ಕೇಂದ್ರ ಹಣಕಾಸು ಸಚಿವಾಲಯ ಕಳೆದ ಬಜೆಟ್ನಲ್ಲಿ ಘೋಷಿಸಿದ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆ (Mahila Samman Savings Certificate) ಒಳ್ಳೆಯ ರಿಟರ್ನ್ ಕೊಡುತ್ತದೆ. ಒಂದೆಡೆ ಇದಕ್ಕೆ ಆಕರ್ಷಕ ಬಡ್ಡಿ ಸಿಗುತ್ತದೆ. ಇನ್ನೊಂದೆಡೆ ಈ ಸ್ಕೀಮ್ನಲ್ಲಿ ಮಾಡುವ ಹೂಡಿಕೆಗೆ ತೆರಿಗೆ ಕಡಿತ ಇರುವುದಿಲ್ಲ. ಈ ಯೋಜನೆಗೆ ಎರಡು ವರ್ಷ ಕಾಲಾವಕಾಶ ಕೊಡಲಾಗಿದೆ. 2025 ಮಾರ್ಚ್ 31ರವರೆಗೂ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್ನಲ್ಲಿ ಹೂಡಿಕೆಗೆ ಅವಕಾಶ ಇದೆ.
ಹೆಸರೇ ಹೇಳುವಂತೆ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಅನ್ನು ಮಹಿಳೆಯರಿಗೆಂದೇ ಮಾಡಲಾಗಿದೆ. ಯಾವುದೇ ವಯಸ್ಸಿನ ಮಹಿಳೆಯರ ಹೆಸರಿನಲ್ಲಿ ಇದನ್ನು ಆರಂಭಿಸಬಹುದು. ಅಪ್ರಾಪ್ತೆಯರಾಗಿದ್ದರೆ ಆಕೆಯ ಪರವಾಗಿ ಪೋಷಕರು ಈ ಯೋಜನೆ ಆರಂಭಿಸಬಹುದು. ಗರಿಷ್ಠ 2 ಲಕ್ಷ ರೂವರೆಗೂ ಹಣವನ್ನು 2 ವರ್ಷದ ಅವಧಿಗೆ ಠೇವಣಿ ಇಡಬಹುದು.
ಬ್ಯಾಂಕ್ಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ 2 ವರ್ಷದ ಠೇವಣಿಗೆ ಶೇ. 6.5ರಿಂದ ಶೇ. 7.5ರವರೆಗೂ ಬಡ್ಡಿ ನೀಡಲಾಗುತ್ತದೆ. ಎಂಎಸ್ಎಸ್ಸಿ ಉಳಿತಾಪತ್ರ ಯೋಜನೆಯಲ್ಲಿ ವರ್ಷಕ್ಕೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ತ್ರೈಮಾಸಿಕಕ್ಕೊಮ್ಮೆ ಬಡ್ಡಿ ಸೇರುತ್ತಾ ಹೋಗುತ್ತದೆ. ಒಟ್ಟಾರೆ ಠೇವಣಿ ಹಣ ವರ್ಷಕ್ಕೆ ಶೇ. 7.7ರಷ್ಟು ಹೆಚ್ಚಾಗುತ್ತದೆ.
ಇದನ್ನೂ ಓದಿ: PM Kisan Update: ಪಿಎಂ ಕಿಸಾನ್ ಅಪ್ಡೇಟ್; 14ನೇ ಕಂತು ಬಿಡುಗಡೆಗೆ ಮುನ್ನ ಈ 3 ಸಂಗತಿ ಖಚಿತಪಡಿಸಿಕೊಳ್ಳಿ
ಬ್ಯಾಂಕ್ ಎಫ್ಡಿಯಲ್ಲಿ ನಿಮ್ಮ ಬಡ್ಡಿ ಆದಾಯ ವರ್ಷಕ್ಕೆ 40,000 ರೂ ದಾಟಿದರೆ ಅದಕ್ಕೆ ಶೇ. 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಇದೇ ನಿಯಮ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್ಗೂ ಅನ್ವಯ ಆಗುತ್ತದೆ. ಆದರೆ, 2 ಲಕ್ಷ ರೂಗೆ ಸಿಗುವ ಬಡ್ಡಿ ವರ್ಷಕ್ಕೆ 40,000 ರೂಗಿಂತ ಕಡಿಮೆ ಇರುವುದರಿಂದ ಯಾವುದೇ ಟಿಡಿಎಸ್ ಕಡಿತ ಇರುವುದಿಲ್ಲ.
ಈ ಸ್ಕೀಮ್ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಆಗಿದ್ದು, 2 ಲಕ್ಷ ರೂ ಗರಿಷ್ಠ ಮಿತಿ ಎಂದು ನಿಗದಿ ಮಾಡಲಾಗಿದೆ. ಒಬ್ಬರು ಒಂದಕ್ಕಿಂತ ಹೆಚ್ಚು ಸರ್ಟಿಫಿಕೇಟ್ಗಳನ್ನು ಹೊಂದಬಹುದು. ಆದರೆ, ಎರಡರ ಮಧ್ಯೆ ಕನಿಷ್ಠ 3 ತಿಂಗಳು ಅಂತರವಾದರೂ ಇರಬೇಕು.
ಕೇಂದ್ರ ಸರ್ಕಾರದ ಈ ಯೋಜನೆಯನ್ನು ಸಾರ್ವಜನಿಕರು ಎಲ್ಲಾ ಸರ್ಕಾರಿ ಬ್ಯಾಂಕುಗಳಲ್ಲಿ ಪಡೆಯಬಹುದು. ಹಾಗೆಯೇ, ಆಯ್ದ ನಾಲ್ಕು ಖಾಸಗಿ ಬ್ಯಾಂಕುಗಳಲ್ಲೂ ಈ ಸ್ಕೀಮ್ ಲಭ್ಯ ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ