್ಮ ಎಫ್ಡಿ ಹಣಕ್ಕೆ ನೀವಂದುಕೊಂಡಷ್ಟು ಸಿಗಲ್ಲ ರಿಟರ್ನ್ಸ್; ಇಲ್ಲಿದೆ ಡೀಟೇಲ್ಸ್
ಖಾಸಗಿ ಸಂಸ್ಥೆಗಳಲ್ಲಿ ಎನ್ಕ್ಯಾಷ್ ಮಾಡಿಕೊಳ್ಳಲು ಸಾಧ್ಯವಾಗುವುದು ಸಾಮಾನ್ಯವಾಗಿ ಪಿಎಲ್ ಅಥವಾ ಪ್ರಿವಿಲೇಜ್ಡ್ ಲೀವ್ಗೆ ಮಾತ್ರ. ಒಂದು ವರ್ಷದಲ್ಲಿ 10-12 ಪಿಎಲ್ಗಳನ್ನು ನೀಡಲಾಗುತ್ತದೆ. ಇವು ಬಳಕೆ ಆಗದಿದ್ದರೆ ಮುಂದಿನ ವರ್ಷಕ್ಕೆ ಕ್ರೋಢೀಕರಣವಾಗುತ್ತಾ ಹೋಗುತ್ತದೆ. ಉದಾಹರಣೆಗೆ ನಿಮಗೆ ವರ್ಷಕ್ಕೆ 12 ಪಿಎಲ್ ಸಿಗುತ್ತದೆ ಎಂದಿಟ್ಟುಕೊಳ್ಳಿ. 30 ವರ್ಷ ನೀವು ಪಿಎಲ್ ರಜೆ ಪಡೆಯದೆಯೇ ಕೆಲಸ ಮಾಡಿದರೆ ಒಟ್ಟು ಪಿಎಲ್ ಸಂಖ್ಯೆ 360 ಆಗುತ್ತದೆ. ಇದನ್ನು ನಗದೀಕರಣ ಮಾಡಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ಒಂದು ದಿನದ ಸಂಬಳ 3,000 ರೂ ಆಗಿದ್ದರೆ ನಿಮಗೆ ಸಿಗುವ ಹಣ 10.8 ಲಕ್ಷ ರೂ.
ನೀವು 38 ವರ್ಷ ಕೆಲಸ ಮಾಡಿ ನಿವೃತ್ತಿರಾಗುತ್ತೀರಿ. ಒಟ್ಟು ಪಿಎಲ್ 456 ಆಗುತ್ತದೆ. ನಿಮ್ಮ ಒಂದು ದಿನದ ಸಂಬಳ 5,000 ರೂ ಇರುತ್ತದೆ ಎಂದಿಟ್ಟುಕೊಂಡರೆ ರಜೆ ನಗದೀಕರಣದಿಂದ ಬರುವ ಹಣ 22.8 ಲಕ್ಷ ರೂ. ಈ ಹಿನ್ನೆಲೆಯಲ್ಲಿ ಇಂದಿನ ಬಹುತೇಕ ಖಾಸಗಿ ಉದ್ಯೋಗಿಗಳಿಗೆ 25 ಲಕ್ಷ ರೂವರೆಗಿನ ಮಿತಿ ಸಾವಶ್ಯವಾಗಬಹುದು.